ಸಂತ್ರಸ್ತರ ಶಿಬಿರಗಳು ಸಾರುತ್ತಿವೆ ಸರ್ವಧರ್ಮ ಸಾಮರಸ್ಯ
ಮೈಸೂರು

ಸಂತ್ರಸ್ತರ ಶಿಬಿರಗಳು ಸಾರುತ್ತಿವೆ ಸರ್ವಧರ್ಮ ಸಾಮರಸ್ಯ

August 23, 2018

ಸುಂಟಿಕೊಪ್ಪ:  ಕೊಡಗು ಜಿಲ್ಲೆಯಲ್ಲಿ ಸುರಿದ ಮಹಾಮಳೆಯಿಂದಾಗಿ ಹತ್ತಾರು ಜನ, ನೂರಾರು ಜಾನುವಾರುಗಳು, ಸಾವಿರಾರು ಕಾಡುಪ್ರಾಣಿಗಳು ಬಲಿಯಾಗಿವೆ. ಸಾವಿರಾರು ಎಕರೆ ಭೂಮಿ ಕುಸಿದು, ಕಾಫಿ ಬೆಳೆಗಾರರ ಬದುಕು ಬೀದಿಗೆ ಬಿದ್ದಿದೆ. ಸಾವಿರಾರು ಮಂದಿ ಮನೆ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಕೂಲಿ ಕಾರ್ಮಿಕರು ದುಡಿಮೆಯಿಲ್ಲದೆ ಪರಿತಪಿಸುತ್ತಿದ್ದಾರೆ. ಸುಮಾರು 30 ಗ್ರಾಮಸ್ಥರ ಬದುಕು ನೆರೆಯ ಕೆಸರಲ್ಲಿ ಹೂತು ಹೋಗಿದೆ. ಆದರೆ ಇಲ್ಲಿನ ಜನರ ಮಾನವತೆ ಬಲಿಯಾಗಿಲ್ಲ. ಸಾಮರಸ್ಯ ಕದಡಿಲ್ಲ. ನೊಂದವರ ನೆರವಿಗಾಗಿ ಇಲ್ಲಿ ಎಲ್ಲರೂ ಒಂದಾಗಿ ದುಡಿಯುತ್ತಿದ್ದಾರೆ ಎಂಬುದಕ್ಕೆ ಸುಂಟಿಕೊಪ್ಪ ಜನರೇ ಸಾಕ್ಷಿ.

ಮಕ್ಕಂದೂರು, ಹಾಲೇರಿ, ಕಾಂಡನಕೊಲ್ಲಿ, ಪಾಪಿಲಕಾಡು ಸೇರಿದಂತೆ ನೆರೆ ಪೀಡಿತ ಅನೇಕ ಗ್ರಾಮಗಳಿಂದ ಬಂದ ಸಾವಿರಾರು ಸಂತ್ರಸ್ತರಿಗೆ ಸುಂಟಿಕೊಪ್ಪದ ಜನರು ಆಶ್ರಯ ಕಲ್ಪಿಸಿಕೊಟ್ಟರು. ಮೊದಲಿಗೆ ಇಲ್ಲಿನ ಶ್ರೀರಾಮ ಮಂಡಳಿಯಲ್ಲಿ ಉಳಿದು ಕೊಳ್ಳಲು ಅವಕಾಶ ನೀಡಿ, ಬೇಕಾದ ಅಗತ್ಯ ವಸ್ತುಗಳನ್ನು ಗ್ರಾಮಸ್ಥರೇ ಸ್ವಯಂಪ್ರೇರಣೆಯಿಂದ ನೀಡಿದರು. ಪ್ರತಿಯೊಬ್ಬರ ಮನೆಯಿಂದಲೂ ಬಟ್ಟೆ, ಹೊದಿಕೆ, ಚಾಪೆ ಹೀಗೆ ಎಲ್ಲಾ ವಸ್ತುಗಳೂ ಸಂತ್ರಸ್ತರ ಕೈ ಸೇರಿದ್ದವು. ಸ್ಥಳೀಯರೇ ಹಣ ಸಂಗ್ರಹಿಸಿ, ಸಂತ್ರಸ್ತರಿಗೆ ಆಹಾರದ ವ್ಯವಸ್ಥೆಯನ್ನೂ ಮಾಡಿದರು. ಸಂತ್ರಸ್ತರ ಸಂಖ್ಯೆ ಹೆಚ್ಚಾ ದಾಗ ಸಮೀಪದ ಸಂತ ಮೇರಿ ಶಾಲೆ ಹಾಗೂ ಖತೀಜಾ ಉಮ್ಮ ಮದರಸಾದಲ್ಲಿ ಆಶ್ರಯ ನೀಡಲಾಯಿತು.

ಸಾಮರಸ್ಯದ ನೆರವು: ಇದೀಗ ದಾನಿಗಳ ನೆರವಿನಿಂದ ಈ ಮೂರೂ ಪರಿಹಾರ ಕೇಂದ್ರಗಳಲ್ಲಿ ಸಾವಿರಕ್ಕೂ ಹೆಚ್ಚು ಸಂತ್ರಸ್ತರಿಗೆ ಕಿಂಚಿತ್ತೂ ತೊಂದರೆಯಿಲ್ಲದಂತೆ ವ್ಯವಸ್ಥೆ ಮಾಡಲಾಗಿದೆ. ರಾಮಮಂದಿರದಲ್ಲಿ ಹಿಂದೂ, ಸಂತ ಮೇರಿ ಶಾಲೆಯಲ್ಲಿ ಕ್ರಿಶ್ಚಿ ಯನ್, ಮದರಸಾದಲ್ಲಿ ಮುಸ್ಲಿಂ ಸಂತ್ರಸ್ತರು ಮಾತ್ರ ವಿಲ್ಲ. ಮೂರೂ ಕೇಂದ್ರಗಳಲ್ಲಿಎಲ್ಲಾ ಜಾತಿ, ಧರ್ಮೀಯರೂ ಆಶ್ರಯ ಪಡೆದಿದ್ದಾರೆ. ದಾನಿ ಗಳಿಂದ ಬರುವ ವಸ್ತುಗಳನ್ನು ಮೂರೂ ಕೇಂದ್ರಗಳಿಗೆ ತಲುಪಿಸಲಾಗುತ್ತಿದೆ. ಆಹಾರ ವ್ಯತ್ಯಯವಾದರೆ ಒಂದು ಕೇಂದ್ರದಿಂದ ಮತ್ತೊಂದು ಕೇಂದ್ರಕ್ಕೆ ತೆಗೆದುಕೊಂಡು ಹೋಗಿ ಸಂತ್ರಸ್ತರಿಗೆ ನೀಡುತ್ತಿದ್ದಾರೆ. ಸ್ವಯಂ ಸೇವಕರು ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳನ್ನು ಬಿಟ್ಟು ಸಂತ್ರಸ್ತರ ಸೇವೆ ಮಾಡುತ್ತಿದ್ದಾರೆ. ಒಟ್ಟಾರೆ ಸುಂಟಿಕೊಪ್ಪದ ಜನ ಯಾವುದೇ ಜಾತೀಯತೆ, ಧರ್ಮಾಂಧತೆಗೆ ಅವಕಾಶ ಕೊಡದೆ, ಸಾಮರಸ್ಯದ ನೆರವು ನೀಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಮಾದರಿ ವ್ಯವಸ್ಥೆ: ಸುಂಟಿಕೊಪ್ಪದ ಸ್ಥಳೀಯರು ಸಂತ್ರಸ್ತರ ಪರಿಹಾರ ಕೇಂದ್ರಗಳನ್ನು ಅತ್ಯಂತ ವ್ಯವಸ್ಥಿತವಾಗಿ ನಿರ್ವಹಿಸಿ, ಮಾದರಿಯಾಗಿದ್ದಾರೆ. ದಾನಿಗಳಿಂದ ಬರುವ ವಸ್ತುಗಳನ್ನು ಒಂದು ಕಡೆ ವ್ಯವಸ್ಥಿತವಾಗಿ ಸಂಗ್ರಹಿಸಿ, ಮೂರೂ ಕೇಂದ್ರಗಳಿಗೆ ಸಮರ್ಪಕವಾಗಿ ಹಂಚಿಕೆ ಮಾಡಿಕೊಂಡು ಸಂತ್ರಸ್ತರಿಗೆ ವಿತರಿಸಲಾಗುತ್ತಿದೆ. ಸ್ವಚ್ಛತೆ ಕಾಪಾಡಿಕೊಳ್ಳಲಾಗಿದೆ. ದಾನಿಗಳು ನೀಡಿದ ಆಹಾರ ಪದಾರ್ಥಗಳಿಂದ ವಿಭಿನ್ನ ಅಡುಗೆ ತಯಾರಿಸಿ, ಉಣಬಡಿಸಲಾಗುತ್ತಿದೆ. ಸಂತ್ರಸ್ತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಎಲ್ಲಾ ಕೆಲಸಗಳನ್ನೂ ಸ್ಥಳೀಯರೇ ಸ್ವಯಂ ಪ್ರೇರಣೆಯಿಂದ ಮುತುವರ್ಜಿ ವಹಿಸಿ ಮಾಡುತ್ತಿದ್ದಾರೆ. ನೊಂದವರ ನೆರವಿಗಾಗಿ ತಮ್ಮ ಮನೆ ಕೆಲಸಗಳನ್ನೂ ಬಿಟ್ಟು ಈ ಪರಿಹಾರ ಕೇಂದ್ರಗಳಲ್ಲಿದ್ದಾರೆ. ಯುವಕರು, ಉದ್ಯಮಿಗಳು, ಉದ್ಯೋಗಿಗಳು ಎಲ್ಲರೂ ಸಂತ್ರಸ್ತರ ಸಹಾಯಕ್ಕೆ ನಿಂತಿದ್ದಾರೆ.

ಸೇವಾ ಭಾರತಿ ಕಾರ್ಯಕರ್ತರೂ ಸೇವೆಯಲ್ಲಿ ಸಕ್ರಿಯರಾಗಿದ್ದಾರೆ. ಶಾಂತಾರಾಮ್ ಕಾಮತ್, ಬಿ.ಡಿ.ಸುಭಾಷ್, ಡಾ.ಶಶಿಕಾಂತ್, ಎಸ್.ಜಿ.ಶ್ರೀನಿವಾಸ್, ಗೌತಮ್, ರಮೇಶ್ ಚಂಗಪ್ಪ, ಡಿ.ನರಸಿಂಹ ಸೇರಿದಂತೆ ಗ್ರಾಮದ 150ಕ್ಕೂ ಹೆಚ್ಚು ಸ್ವಯಂ ಸೇವಕರು, ಸಂತ್ರಸ್ತರಿಗಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಜಿಲ್ಲಾಡಳಿತದ ಸಹಕಾರವಿಲ್ಲದೇ ಸ್ಥಳೀಯರೇ ಪರಿಹಾರ ಕೇಂದ್ರಗಳನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ದಾನಿಗಳಿಂದ ಬರುವ ವಸ್ತುಗಳು ದುರುಪಯೋಗವಾಗದಂತೆ ವ್ಯವಸ್ಥಿತವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆರಂಭದಲ್ಲಿ ಸ್ಥಳೀಯ ಖಾಸಗಿ ವೈದ್ಯರೇ ಸ್ವಯಂ ಪ್ರೇರಣೆಯಿಂದ ಪರಿಹಾರ ಕೇಂದ್ರಗಳಿಗೆ ಬಂದು ಸಂತ್ರಸ್ತರಿಗೆ ವೈದ್ಯಕೀಯ ಸೇವೆ ನೀಡಿದರು. ಇದೀಗ ಆರೋಗ್ಯ ಇಲಾಖೆಯಿಂದ ವೈದ್ಯರು, ಶುಶ್ರೂಷಕರನ್ನು ನಿಯೋಜಿಸಲಾಗಿದೆ.

Translate »