ಕೊರೊನಾ ಕಫ್ರ್ಯೂ ನಿಯಮ  ಉಲ್ಲಂಘನೆ: 3 ಪ್ರಕರಣ ದಾಖಲು
ಮೈಸೂರು

ಕೊರೊನಾ ಕಫ್ರ್ಯೂ ನಿಯಮ ಉಲ್ಲಂಘನೆ: 3 ಪ್ರಕರಣ ದಾಖಲು

April 12, 2021

ಮೈಸೂರು, ಏ.11(ಎಂಟಿವೈ)-2ನೇ ಹಂತದ ಕೊರೊನಾ ಅಲೆ ಮೈಸೂರಲ್ಲಿ ತೀವ್ರ ಸ್ವರೂಪ ಪಡೆಯುತ್ತಿದ್ದು, ಸೋಂಕು ಹರಡುವಿಕೆ ತಡೆಗಟ್ಟಲು ಕೊರೊನಾ ಕಫ್ರ್ಯೂ ಜಾರಿ ಗೊಳಿಸಿರುವ ನಿಯಮ ಉಲ್ಲಂಘಿಸಿದ 3 ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ.

ಸಾಲು ಸಾಲು ರಜೆ ಹಾಗೂ ಯುಗಾದಿ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಹೆಚ್ಚಿನ ಜನಸಂದಣಿ ಉಂಟಾಗಿ ಕೊರೊನಾ ಹರಡುವ ಸಾಧ್ಯತೆ ಹೆಚ್ಚಾಗಿರುವುದನ್ನು ಮನಗಂಡು ರಾಜ್ಯ ಸರ್ಕಾರ ರಾತ್ರಿ 10ರಿಂದ ಮುಂಜಾನೆ 5ರವರೆಗೆ ಕಫ್ರ್ಯೂ ಜಾರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ವಿವಿಧೆಡೆ ಕೊರೊನಾ ಕಫ್ರ್ಯೂ ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಿ ಕಫ್ರ್ಯೂ ನಿಯಮ ಪಾಲಿಸದೇ ಇರುವವರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನ ಲಷ್ಕರ್ ಠಾಣಾ ವ್ಯಾಪ್ತಿಯಲ್ಲಿ ಬಟ್ಟೆ ಅಂಗಡಿಯೊಂದರಲ್ಲಿ ಕಫ್ರ್ಯೂ ನಿಯಮ ಉಲ್ಲಂಘಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿ ಹಾಗೂ ಗ್ರಾಹಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದೇವರಾಜ ಪೊಲೀಸ್ ಠಾಣೆ ವ್ಯಾಪ್ತಿಯ ಹಳೇ ಸಂತೇಪೇಟೆ ರಸ್ತೆಯಲ್ಲಿನ ಅಂಗಡಿಯೊಂದರ ಮೇಲೂ ಪೊಲೀಸರು ದಾಳಿ ನಡೆಸಿ ನಿಯಮ ಉಲ್ಲಂಘನೆ ಮಾಡಿರುವ ಮಳಿಗೆ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊರೊನಾ ಕಫ್ರ್ಯೂ ನಿಯಮ ಉಲ್ಲಂಘಿಸಿ ರಾತ್ರಿ ಹುಟ್ಟುಹಬ್ಬದ ಸಂಭ್ರಮದ ಪಾರ್ಟಿಯಲ್ಲಿ ತೊಡಗಿದ್ದ 11 ಮಂದಿ ವಿರುದ್ಧವೂ ಐಪಿಸಿ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ-2005ರ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೈಸೂರು ನಗರದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದ್ದು, ಪ್ರತೀ ದಿನ 200 ರಿಂದ 250 ಮಂದಿ ಹೊಸದಾಗಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಹೊಸ ಸೋಂಕಿತರಲ್ಲಿ ಶೇ.80ರಷ್ಟು ಮಂದಿ ಮೈಸೂರು ನಗರದ ವಿವಿಧ ಬಡಾವಣೆಗಳ ನಿವಾಸಿಗಳೇ ಆಗಿರುವುದರಿಂದ ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಗೂಡುವುದನ್ನು ನಿರ್ಬಂಧಿಸಲಾಗಿದ್ದು, ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ. ನಿಯಮ ಉಲ್ಲಂಘಿಸುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಂಗಡಿ, ಮಳಿಗೆ, ಹೋಟೆಲ್, ಟೀ-ಅಂಗಡಿ, ಬಟ್ಟೆ ಅಂಗಡಿ ಸೇರಿದಂತೆ ವಿವಿಧೆಡೆ ಮಾಸ್ಕ್ ಧರಿಸಿರುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳದಿದ್ದರೆ ಪ್ರಕರಣ ದಾಖಲಿಸುವುದಾಗಿ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »