ನಿಟ್ಟೂರು ಹೊಸ ಸೇತುವೆಯಲ್ಲಿ ಬಿರುಕು: ಕಳಪೆ ಕಾಮಗಾರಿ ಬಣ್ಣ ಬಯಲು ಮಾಡಿದ ವರುಣ
ಕೊಡಗು

ನಿಟ್ಟೂರು ಹೊಸ ಸೇತುವೆಯಲ್ಲಿ ಬಿರುಕು: ಕಳಪೆ ಕಾಮಗಾರಿ ಬಣ್ಣ ಬಯಲು ಮಾಡಿದ ವರುಣ

June 18, 2018

ಗೋಣಿಕೊಪ್ಪಲು: ಬಾಳೆಲೆ-ನಿಟ್ಟೂರು ಮಾರ್ಗದ ಲಕ್ಷ್ಮಣತೀರ್ಥ ನದಿಗೆ ನೂತನವಾಗಿ ನಿರ್ಮಿಸಿರುವ ನಿಟ್ಟೂರು ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕಳಪೆ ಕಾಮಗಾರಿಯಾಗಿರುವುದರಿಂದ ಬಿರುಕು ಬಂದಿದೆ ಎಂದು ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯ ಬಾನಂಡ ಪ್ರತ್ಯು ಆರೋಪಿಸಿದ್ದಾರೆ.

ಸೇತುವೆಯ ಮೇಲೆ ಸಂಚರಿಸಲು ಭಯದ ವಾತಾವರಣ ನಿರ್ಮಾಣವಾಗಿದೆ. ಸುಮಾರು 5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸೇತುವೆಯ ಮದ್ಯಭಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ಸೇತುವೆ ನಿರ್ಮಾಣವಾಗಿ ಇದೇ ಮೊದಲ ವರ್ಷದ ಮುಂಗಾರು ಆರಂಭಗೊಂಡಿದೆ. ಈ ಸಂದರ್ಭದಲ್ಲಿಯೇ ಬಿರುಕು ಬಿಟ್ಟಿರುವುದು ಆ ಭಾಗದ ಜನರಲ್ಲಿ ಭಯದ ವಾತಾವರಣ ಮೂಡಿಸಿದೆ.

ಈ ಬಗ್ಗೆ ಮಾತನಾಡಿದ ಪ್ರತ್ಯು, ಹಿಂದಿನಿಂದಲೇ ಕಳಪೆ ಕಾಮಗಾರಿ ಬಗ್ಗೆ ಅನುಮಾನವಿತ್ತು. ಪಿಡಬ್ಲ್ಯುಡಿ ಇಂಜಿನಿಯರ್‍ಗೆ ಗುಣಮಟ್ಟ ಕಾಯ್ದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದೆ. ಆದರೂ ಸೇತುವೆ ಕಳಪೆಯಾಗಿ ನಿರ್ಮಿಸಲಾಗಿದೆ. ವಾಹನಗಳು ಈ ಸೇತುವೆಯ ಮೂಲಕ ಹಾದು ಹೋಗುವುದರಿಂದ ಅನಾಹುತ ಸಂಭವಿಸುವ ಆತಂಕವಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದು, ಕ್ರಮಕೈಗೊಳ್ಳುವ ವಿಶ್ವಾಸವಿದೆ ಎಂದರು.

ನದಿ ನೀರು ಸೇತುವೆಯನ್ನು ಮುತ್ತಿಕ್ಕಲು ಕೇವಲ 1 ಅಡಿಗಳಷ್ಟು ಮಾತ್ರ ಬಾಕಿ ಉಳಿದಿದೆ. ಹೊಳೆಯ ಸುತ್ತಲಿನ ಕೃಷಿ ಗದ್ದೆಗಳು ಜಲಾವೃತಗೊಂಡಿದೆ. ಕಾನೂರು ಮೂಲಕ ಹರಿಯುವ ಲಕ್ಷ್ಮಣತೀರ್ಥ ನದಿ ರಸ್ತೆಯ ಮೇಲೆ ಹರಿಯುತ್ತಿದೆ. ದ್ವಿಚಕ್ರ ಓಡಾಡಲು ತೊಂದರೆ ಉಂಟಾಯಿತು. ನಲ್ಲೂರು ಮೂಲಕ ಹರಿಯುವ ಕೀರೆ ಹೊಳೆ ರಸ್ತೆಯ ಮೇಲೆ ಹರಿಯುತ್ತಿದೆ. ವಾಹನ ಸಂಚಾರಕ್ಕೆ ತೊಂದರೆಯಾಗಲಿಲ್ಲ.

ನಡಿಕೇರಿಯಲ್ಲಿ ಖಾಸಗಿ ಬಸ್ ಕೆಸರಿನಲ್ಲಿ ಸಿಲುಕಿ ಕೊಂಡು ಹುದಿಕೇರಿ – ಶ್ರೀಮಂಗಲ ರಸ್ತೆ ಸಂಚಾರ ಸ್ಥಗಿತ ಗೊಂಡಿತ್ತು. ಮಂಗಳವಾರ ರಾತ್ರಿ ಕೇರಳಕ್ಕೆ ಹೋಗು ತ್ತಿದ್ದ ಖಾಸಗಿ ಬಸ್ ನಡಿಕೇರಿಯಲ್ಲಿ ಚಕ್ರ ಕೆಸರಿನಲ್ಲಿ ಸಿಲುಕಿ ಕೊಂಡಿತ್ತು. ಇದರಿಂದಾಗಿ ರಾತ್ರಿಯಿಡೀ ಸಂಚಾರ ಸ್ಥಗಿತಗೊಂಡಿತ್ತು. ಬೆಳಗ್ಗೆ 11 ಗಂಟೆ ಸುಮಾರು ಕ್ರೇನ್ ಮೂಲಕ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಕೇರಳಕ್ಕೆ ತೆರಳುವ ವಾಹನಗಳು ಕಾನೂರು ಮೂಲಕ ಸಂಚರಿಸಿದವು.

ಟಿ. ಶೆಟ್ಟಿಗೇರಿ ಮೂಲಕ ಹರಿಯುವ ಲಕ್ಷ್ಮಣತೀರ್ಥ ನದಿ ಮಂಗಳವಾರ ರಾತ್ರಿ ರಸ್ತೆಯ ಮೇಲೆ ಜಲಾವೃತ ಗೊಂಡು ಆತಂಕ ಮೂಡಿಸಿತ್ತು. ನದಿಪಾತ್ರದ ಮನೆಗಳಲ್ಲಿ ವಾಸಿಸುತ್ತಿದ್ದವರನ್ನು ತಹಸೀಲ್ದಾರ್ ಗೋವಿಂದರಾಜು ಸ್ಥಳಕ್ಕೆ ಆಗಮಿಸಿ ತಾತ್ಕಾಲಿಕವಾಗಿ ಅವರನ್ನು ಬೇರೆ ಕಡೆಗಳಿಗೆ ಸ್ಥಳಾಂತರಿಸಲಾಯಿತು. ನಂತರ ಮಳೆಯ ಪ್ರಮಾಣ ತಗ್ಗಿದ ಕಾರಣ ನೀರಿನ ಪ್ರಮಾಣ ಇಳಿಯುತ್ತಿದ್ದಂತೆ ಮತ್ತೆ ತಮ್ಮ ಮನೆಗೆ ಸ್ಥಳಾಂತರಗೊಂಡವರು ಬಂದರು. ನಾಲ್ಕೇರಿಯಲ್ಲಿ ಲಕ್ಷ್ಮಣತೀರ್ಥ ನದಿ ರಸ್ತೆಯಲ್ಲಿ ಹರಿದು ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಬಲ್ಯಮುಂಡೂರು ಬಳಿ ಲಕ್ಷ್ಮಣತೀರ್ಥ ಜಲಾವೃತ ಗೊಂಡು ಎರಡನೇ ದಿನವೂ ಕೂಡ ಸಂಚಾರ ಕಡಿತಗೊಂಡಿದೆ. ಕಾನೂರು ಮೂಲಕ ಶ್ರೀಮಂಗಲಕ್ಕೆ ತೆರಳುವ ನಾಲ್ಕೇರಿ ರಸ್ತೆ ಕೂಡ ತಡೆಯಾಗಿದೆ.

ಬಿರುನಾಣ ಸುತ್ತಮುತ್ತ ಮಂಗಳವಾರ ದಾಖಲೆಯ ಮಳೆ ಸುರಿದಿದೆ. ಬಿರುನಾಣ ಗೆ 12 ಇಂಚು, ಬಾಡಗರ ಕೇರಿಗೆ 18 ಇಂಚು ಮಳೆ ಸುರಿದಿದೆ. ಈ ಭಾಗದ ಗದ್ದೆಗಳು ಪೂರ್ತಿ ಜಲಾವೃತಗೊಂಡಿತ್ತು. ಕೆಕೆಆರ್ ಸಮೀಪ ಭೂಕುಸಿತದಿಂದ ಸಂಚಾರ ಕಡಿತಗೊಂಡಿತ್ತು.

Translate »