ಕಾಡಾನೆ ದಾಳಿಗೆ ಜೋಳದ ಬೆಳೆ ನಾಶ: ಸಂಕಷ್ಟದಲ್ಲಿ ರೈತರು
ಚಾಮರಾಜನಗರ

ಕಾಡಾನೆ ದಾಳಿಗೆ ಜೋಳದ ಬೆಳೆ ನಾಶ: ಸಂಕಷ್ಟದಲ್ಲಿ ರೈತರು

July 14, 2018

ಗುಂಡ್ಲುಪೇಟೆ: ತಾಲೂಕಿನ ಕಾಡಂಚಿನ ಗ್ರಾಮಗಳ ರೈತರ ಜಮೀನಿನಲ್ಲಿ ಕಾಡಾನೆಗಳ ದಾಳಿ ನಿರಂತರ ವಾಗಿ ನಡೆಯುತ್ತಿದೆ. ಕಾಡಾನೆ ದಾಳಿ ಯಿಂದ ಬೆಳೆ ನಾಶವಾಗುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ವಿರುದ್ದ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವ ನದ ವ್ಯಾಪ್ತಿಯಲ್ಲಿನ ಕಾಡಂಚಿನ ಗ್ರಾಮ ವಾದ ಹಂಗಳ ಗ್ರಾಮದ ಮಹೇಶ್ ಎಂಬುವರ ಜಮೀನಿಗೆ ದಾಳಿ ಮಾಡಿದ ಕಾಡಾನೆಗಳು ಬೆಳೆದಿದ್ದ ಜೋಳವನ್ನು ತಿಂದು, ತುಳಿದು ನಾಶಪಡಿಸಿವೆ. ಕಳೆದ ಕೆಲವು ದಿನಗಳಿಂದ ಕಾಡಂಚಿನ ದೇವರ ಹಳ್ಳಿ, ಹಂಗಳ, ಗೋಪಾಲಪುರ ಮುಂತಾದ ಗ್ರಾಮಗಳ ಜಮೀನಿನಲ್ಲಿ ಜಿಂಕೆಗಳು, ಕಾಡು ಹಂದಿ ಹಾಗೂ ಆನೆಗಳು ಸೇರಿದಂತೆ ಇನ್ನಿತರ ವನ್ಯಜೀವಿಗಳ ಕಾಟ ಹೆಚ್ಚಾಗಿ ದ್ದರೂ ಅರಣ್ಯ ಇಲಾಖೆಯು ರಾತ್ರಿ ಗಸ್ತು ನಡೆಸದೆ ನಿರ್ಲಕ್ಷಿಸಿದೆ. ರಾತ್ರಿ ಕಾವಲಿಗೆ ಹೊರಡುವ ರೈತರಿಗೆ ಪಟಾಕಿಗಳನ್ನೂ ಕೊಡುತ್ತಿಲ್ಲ. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರವನ್ನೂ ನೀಡುತ್ತಿಲ್ಲ. ಇದರಿಂದ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳು ನಾಶವಾಗುತ್ತಿದ್ದು ತೀವ್ರ ನಷ್ಟ ಅನುಭಸುತ್ತಿದ್ದಾರೆ.

ಆದ್ದರಿಂದ ವನ್ಯಜೀವಿಗಳ ದಾಳಿಯನ್ನು ತಡೆಯಲು ರಾತ್ರಿ ಗಸ್ತು ನಡೆಸಬೇಕು. ತಪ್ಪಿದಲ್ಲಿ ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರೈತ ಮುಖಂಡ ಶಿವಪುರ ಮಹದೇವಪ್ಪ ಎಚ್ಚರಿಕೆ ನೀಡಿದ್ದಾರೆ. ಸ್ಥಳಕ್ಕೆ ಗೋಪಾಲಸ್ವಾಮಿ ಬೆಟ್ಟ ಅರಣ್ಯವಲಯದ ಡಿಆರ್‍ಎಫ್‍ಒ ಅನಿಲ್‍ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.

Translate »