ಮೈಸೂರಲ್ಲಿ 15 ದಿನದೊಳಗಾಗಿ 3 ಲಕ್ಷ ಮಂದಿಗೆ  ಲಸಿಕೆ ನೀಡುವ ಗುರಿ: ಡಿಸಿ ರೋಹಿಣಿ ಸಿಂಧೂರಿ
ಮೈಸೂರು

ಮೈಸೂರಲ್ಲಿ 15 ದಿನದೊಳಗಾಗಿ 3 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ: ಡಿಸಿ ರೋಹಿಣಿ ಸಿಂಧೂರಿ

April 6, 2021

ಮೈಸೂರು, ಏ.5- ಮೈಸೂರು ಜಿಲ್ಲೆ ಹಾಗೂ ನಗರದಲ್ಲಿ ಕೋವಿಡ್-19 2ನೇ ಅಲೆ ಶುರುವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಮಹಾನ್ ಸಂಸ್ಥೆಯ ಖಾಸಗಿ ಆಸ್ಪತ್ರೆಯ ವತಿಯಿಂದ ಮೈಸೂರು ನಗರದಲ್ಲಿ 15 ದಿನದೊಳಗಾಗಿ 3 ಲಕ್ಷ ಮಂದಿಗೆ ಲಸಿಕೆ ನೀಡಬೇಕೆಂಬ ಗುರಿ ಇದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಿಳಿಸಿದರು.

ಮೈಸೂರಿನ ಹೆಬ್ಬಾಳ್‍ನÀಲ್ಲಿರುವ ಆಶಾಕಿರಣ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ ಮಾತನಾಡಿದ ಅವರು, ನಗರದ 65 ವಾರ್ಡ್‍ಗಳಲ್ಲಿ ಮಹಾನ್ ಗ್ರೂಪ್ ಖಾಸಗಿ ಆಸ್ಪತ್ರೆಯವರು ನಮ್ಮ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ನೀಡಲು ಮುಂದಾಗಿದ್ದಾರೆ. ಈಗಾಗಲೇ 25ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳು ಲಸಿಕೆ ನೀಡಲು ಮುಂದೆ ಬಂದಿದ್ದು, ಒಂದು ವಾರದಲ್ಲಿ 50 ಖಾಸಗಿ ಆಸ್ಪತ್ರೆಗಳು ಸೇರಲಿವೆ. ಖಾಸಗಿ ಆಸ್ಪತ್ರೆಯವರು ಜನರಿಗೆ ಉಚಿತ ವಾಗಿ ಲಸಿಕೆ ನೀಡಲು ತಾವಾಗಿಯೇ ಮುಂದೆ ಬರು ತ್ತಿರುವುದು ಶ್ಲಾಘನೀಯ ಎಂದರು.
ಮೈಸೂರು ನಗರದಲ್ಲಿ ಕಳೆದ ಒಂದು ವಾರದಿಂದ ಕೊರೊನಾ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಹೆಚ್ಚಿನ ಜನರು ಲಸಿಕೆ ಪಡೆದುಕೊಂಡರೆ ಸೋಂಕು ತಗುಲುವ ಸಂಭವ ಕಡಿಮೆ ಇರುತ್ತದೆ. ಮೈಸೂರು ಜಿಲ್ಲೆಯಲ್ಲಿ 8 ಲಕ್ಷಕ್ಕೂ ಅಧಿಕ ಮಂದಿ 45 ವರ್ಷಕ್ಕೂ ಮೇಲ್ಪಟ್ಟವರಿದ್ದು, ಮೊದಲ ಹಂತದಲ್ಲಿ 2 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಈಗಾಗಲೇ 53 ಲಸಿಕೆ ಕೇಂದ್ರಗಳನ್ನು ವಿವಿಧ ವಾರ್ಡ್ ಗಳಲ್ಲಿ ತೆರೆದಿದ್ದು, ಮುಂದಿನ ದಿನಗಳಲ್ಲಿ ಲಸಿಕೆ ಕೇಂದ್ರ ಗಳನ್ನು ಹೆಚ್ಚಾಗಿ ತೆರೆಯುವ ಹಿನ್ನೆಲೆ ಲಸಿಕೆ ಪಡೆಯಲು ಅರ್ಹರಿರುವವರು ಹತ್ತಿರವಿರುವ ಕೇಂದ್ರಗಳಿಗೆ ತೆರಳಿ ಲಸಿಕೆ ಪಡೆದುಕೊಳ್ಳಲು ಹೇಳಿದರು.

ಮಾರುಕಟ್ಟೆ ಹಾಗೂ ಸಿನಿಮಾ ಮಂದಿರಗಳಲ್ಲಿ ಜನರು ಗುಂಪಾಗಿ ಸೇರುತ್ತಿದ್ದು, ಕೋವಿಡ್-19 ಮಾರ್ಗ ಸೂಚಿಯ ಪ್ರಕಾರ ಮಾರುಕಟ್ಟೆಗಳನ್ನು ಹಿಂದಿನಂತೆಯೇ ವಿಕೇಂದ್ರೀಕರಣ ಮಾಡಲು ಸೂಚಿಸಲಾಗಿದೆ. ಸರ್ಕಾರದ ಆದೇಶದಂತೆ ಏಪ್ರಿಲ್ 7ರ ನಂತರ ಸಿನಿಮಾ ಮಂದಿರ ಗಳಲ್ಲಿ ಶೇ.50ರಷ್ಟು ಭರ್ತಿಗೆ ಅವಕಾಶ ನೀಡಲಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್, ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಸಿರಾಜ್, ಕೋವಿಡ್ ಲಸಿಕೆಯ ನೋಡೆಲ್ ಅಧಿಕಾರಿ ಡಾ.ಎಲ್.ರವಿ ಸೇರಿದಂತೆ ಇತರರು ಹಾಜರಿದ್ದರು.

Translate »