ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಬದಲಾವಣೆಗೆ ಕಾಂಗ್ರೆಸ್ ವರಿಷ್ಠರ ಚಿಂತನೆ
ಮೈಸೂರು

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಬದಲಾವಣೆಗೆ ಕಾಂಗ್ರೆಸ್ ವರಿಷ್ಠರ ಚಿಂತನೆ

June 12, 2019

ಬೆಂಗಳೂರು: ರಾಜ್ಯದ ಆಡಳಿತಾರೂಢ ಮೈತ್ರಿ ಪಕ್ಷಗಳ ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಲು ಕಾಂಗ್ರೆಸ್ ವರಿಷ್ಠರು ಮುಂದಾಗಿದ್ದಾರೆ.

ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‍ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ತರುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ.

ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ಮೌನಕ್ಕೆ ಶರಣಾಗಿದ್ದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಕಳೆದ ಭಾನುವಾರ ರಾತ್ರಿ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಹಿನ್ನೆಲೆ ಯಲ್ಲಿ ಈ ಮಹತ್ತರ ಬೆಳವಣಿಗೆ ನಡೆದಿದೆ. ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರ ರಾಜಕೀಯ ಕುಚೇಷ್ಟೆಗಳಿಂದ ಕರ್ನಾಟಕದಲ್ಲಿ ಆಡಳಿತಾರೂಢ ಮೈತ್ರಿ ಪಕ್ಷಗಳು ಜನರಿಂದ ತಿರ ಸ್ಕಾರಕ್ಕೆ ಒಳಗಾಗಬೇಕಾಯಿತು.

ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತುಪಡಿಸಿ ಉಳಿದ ಯಾವುದೇ ರಾಜ್ಯಗಳಲ್ಲಿ ಬಿಜೆಪಿಗೆ ಇಷ್ಟೊಂದು ಬೆಂಬಲ ವ್ಯಕ್ತವಾಗ ಲಿಲ್ಲ. ಆದರೆ ಇಲ್ಲಿ ಯಾರದೋ ವಿರುದ್ಧ ದ್ವೇಷ ರಾಜಕಾರಣಕ್ಕಾಗಿ ಬಿಜೆಪಿಗೆ ಹೆಚ್ಚು ಸ್ಥಾನ ಸಿಗುವಂತೆ ಮಾಡುವ ಮೂಲಕ ಮೈತ್ರಿ ಹಿತವನ್ನು ಬಲಿ ಕೊಡಲಾಯಿತು. ಕಳೆದ ಒಂದು ವರ್ಷ ಸಿದ್ದರಾಮಯ್ಯ ಮತ್ತವರ ಬೆಂಬಲಿಗರ ಒತ್ತಡ ಮತ್ತು ಕಿರುಕುಳದಿಂದಾಗಿ ಸರ್ಕಾರ ನೆಮ್ಮದಿಯಿಂದ ಆಡಳಿತ ನಡೆಸಲು ಸಾಧ್ಯ ವಾಗಲಿಲ್ಲ. ಇದರಿಂದಾಗಿ ಚುನಾವಣೆಯಲ್ಲಿ ಭಾರೀ ಬೆಲೆ ತೆರಬೇಕಾಯಿತು, ಸಮನ್ವಯ ಸಾಧಿಸಬೇಕಾದವರೇ, ಸರ್ಕಾ ರದ ವಿರುದ್ಧ ಧ್ವನಿ ಎತ್ತಿ, ತಮ್ಮ ಪಕ್ಷದವರನ್ನು ಹಿಡಿದಿಡಲಿಲ್ಲ. ಇದೇ ಸ್ಥಿತಿ ಮುಂದುವರೆದರೆ ಸರ್ಕಾರ ವಿಸರ್ಜಿಸಿ ಚುನಾವಣೆಗೆ ತೆರಳಬೇಕಾಗುತ್ತದೆ, ಇಲ್ಲವೇ ಬಿಜೆಪಿಗೆ ನಾವಾಗೇ ಅಧಿಕಾರ ಬಿಟ್ಟು ಕೊಡುವ ಸ್ಥಿತಿ ನಿರ್ಮಾಣ ವಾಗಲಿದೆ. ಇವರ ಒತ್ತಡಗಳಿಂದ ಸರ್ಕಾರ ಮುಂದು ವರೆಯಲು ಸಾಧ್ಯವಿಲ್ಲ, ಸಿದ್ದರಾಮಯ್ಯ ಸ್ಥಾನಕ್ಕೆ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನಖರ್ಗೆ ಅವರನ್ನು ತಂದರೆ ಸುಧಾರಣೆ ಕಾಣಬಹುದು. ಅವರು ಆಡಳಿತದಲ್ಲಿ ಅನುಭವ ಇರುವವರು, ಅವರ ನಾಯಕತ್ವದ ವಿರುದ್ಧ ಕಾಂಗ್ರೆಸ್‍ನ ಯಾವೊಬ್ಬರೂ ಧ್ವನಿ ಎತ್ತುವುದಿಲ್ಲ. ಮೈತ್ರಿ ಸರ್ಕಾರವೂ ಸುಗಮವಾಗಿ ಸಾಗುತ್ತದೆ, ಈ ಬಗ್ಗೆ ನೀವು ದೃಢ ನಿರ್ಧಾರ ಕೈಗೊಳ್ಳಿ ಎಂದು ತಿಳಿಸಿರುವುದಲ್ಲದೆ, ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆಯೂ ಸಮಾಲೋಚನೆ ನಡೆಸಿದರೆಂದು ಉನ್ನತ ಮೂಲಗಳು ತಿಳಿಸಿವೆ.