ಕೊರೊನಾ ಹಾವಳಿ: ಜನರಲ್ಲಿ ಆತ್ಮವಿಶ್ವಾಸ ತುಂಬಲು ಸಂಗೀತಗುಚ್ಛ
ಮೈಸೂರು

ಕೊರೊನಾ ಹಾವಳಿ: ಜನರಲ್ಲಿ ಆತ್ಮವಿಶ್ವಾಸ ತುಂಬಲು ಸಂಗೀತಗುಚ್ಛ

June 13, 2020

ಮೈಸೂರು,ಜೂ.12(ವೈಡಿಎಸ್)-ಮಹಾಮಾರಿ ಕೊರೊನಾದಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದು, ಉತ್ಸಾಹ ಕುಗ್ಗಿದೆ. ಇವರಲ್ಲಿ ಮತ್ತೆ ಆತ್ಮವಿಶ್ವಾಸ ತುಂಬುವ ಸಂದೇಶ ಹೊಂದಿರುವ ಸಂಗೀತ ವೀಡಿಯೊ ಶನಿವಾರ ಸಂಜೆ ಬಿಡುಗಡೆಯಾಗಲಿದೆ.

ಈ ವೀಡಿಯೋವನ್ನು ಕೇಂದ್ರ ಸರ್ಕಾರದ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್ (ಐಸಿಸಿಆರ್) ಶನಿವಾರ ಸಂಜೆ 4 ಗಂಟೆಗೆ ಬಿಡುಗಡೆ ಮಾಡಲಿದ್ದು, ಪ್ರಪಂಚದ 30 ದೇಶಗಳಲ್ಲೂ ಬಿಡುಗಡೆಯಾಗಲಿದೆ.

ಲೈಫ್ ಎಗೇನ್ ಎಂಬ ಸಂಗೀತ ವಿಡಿಯೊವನ್ನು ಸಂಗೀತ ಗಾರ, ಪಿಟೀಲು ವಾದಕ ಡಾ.ಮೈಸೂರು ಮಂಜುನಾಥ್ ಅವರು ಸಂಯೋಜನೆ ಮಾಡಿದ್ದು, ವಿವಿಧ ದೇಶಗಳ 20 ಖ್ಯಾತ ಸಂಗೀತಗಾರರ ಸಹಯೋಗದಲ್ಲಿ ಸುಮಧುರ ವಾಗಿ ಮೂಡಿ ಬಂದಿದೆ. ಎಲ್ಲಾ ಸಂಗೀತಗಾರರು ಅವರ ದೇಶಗಳಲ್ಲೇ ಕುಳಿತು ವಿಡಿಯೋ ಮಾಡಿ ಕಳುಹಿಸಿದ್ದನ್ನು ತಾಳ, ರಾಗಕ್ಕೆ ಸರಿಯಾಗಿ ಸೇರಿಸಿ ಸಂಯೋಜಿಸಲಾಗಿದೆ. 7 ನಿಮಿಷದ ವಿಡಿಯೊವನ್ನು 25 ದಿನಗಳಲ್ಲಿ ರೂಪಿಸ ಲಾಗಿದೆ. ಈ ಕುರಿತು ಮೈಸೂರು ಮಂಜುನಾಥ್ ಅವರು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಸಂಗೀತ ಕಲಾವಿದರು ಕೊರೊನಾ ವೇಳೆ ಏನು ಮಾಡುವುದೆಂದು ಯೋಚಿಸುತ್ತಿದ್ದಾಗ ವಿಶೇಷ ಸಂಗೀತ ವಿಡಿಯೊ ಮಾಡ ಬೇಕೆಂಬ ಯೋಚನೆ ಹೊಳೆಯಿತು. ಕೂಡಲೇ ವಿವಿಧ ದೇಶಗಳ ಸಂಗೀತಗಾರರನ್ನು ಆಹ್ವಾನಿಸಿದೆ. ಅದರಲ್ಲೂ ಕೊರೊನಾದಿಂದ ಸಂಕಷ್ಟಕ್ಕೀಡಾಗಿರುವ ದೇಶಗಳ ಸಂಗೀತ ಗಾರರನ್ನು ಆಹ್ವಾನಿಸಿದೆ. ಚೀನಾದ ವುಹಾನ್‍ನಗರ, ಇರಾನ್, ಅಮೆರಿಕ, ಇಟಲಿ, ಫ್ರಾನ್ಸ್, ನೆದರ್ಲೆಂಡ್ಸ್, ಬ್ರಿಟನ್‍ನ ಕಲಾ ವಿದರು ಇದಕ್ಕೆ ಕೈಜೋಡಿಸಿದರೆ, ಭಾರತದ ದೆಹಲಿ, ಮುಂಬೈ, ಕೋಲ್ಕತ್ತ ಮತ್ತಿತರೆ ನಗರಗಳ ಸಂಗೀತಗಾರರೂ ಪಾಲ್ಗೊಂ ಡರು ಎಂದರು. ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ರಚಿಸಿದ `ಕೊರೊನಾ ಬೇಗ ತೊಲಗಲಿ’ ಎಂಬ ಗೀತ ಸಾಹಿತ್ಯವನ್ನೂ ಸಂಗೀತ ವಿಡಿಯೋದಲ್ಲಿ ಸೇರಿಸ ಲಾಗಿದ್ದು, ಸ್ವಾಮೀಜಿಯೇ ಧ್ವನಿ ನೀಡಿದ್ದಾರೆ ಎಂದರು.

Translate »