ನಂಜನಗೂಡು ಪೂರ್ಣ ಬಂದ್
ಮೈಸೂರು

ನಂಜನಗೂಡು ಪೂರ್ಣ ಬಂದ್

January 9, 2019

ಕಾರ್ಮಿಕ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನಾ ಮೆರವಣಿಗೆ
ನಂಜನಗೂಡು: ಮೋಟಾರ್ ವಾಹನ ಕಾಯಿದೆ ತಿದ್ದುಪಡಿ ಮಸೂದೆ ವಿರೋಧಿಸಿ ಹಾಗೂ ಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಬಾರತ್ ಬಂದ್ ಹಿನ್ನಲೆಯಲ್ಲಿ ಇಲ್ಲಿನ ಸಿಐಟಿಯು ಮತ್ತು ಎಐಟಿಯುಸಿ ಸಂಘಟನೆಗಳ ಆಶ್ರಯದಲ್ಲಿ ಕಾರ್ಮಿಕರು ಭಾರಿ ಪ್ರತಿಭಟನೆ ನಡೆಸಿದರು.
ಮೊದಲಿಗೆ ಇಲ್ಲಿನ ಕಲ್ಲಹಳ್ಳಿ ಹಾಗೂ ತಾಂಡ್ಯ ಕೈಗಾರಿಕಾ ಪ್ರದೇಶಗಳಿಂದ ಹೊರಟ ಸಾವಿರಾರು ಕಾರ್ಮಿಕರು ನಗರದ ವಿಶ್ವೇಶ್ವರಯ್ಯ ವೃತ್ತದ ಬಳಿ ಜಮಾಯಿಸಿ ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ನಂತರ ನಗರದ ಚಿಂತಾಮಣಿ ಗಣಪತಿ ದೇವಾಲಯದಿಂದ ಹೊರಟ ರ್ಯಾಲಿಯಲ್ಲಿ ಐವತ್ತಕ್ಕೂ ಹೆಚ್ಚು ಕಾರ್ಖಾನೆಗಳ ಕಾರ್ಮಿಕರು ಭಾಗವಹಿಸಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು. ಇದರಿಂದಾಗಿ ನೂರಾರು ವಾಹನಗಳು ಸಾಲು ಗಟ್ಟಿ ನಿಲ್ಲುವಂತಾಯಿತು.

ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದು ಕಾರ್ಪೊರೇಟ್ ಕಂಪನಿಗಳ ಪರವಾಗಿ ಕಾನೂನು ತಿದ್ದುಪಡಿ ತರುತ್ತಿದೆ. ಸಾರಿಗೆ ಕ್ಷೇತ್ರಕ್ಕೆ ಮಾರಕವಾದ ಮೋಟಾರು ವಾಹನ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕು. ಹಣದುಬ್ಬರ ತಡೆಗಟ್ಟಿ ಬೆಲೆ ಏರಿಕೆ ನಿಯಂತ್ರಣ ಮಾಡಬೇಕು. ವಿವಿಧ ಕ್ಷೇತ್ರಗಳ ಕಾರ್ಮಿಕರಿಗೆ ಸಮಾನ ವೇತನ ನೀಡಬೇಕು. ಬ್ಯಾಂಕ್, ವಿಮಾ ವಲಯಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ರದ್ದುಗೊಳಿಸಬೇಕು. ಅಸಂಘಟಿತ ಕಾರ್ಮಿಕ ವಲಯಕ್ಕೆ ಸಾಮಾಜಿಕ ಭದ್ರತೆ ನೀಡಬೇಕು ಎಂಬುದು ಸೇರಿದಂತೆ 12ಕ್ಕೂ ಹೆಚ್ಚು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆ ವೇಳೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲಾಯಿತು. ಕೇಂದ್ರ ಸರಕಾರ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ (ಎಲ್‍ಐಸಿ) ಸೇರಿದಂತೆ ಹಲವು ಕಚೇರಿಗಳು ತೆರೆದಿದ್ದರೂ ನೌಕರರಿಲ್ಲದೇ ಬಿಕೋ ಎನ್ನುತ್ತಿದ್ದವು.

ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಬಸ್ ಸಂಚಾರ ವಿರಳವಾಗಿತ್ತು. ಬಿಜೆಪಿ ಬೆಂಬಲಿಗರು ಅಲ್ಲಲ್ಲಿ ಅಂಗಡಿ ಮುಂಗಟ್ಟು ತೆರೆದು ವ್ಯಾಪಾರ ನಡೆಸಲು ಯತ್ನಿಸಿದಾಗ ಪ್ರತಿಭಟನಾನಿರತ ಕಾರ್ಮಿಕರು ಮುಚ್ಚಿಸಿದರು. ಮೊದಲ ದಿನದ ಬಂದ್ ಶಾಂತಿಯುತವಾಗಿ ನಡೆಯಿತು. ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಶ್ರೀಕಂಠೇಶ್ವರ ದೇಗುಲಕ್ಕೆ ಭಕ್ತರ ಸಂಖ್ಯೆ ಕಡೆ ಇತ್ತು.

ಪ್ರತಿಭಟನೆಯಲ್ಲಿ ಸಿಐಟಿಯುಸಿ ಅಧÀ್ಯಕ್ಷ ಗೋವಿಂದಸ್ವಾಮಿ, ಶಿವಣ್ಣ, ಸುಂದರ, ಇಕ್ಬಾಲ್ ಪಾಷ, ಮಹಾದೇವ, ಸುರೇಶ್, ಅಂಗನವಾಡಿ ತಾಲೂಕು ಅಧÀ್ಯಕ್ಷೆ ಮಂಜುಳ, ಗ್ರಾಪಂ ನೌಕರ ಸಂಘದ ಅಧÀ್ಯಕ್ಷ ನಂಜುಂಡಸ್ವಾಮಿ, ತಾಲೂಕು ಅಧÀ್ಯಕ್ಷೆ ಮಂಜುಳ ಅಕ್ಷರ ದಾಸೋಹದ ಜಿ.ಎಂ.ನೀಲಮ್ಮ, ಜಯಮ್ಮ, ಸೌಭಾಗ್ಯ, ಪ್ರಧಾನ ಕಾರ್ಯದರ್ಶಿ ರತ್ನಮ್ಮ, ಅಂಗನವಾಡಿ ನೌಕರರ ಸಂಘದ ಲೀಲಾವತಮ್ಮ, ನಾಗೇಂದ್ರ, ದೊಡ್ಡಮ್ಮತಾಯಿ, ನೇತ್ರಾವತಿ, ಲಕ್ಷಮ್ಮ, ಮಮತ, ಸುವರ್ಣ, ಸರಸ್ವತಿ, ಎನ್.ಮಹದೇವಮ್ಮ ಮುಂತಾದವರು ಭಾಗವಹಿಸಿದ್ದರು. ಪತ್ರಿಭಟನೆಯ ಹಿನ್ನೆಲೆಯಲ್ಲಿ ಸಿಪಿಐ ಶೇಖರ್, ನಗರ ಪಿಎಸ್‍ಐ ಆನಂದ್, ಸಂದೀಪ್, ಸಂಚಾರಿ ಪೊಲೀಸ್ ಠಾಣೆಯ ಪಿಎಸ್‍ಐ ಶಿವಮ್ಮ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Translate »