ಇಂದಿನಿಂದ ಪಾಲಿಕೆ ಸಿಬ್ಬಂದಿಗೆ ಸಾಮೂಹಿಕ  ಆರ್‍ಟಿ-ಪಿಸಿಆರ್ ಪರೀಕ್ಷೆ ಆರಂಭ
ಮೈಸೂರು

ಇಂದಿನಿಂದ ಪಾಲಿಕೆ ಸಿಬ್ಬಂದಿಗೆ ಸಾಮೂಹಿಕ ಆರ್‍ಟಿ-ಪಿಸಿಆರ್ ಪರೀಕ್ಷೆ ಆರಂಭ

April 5, 2021

ಮೈಸೂರು, ಏ.4(ಎಂಟಿವೈ)-ಕೊರೊನಾ ಎರಡನೇ ಹಂತದ ಅಲೆಯಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿ ರುವ ಹಿನ್ನೆಲೆಯಲ್ಲಿ ಹಾಗೂ ಕಾರ್ಪೊರೇಟರ್ ಸೇರಿದಂತೆ ಪಾಲಿಕೆಯ ಕೆಲವು ಸಿಬ್ಬಂದಿಗಳಿಗೆ ಕೊರೊನಾ ಸೋಂಕು ಕಾಣಿಸಿ ಕೊಂಡಿರುವುದರಿಂದ ಪಾಲಿಕೆಯ ಎಲ್ಲಾ ಸಿಬ್ಬಂದಿಗಳಿಗೆ ಸೋಮವಾರ ದಿಂದ ಆರ್‍ಟಿ-ಪಿಸಿಆರ್ ಟೆಸ್ಟ್ ಮಾಡಿಸಲು ಕ್ರಮ ಕೈಗೊಳ್ಳ ಲಾಗಿದೆ ಎಂದು ಪಾಲಿಕೆಯ ಆಯುಕ್ತೆ ಶಿಲ್ಪಾ ನಾಗ್ ತಿಳಿಸಿದ್ದಾರೆ.

ಕೊರೊನಾ ಎರಡನೇ ಅಲೆಯಿಂದಾಗಿ ಕರ್ತವ್ಯ ನಿರತ ಕೊರೊನಾ ವಾರಿಯರ್ಸ್‍ಗಳಾದ ಪಾಲಿಕೆಯ 8-10 ಮಂದಿ ಸಿಬ್ಬಂದಿಗಳಿಗೆ ಹಾಗೂ ಇಬ್ಬರು ಕಾರ್ಪೊರೇಟರ್‍ಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯಲ್ಲಿನ ಎಲ್ಲಾ 3373 ಸಿಬ್ಬಂದಿಗಳಿಗೂ ನಾಳೆ(ಸೋಮವಾರ)ಯಿಂದ ಹಂತ ಹಂತ ವಾಗಿ ಆರ್‍ಟಿ-ಪಿಸಿಆರ್ ಟೆಸ್ಟ್ ಮಾಡಿಸಲು ಕ್ರಮ ಕೈಗೊಳ್ಳ ಲಾಗಿದೆ. ಈ ಎಲ್ಲಾ ಸಿಬ್ಬಂದಿಗಳು ವಿವಿಧ ವಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆರ್‍ಟಿ-ಪಿಸಿಆರ್ ಟೆಸ್ಟ್‍ಗೆ ಸೂಚಿಸಲಾಗಿದೆ ಎಂದರು.
ಮೈಸೂರು ನಗರ ಪಾಲಿಕೆ ಕಚೇರಿಗೆ ನಗರದ ವಿವಿಧೆಡೆಯಿಂದ ನಾಗರಿಕರು ವಿವಿಧ ಕೆಲಸ ಕಾರ್ಯಗಳಿಗಾಗಿ ಆಗಮಿಸುತ್ತಾರೆ. ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆಯಲು ಪಾಲಿಕೆ ಮುಖ್ಯ ಕಚೇರಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಕಚೇರಿ ವ್ಯಾಪ್ತಿಯೊಳಗೆ ಹೆಚ್ಚಿನ ಜನಸಂದಣಿ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ ಯಾದರೂ, ಕೆಲವರು ಮಾಸ್ಕ್ ಧರಿಸದೇ ಬರುತ್ತಿರುವುದು ಕಂಡು ಬಂದಿದೆ. ಕೊರೊನಾ ಎರಡನೇ ಹಂತದ ಅಲೆಯಿಂದ ಜನರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಕುಟುಂ ಬದ ಸದಸ್ಯರ ಆರೋಗ್ಯದ ಹಿತದೃಷ್ಟಿಯಿಂದ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಸ್ವಯಂ ಪ್ರೇರಣೆಯಿಂದ ಜನರು ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸುವ ಮೂಲಕ ಎರಡನೇ ಹಂತದ ಕೊರೊನಾ ಅಲೆ ವ್ಯಾಪಿಸದಂತೆ ಸಹಕರಿಸಬೇಕು ಎಂದು ಮನವಿ ಮಾಡಿದರು.

Translate »