ಹುಣಸೂರಿನಲ್ಲಿ ಬಾಗಶಃ ಬಂದ್
ಮೈಸೂರು

ಹುಣಸೂರಿನಲ್ಲಿ ಬಾಗಶಃ ಬಂದ್

January 9, 2019

ಹುಣಸೂರು: ಸಿಪಿಐಎಂ, ರೈತ ಸಂಘ ಮತ್ತು ವಿವಿಧ ಕಾರ್ಮಿಕ ಸಂಘಟನೆಗಳು ಭಾರತ್ ಬಂದ್‍ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ಬಂದ್ ವಾತಾವರಣ ಕಂಡು ಬಂದಿತು. ಸಾರಿಗೆ ಬಸ್ ಸಂಚರಿಸದೆ, ಶಾಲಾ ಕಾಲೇಜುಗಳು, ಬ್ಯಾಂಕ್, ಎಲ್‍ಐಸಿ, ಅಂಚೆ ಕಚೇರಿ, ಸಿನಿಮಾ ಮಂದಿರ ಸಹ ಬಂದ್ ಅಗಿದ್ದು, ಭಾರತ್ ಬಂದ್‍ಗೆ ಪೂರ್ಣ ಬೆಂಬಲ ವ್ಯಕ್ತವಾಗಿದೆ ಎಂದೆನಿಸಿತ್ತು.

ಬೆಳಿಗ್ಗೆ 11 ಗಂಟೆ ವೇಳೆಗೆ ಹೋಟೆಲ್ ಮತ್ತು ಅಂಗಡಿಗಳು ಬಾಗಿಲು ತೆರೆದು ವಹಿವಾಟು ಪ್ರಾರಂಭಿಸಿದರೆ, ಕೆಲವು ಸಾರಿಗೆ ಬಸ್‍ಗಳು ಸಂಚಾರ ಪ್ರಾರಂಭಿಸಿದವು. ಕೆಲವು ಅಂಗಡಿಗಳು ಬಾಗಿಲು ಬಂದ್ ಮಾಡಿದರೆ, ಕೆಲವು ಬಾಗಿಲು ತೆರೆದು ವಹಿವಾಟು ನಡೆಸಿದವು ಭಾರತ್ ಬಂದ್ ಬಾಗಶಃ ಯಶ ಕಂಡಿತು.

ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಖಂಡಿಸಿ ಸಿಪಿಐಎಂ, ರೈತ ಸಂಘ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ 2 ದಿನಗಳ ಪ್ರತಿಭಟನೆಗೆ ಕರೆ ನೀಡಿದ್ದರಿಂದ ನೂರಾರು ಅಂಗನವಾಡಿ ಕಾರ್ಯಕರ್ತೆಯರು ನಗರದ ಕಲ್ಕುಣಿಕೆಯಲ್ಲಿ ಜಮಾವಣೆಗೊಂಡು ಕೆಂಪು ಬಾವುಟ ಹಿಡಿದು ಪ್ರತಿಭಟನೆ ನಡೆಸಿದರು. ಕಲ್ಕುಣಿಕೆ ರಂಗನಾಥ ಬಡಾವಣೆಯಿಂದ ಮೆರವಣಿಗೆಯಲ್ಲಿ ನಗರಸಭೆ ಮುಂದೆ ಬಂದು ಕೆಲ ಕಾಲ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯಿಂದಾಗಿ ರಾಷ್ಟ್ರಾದ್ಯಂತ 15 ಕೋಟಿ ಕಾರ್ಮಿಕರಿಗೆ ಅನ್ಯಾಯವಾಗಿದೆ. ಇದನ್ನು ಕೇಂದ್ರ ಸರ್ಕಾದ ಗಮನಕ್ಕೆ ತರಲು ಮುಷ್ಕರ ಅಗತ್ಯವಾಗಿದೆ ಎಂದು ಸಿಪಿಐಎಂ ತಾಲೂಕು ಕಾರ್ಯದರ್ಶಿ ಜಗದೀಶ್ ಸೂರ್ಯ ಹೇಳಿದರು.

ಸಿನಿಮಾ ಮಂದಿರ ಸಿಬ್ಬಂದಿ, ಬ್ಯಾಂಕ್‍ಗಳು, ಜೀವ ವಿಮೆ ನಿಗಮ, ಬಿಎಸ್‍ಎನ್‍ಎಲ್ ಇಲಾಖೆ, ಅಂಚೆ ಇಲಾಖೆ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಪಂಚಾಯಿತಿ ನೌಕರರು, ಬಿಸಿಯೂಟ ನೌಕರರು, ಪ್ಲೇವುಡ್ ಫ್ಯಾಕ್ಟರಿ, ಮಾರಿಸ್ ಫ್ಯಾಕ್ಟರಿ ಕಾರ್ಮಿಕರು, ಕೃಷಿ ಕಾರ್ಮಿಕರು, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸಿಪಿಐಎಂನ ಜಗದೀಶ್ ಸೂರ್ಯ, ಕಲ್ಕುಣಿಕೆ ಬಸವರಾಜು, ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರ್ ಕುಮಾರ್, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ರತ್ನಪುರಿ ಪುಟ್ಟಸ್ವಾಮಿ, ರಾಜ್ಯ ಪ್ರಾಂತ್ಯ ರೈತ ಸಂಘದ ಅಧ್ಯಕ್ಷ ಚಿಕ್ಕಣ್ಣೆಗೌಡ, ದಲಿತ ಹಕ್ಕುಗಳ ಹೋರಾಟ ಸಮಿತಿಯ ಬೆಳ್ತೂರ್ ವೆಂಕಟೇಶ್, ತಂಬಾಕು ರೈತ ಹೋರಾಟ ಸಮಿತಿಯ ತಮ್ಮಡಳ್ಳಿ ಗೋವಿಂದಯ್ಯ, ಪಂಚಾಯಿತಿ ನೌಕರರ ಸಂಘದ ಕಿರಿಜಾಜಿ ಲೋಕೇಶ್, ಅಂಗನವಾಡಿ ಕಾರ್ಯಕರ್ತೆಯರ ತಾಲೂಕು ಅಧ್ಯಕ್ಷೆ ಮಂಗಳಗೌರಿ, ಕಾರ್ಯದರ್ಶಿ ಪುಷ್ಪಲತ, ಬಿಸಿಯೂಟ ನೌಕರರ ಸಂಘದ ಸಾವಿತ್ರಮ್ಮ, ಮಾರಿಸ್ ಕಾರ್ಖಾನೆಯ ಹಂಸ, ಮಲ್ಲಿಕಾರ್ಜುನ್ ಸುರೇಶ್, ಪ್ಲೈವುಡ್ ಪ್ಯಾಕ್ಟರಿಯ ರಾಜು, ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಶ್ರೀಪತಿಗೌಡ, ಜಗದೀಶ್, ದುರ್ಗೇಶ್, ಕುಮಾರ ಮತ್ತು ಮನೋಜ್‍ಕುಮಾರ್, ಹಾಡಿ ಕಾರ್ಮಿಕರ ಸಂಘದ ಮಹದೇವಮ್ಮ ಇನ್ನೂ ಅನೇಕ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದರು.

Translate »