ಕೊರೊನಾ ಲಸಿಕೆ ನೀಡಿಕೆಯಲ್ಲಿ ಮೈಸೂರು ಜಿಲ್ಲೆಗೆ ಅಗ್ರಸ್ಥಾನ
ಮೈಸೂರು

ಕೊರೊನಾ ಲಸಿಕೆ ನೀಡಿಕೆಯಲ್ಲಿ ಮೈಸೂರು ಜಿಲ್ಲೆಗೆ ಅಗ್ರಸ್ಥಾನ

April 12, 2021

ಮೈಸೂರು,ಏ.11(ಆರ್‍ಕೆಬಿ)-ಕೊರೊನಾ ಲಸಿಕೆ ನೀಡಿಕೆಯ ಗುರಿ ಸಾಧನೆಯಲ್ಲಿ ಮೈಸೂರು ಜಿಲ್ಲೆಯು ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದಿದೆ. ಜಿಲ್ಲೆಗೆ ಪ್ರತಿ ದಿನ 25,050 ಜನರಿಗೆ ಲಸಿಕೆ ನೀಡುವ ಗುರಿ ಇದೆ. ಇದರಲ್ಲಿ ಜಿಲ್ಲೆಯು ಏ.9 ಮತ್ತು 10ರಂದು ಗುರಿ ಮೀರಿ ಸಾಧನೆ ಮಾಡಿದೆ. ನೀಡಲಾಗಿದ್ದ 25,050 ಗುರಿ ಪೈಕಿ 9ರಂದು 31,459 ಹಾಗೂ 10ರಂದು 31,613 ಜನರಿಗೆ ಲಸಿಕೆ ನೀಡಿ ಶೇ.126ರಷ್ಟು ಗುರಿ ಸಾಧಿಸಿದೆ.
ಅಲ್ಲದೆ ಏ.1ರಿಂದ 10ರವರೆಗೆ ಲಸಿಕೆ ನೀಡಿಕೆಯ ಶೇಖಡಾವಾರು ಪ್ರಮಾಣದಲ್ಲಿ ಮೊದಲ ಸ್ಥಾನದಲ್ಲಿಯೇ ಇರುವುದು ಮೈಸೂರು ಜಿಲ್ಲೆಯ ವಿಶೇಷ. ಮೈಸೂರು ಜಿಲ್ಲೆಯು ಶೇ.126ರಷ್ಟು ಗುರಿ ಸಾಧಿಸಿ ಮೊದಲ ಸ್ಥಾನದಲ್ಲಿದ್ದರೆ, ಬೆಳಗಾವಿ ಶೇ.85, ಬಳ್ಳಾರಿ ಶೇ.84ರಷ್ಟು ಗುರಿ ಸಾಧಿಸಿ, ಕ್ರಮ ವಾಗಿ 2ನೇ ಮತ್ತು 3ನೇ ಸ್ಥಾನದಲ್ಲಿವೆ.

ಏಪ್ರಿಲ್ 11ರಿಂದ 14ರವರೆಗೆ ನಡೆಯುವ ಕೊರೊನಾ `ಲಸಿಕೋತ್ಸವ’ವನ್ನು ಯಶಸ್ವಿ ಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಮನವಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರ ಲಸಿಕೆ ನೀಡುವ ಅಭಿಯಾನವನ್ನು ಮತ್ತಷ್ಟು ತೀವ್ರಗೊಳಿಸಿದೆ. ಇನ್ನೂ ಹೆಚ್ಚು ಜನರಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳ ಲಾಗಿದೆ ಎಂದು ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಎಲ್.ರವಿ `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಮೈಸೂರು ಜಿಲ್ಲಾ ಕ್ಷಯರೋಗ ಅಧಿಕಾರಿ (ಡಿಟಿಒ) ಡಾ.ಮೊಹಮ್ಮದ್ ಶಿರಾಜ್ ಅಹ್ಮದ್ ಅವರ ಪ್ರಕಾರ, ಇದುವರೆಗೆ ಜಿಲ್ಲೆಯ 3,79,000 ಜನರು ಲಸಿಕೆ ನೀಡಲಾಗಿದೆ. ಜಿಲ್ಲೆಯ ಶೇಖಡಾವಾರು ಪ್ರಮಾಣದಲ್ಲಿ ರಾಜ್ಯ ದಲ್ಲಿ ಗುರಿ ಮೀರಿ ಸಾಧನೆ ಮಾಡಿದ್ದು, ಏಪ್ರಿಲ್ ತಿಂಗಳ ಮೊದಲ ಹತ್ತು ದಿನಗಳ ಅಂಕಿ ಅಂಶ ಗಳ ಪ್ರಕಾರ ಲಸಿಕಾ ಅಭಿಯಾನದಲ್ಲಿ ಜಿಲ್ಲೆ ರಾಜ್ಯದಲ್ಲೇ ಅಗ್ರ ಸ್ಥಾನದಲ್ಲಿದೆ ಎಂದರು.

ಏಪ್ರಿಲ್ 1ರಿಂದ 10ರವರೆಗಿನ 10 ದಿನಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 1,68,686 ಜನರಿಗೆ ಲಸಿಕೆ ನೀಡಲಾಗಿದೆ. ಮೈಸೂರು ನಗರ ಪ್ರದೇಶ, ಮೈಸೂರು ಗ್ರಾಮೀಣ ಮತ್ತು ಮೈಸೂರು ಖಾಸಗಿ ಆಸ್ಪತ್ರೆಗಳ ಪೈಕಿ ಮೈಸೂರು ನಗರ ಪ್ರದೇಶದಲ್ಲಿ 27,390 ಜನರು, ಗ್ರಾಮೀಣ ಪ್ರದೇಶದಲ್ಲಿ 14,348 ಹಾಗೂ ಮೈಸೂರು ಖಾಸಗಿ ಆಸ್ಪತ್ರೆಗಳಲ್ಲಿ 9271 ಮಂದಿ ಸೇರಿದಂತೆ ಒಟ್ಟು 51,009 ಮಂದಿಗೆ ಲಸಿಕೆ ನೀಡಲಾಗಿದೆ. ಅಲ್ಲದೆ ತಾಲೂಕುವಾರು ಅಂಕಿ ಅಂಶಗಳ ಪ್ರಕಾರ ತಿ.ನರಸೀಪುರ ತಾಲೂಕು-20,904, ನಂಜನಗೂಡು- 22,832, ಹುಣಸೂರು ತಾಲೂಕು-20,904, ಹೆಚ್.ಡಿ.ಕೋಟೆ ತಾಲೂಕು-17,102, ಪಿರಿಯಾಪಟ್ಟಣ ತಾಲೂಕು-16,495, ಕೆ.ಆರ್.ನಗರ ತಾಲೂಕು-19,440 ಜನರಿಗೆ ಲಸಿಕೆ ನೀಡಲಾಗಿದೆ ಎಂದು ಅವರು ವಿವರಿಸಿದರು.

Translate »