ನಾಯಕ ಸಮುದಾಯದ ಅಭಿವೃದ್ಧಿಯಲ್ಲಿ ದಿವಂಗತ ಚಿಕ್ಕಮಾದು ಅವರ ಕೊಡುಗೆ ಅಪಾರ
ಮೈಸೂರು

ನಾಯಕ ಸಮುದಾಯದ ಅಭಿವೃದ್ಧಿಯಲ್ಲಿ ದಿವಂಗತ ಚಿಕ್ಕಮಾದು ಅವರ ಕೊಡುಗೆ ಅಪಾರ

January 9, 2019

ಸಚಿವ ಸಾರಾ ಮಹೇಶ್ ಗುಣಗಾನ
ಕೆ.ಆರ್.ನಗರ: ನಾಯಕ ಸಮುದಾಯದ ಸಂಘಟನೆ, ಹೋರಾಟ ಮತ್ತು ಅಭಿವೃದ್ಧಿಯಲ್ಲಿ ಮಾಜಿ ಶಾಸಕ ದಿ.ಚಿಕ್ಕಮಾದುರವರ ಕೊಡುಗೆ ಅಪಾರ ಎಂದು ರೇಷ್ಮೆ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹೇಳಿದರು.

ಪಟ್ಟಣದ ವಾಲ್ಮೀಕಿ ನಾಯಕ ಸಮುದಾಯ ಭವನದಲ್ಲಿ ನಾಯಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಹುಟ್ಟುವಾಗ ಯಾರು ಹೆಸರು ತರುವುದಿಲ್ಲ. ಆದರೆ ಹೋಗುವಾಗ ನಮ್ಮ ಹೆಸರು ಶಾಶ್ವತವಾಗಿ ಉಳಿಯುವಂತೆ ಕೆಲಸ ಮಾಡಬೇಕು ಎಂದರು.

ನಾನು ಚುನಾವಣಾ ಸಂದರ್ಭವನ್ನು ಹೊರತುಪಡಿಸಿ ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಜನ ನನ್ನನ್ನು ನಿರಂತರವಾಗಿ ಆಯ್ಕೆ ಮಾಡುತ್ತಿದ್ದಾರೆ. ಪ್ರತಿ ಸನ್ಮಾನಗಳು ನಮ್ಮಗೆ ಜವಬ್ಧಾರಿಯನ್ನು ಹೆಚ್ಚಿಸುತ್ತವೆ. ತಾಲೂಕಿನ ಸರ್ವೋತ್ತೋಮುಖ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಸಮಾಜದ ಕಟ್ಟಕಡೆಯ ಸಮುದಾಯಕ್ಕೂ ಅವಕಾಶಗಳು, ಅಧಿಕಾರ ಮತ್ತು ಪ್ರಾತಿನಿಧ್ಯತೆ ನೀಡುವ ಮೂಲಕ ನಿಮ್ಮ ಋಣವನ್ನು ತೀರಿಸುತ್ತೇನೆ ಎಂದು ನುಡಿದರು.

ಮಂತ್ರಿಯಾದಗಿನಿಂದಲೂ ತಾಲೂಕಿನ ಅಭಿವೃದ್ಧಿ ಕಾರ್ಯಗಳ ಜತೆಗೆ ರಾಜ್ಯದಲ್ಲೂ ಸಂಚರಿಸಬೇಕಾಗಿದ್ದು ಮಾಜಿ ಮುಖ್ಯಮಂತ್ರಿ ಸಿದರಾಮಯ್ಯನವರ ಕ್ಷೇತ್ರ ಬಾದಾಮಿ ಅಭಿವೃದ್ಧಿಗೆ ನಮ್ಮ ಪ್ರವಾಸೋದ್ಯಮ ಇಲಾಖೆಯಿಂದ 500 ಕೋಟಿ ಅನುದಾನ ನೀಡಲಾಗುತ್ತಿದೆ. ಪಟ್ಟಣದ ಅಭಿವೃದ್ಧಿಗೆ 10 ಕೊಟಿ ಹಣ ಮಂಜೂರು ಮಾಡಿದ್ದೇನೆ. ಅಲ್ಲದೇ 20 ಎಕರೆ ವಿಸ್ತೀರ್ಣದಲ್ಲಿ, ಪಟ್ಟಣದಲ್ಲಿ ಮಾದರಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವ ಯೋಜನೆಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೆಗೌಡ ಸಮ್ಮತಿ ನೀಡಿದ್ದಾರೆ ಎಂದು ತಿಳಿಸಿದರು.

ತಾಲೂಕಿನ ಹರಂಬಳಿ, ಮಂಡಿಗನಹಳ್ಳಿ ಕೆರೆಗೆ ನೀರು ತುಂಬಿಸಲು 25 ಕೋಟಿ ಅನುದಾನ ಮಂಜೂರಾಗಿದೆ. ಹಳೆ ಎಡತೊರೆಯ ಶ್ರೀ ಅರ್ಕೇಶ್ವರ ಜಾತ್ರೆಯ ಅಂಗವಾಗಿ ಎಡತೊರೆ ಉತ್ಸವವನ್ನು 3 ದಿನಗಳ ಕಾಲ ಅದ್ದೂರಿಯಾಗಿ ಆಚರಿಸುವ ಮೂಲಕ ರಾಜ್ಯದ ವಿವಿಧ ಭಾಗಗಳಿಂದ ಸಂಗೀತಗಾರರನ್ನು ಕರೆಸಿ, ಮನರಂಜನಾ ಕಾರ್ಯಕ್ರಮಗಳನ್ನು ನಡೆಸುವುದರ ಜತೆಗೆ ಹಳೆ ಎಡತೊರೆಯನ್ನು 5.50 ಕೋಟಿ ವೆಚ್ಚದಲ್ಲಿ ಉತ್ತಮ ಪ್ರವಾಸೋದ್ಯಮ ಸ್ಥಳವನ್ನಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು.

ತಿಪ್ಪೂರು ಗ್ರಾಮದ ರಥ ನಿರ್ಮಾಣಕ್ಕೆ ಈಗಾಗಲೆ 15 ಲಕ್ಷ ನೀಡಿದ್ದೇನೆ. ಶಾಸಕನಾಗಿದ್ದಾಗ ವಾಲ್ಮೀಕಿ ಸಮುದಾಯ ಭವನಕ್ಕೆ 50 ಲಕ್ಷ ನೀಡಿದ್ದು, ಮತ್ತೆ 50 ಲಕ್ಷ ಅನುದಾನ ನೀಡುತ್ತೇನೆ. ಸಮುದಾಯ ಭವನದಿಂದ ಬರುವ ಹಣದಿಂದ ಸಮಾಜದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಬಳಕೆ ಮಾಡುವ ಮೂಲಕ ಪ್ರಗತಿ ಹೊಂದಿ ಎಂದು ಕರೆ ನೀಡಿದರು.

ಸಂಸದ ಎಲ್.ಆರ್.ಶಿವರಾಮೇಗೌಡ ಮಾತನಾಡಿ ತಾಲೂಕಿಗೆ ಸಚಿವ ಸಾ.ರಾ.ಮಹೇಶ್‍ರ ಕೊಡುಗೆ ಅಪಾರ. ಈಗಾಗಲ್ಲೇ ಎಲ್ಲಾ ಸಮುದಾಯಗಳಿಗೂ ಸಮುದಾಯ ಭವನಗಳನ್ನು ಕಟ್ಟಿಕೊಟ್ಟಿರುವ ಕೀರ್ತಿ ಇವರಿಗೆ ಸಲ್ಲುತ್ತದೆ. ನಾನು ನನ್ನ ಸಂಸದದ ಅನುದಾನದಿಂದ ಮಾಡಬಹುದಾದ ಅಭಿವೃದ್ಧಿ ಕೆಲಸಗಳನ್ನು ಸಚಿವರೊಂದಿಗೆ ಚರ್ಚಿಸಿ ಮಾಡುವ ಮೂಲಕ ತಾಲೂಕಿನ ಜನತೆ ನನಗೆ ನೀಡಿರುವ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರೇಷ್ಮೆ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಮತ್ತು ಸಂಸದ ಎಲ್.ಆರ್.ಶಿವರಾಮೇಗೌಡ ನಾಯಕ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಹೊರತಂದಿರುವ ದಿನದರ್ಶಿಕೆಯನ್ನು ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಜಿ.ಪಂ.ವಿರೋಧ ಪಕ್ಷದ ನಾಯಕ ಡಿ.ರವಿಶಂಕರ್, ಬಿಜೆಪಿ ಮುಖಂಡ ಅಪ್ಪಣ್ಣ, ತಾಲೂಕು ನಾಯಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ಕೆ.ಸಿದ್ದೇಶ್ವರಪ್ರಸಾದ್, ಪುರಸಭಾ ಉಪಾಧ್ಯಕ್ಷೆ ಪಾರ್ವತಿನಾಗರಾಜು, ತಾ.ಪಂ.ಸದಸ್ಯೆ ಸುನೀತ ದಿನೇಶ್, ಎಪಿಎಂಸಿ ನಿರ್ದೇಶಕಿ ಸಿದ್ದಲಿಂಗಮ್ಮ, ಮುಖಂಡರಾದ ಲಾರಿಪ್ರಕಾಶ್, ಕುಚೇಲ, ಹಂಪಾಪುರ ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Translate »