ಪುತ್ರನ ಬೀಗರ ಔತಣ ರದ್ದುಪಡಿಸಿ ಕೊಡಗು ಸಂತ್ರಸ್ತರಿಗೆ
ಮಂಡ್ಯ

ಪುತ್ರನ ಬೀಗರ ಔತಣ ರದ್ದುಪಡಿಸಿ ಕೊಡಗು ಸಂತ್ರಸ್ತರಿಗೆ

August 23, 2018

ಮಂಡ್ಯ: ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ತಮ್ಮ ಪುತ್ರನ ಬೀಗರ ಔತಣಕೂಟ ರದ್ದುಪಡಿಸಿದ್ದಾರೆ.

ಬುಧವಾರ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಷಯ ತಿಳಿಸಿದರು. ಭೀಕರ ಮಳೆಯಿಂದಾಗಿ `ಕೊಡವರು’ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ನನ್ನ ಮಗನ ಬೀಗರ ಔತಣ ಕೂಟವನ್ನು ರದ್ದುಪಡಿಸಿದ್ದೇನೆ. ಈ ಔತಣಕ್ಕೆ ಖರ್ಚು ಮಾಡಲು ಉದ್ದೇಶಿಸಲಾಗಿದ್ದ ಸುಮಾರು 10 ಲಕ್ಷ ರೂ. ಗಳನ್ನು ಕೊಡಗು ನೆರೆ ಸಂತ್ರಸ್ತರ ನೆರವಿಗೆ ನೀಡುವುದಾಗಿ ಹೇಳಿ ದರು. ನೆರೆಯಿಂದಾಗಿ ಕೊಡಗು ಜನ ಕಷ್ಟದಲ್ಲಿದ್ದಾರೆ. ಅವರ ನೆರವಿಗೆ ಧಾವಿಸುವುದು ನಮ್ಮ ಕರ್ತವ್ಯ. ನಮ್ಮ ಮನೆಯಲ್ಲಿ ನಡೆಯಬೇಕಿದ್ದ ಬೀಗರ ಔತಣಕೂಟ ರದ್ದು ಮಾಡಿ, ಅದರ ವೆಚ್ಚ 10 ಲಕ್ಷ ರೂಪಾಯಿಯನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಜಮಾ ಮಾಡುತ್ತೇನೆ. ಭಾನುವಾರ ನಡೆಯಲಿದ್ದ ಔತಣಕೂಟಕ್ಕೆ ತುಂಬ ಜನರಿಗೆ ಆಹ್ವಾನ ನೀಡಿದ್ದೆ. ಆದರೆ ಇದೀಗ ತಮ್ಮ ನಿರ್ಧಾರವನ್ನು ಅನಿವಾರ್ಯ ಕಾರಣದಿಂದ ಬದಲಾಯಿಸಿಕೊಂಡಿದ್ದೇನೆ. ಇದರಿಂದ ನನ್ನ ಬಂಧು-ಬಳಗ ಸೇರಿದಂತೆ ಸ್ನೇಹ ಬಳಗದಲ್ಲಿ ಕ್ಷಮೆ ಕೇಳುತ್ತೇನೆ ಎಂದರು.

ಈ ಹಿಂದಿನಿಂದಲೂ ಕೊಡಗು ಮತ್ತು ಮಂಡ್ಯ ಜನರ ನಡುವೆ ಅವಿನಾಭಾವ ಸಂಬಂಧವಿದೆ. ಈ ನಿಟ್ಟಿನಲ್ಲಿ ನಮ್ಮ ಜಿಲ್ಲೆಯಿಂದ ಹೆಚ್ಚಿನ ದೇಣಿಗೆ ಸಂಗ್ರಹ ಮಾಡಿ ಅಲ್ಲಿಗೆ ನೀಡಲಿದ್ದೇವೆ. ಸೋಮವಾರ ಜನಪ್ರತಿನಿಧಿಗಳೆಲ್ಲ ಕೊಡಗಿಗೆ ಭೇಟಿ ನೀಡಿದ್ದೆವು. ಮನೆ ಕಟ್ಟಿಸಿಕೊಡಬೇಕು ಎಂಬುದು ಅಲ್ಲಿನವರ ಅಭಿಲಾಷೆಯಾಗಿದೆ. ಅಂತೆಯೇ ನಾವೆಲ್ಲ ಪಕ್ಷಾತೀತವಾಗಿ ಹಣ ಸಂಗ್ರಹ ಮಾಡುತ್ತೇವೆ. ಉದ್ಯಮಿಗಳು, ಗುತ್ತಿಗೆದಾರರು ಸೇರಿ ಎಲ್ಲರನ್ನೂ ಸಂಪರ್ಕಿಸಿ ದೇಣಿಗೆ ಸಂಗ್ರಹಿಸುತ್ತೇವೆ. ಕೊಡವರ ನೋವಿಗೆ ಸ್ಪಂದಿಸಲು ಶಕ್ತಿಮೀರಿ ಶ್ರಮಿಸುತ್ತೇವೆ ಎಂದು ತಿಳಿಸಿದರು.

ಪಕ್ಷದ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ: ಜಿಲ್ಲೆ ಮಾತ್ರವಲ್ಲದೆ ಎಲ್ಲಾ ಕಡೆಯೂ ಪಕ್ಷ ಸದೃಢವಾಗಿದೆ. ಈ ಭಾರಿಯ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಜಿ.ಪಂ ಸದಸ್ಯ ಅಶೋಕ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಮತ್ತಿತರರು ಇದ್ದರು.

Translate »