ಇಂದು ದಸರಾ ಗಜಪಡೆ ಮೊದಲ ತಂಡದ ಪಯಣ
ಮೈಸೂರು

ಇಂದು ದಸರಾ ಗಜಪಡೆ ಮೊದಲ ತಂಡದ ಪಯಣ

September 2, 2018

ಮೈಸೂರು:  ಮೈಸೂರಿನ ದಸರಾ ಮಹೋತ್ಸವದ ಮುನ್ನುಡಿಯಾಗಿರುವ ಗಜ ಪಯಣಕ್ಕೆ ನಾಳೆ(ಸೆ.2) ಚಾಲನೆ ಸಿಗಲಿದೆ. ಹುಣಸೂರು ತಾಲೂಕಿನ ವೀರನಹೊಸ ಹಳ್ಳಿಯಲ್ಲಿ ಬೆಳಿಗ್ಗೆ 10ಕ್ಕೆ, ಅರ್ಜುನನ ನೇತೃತ್ವದಲ್ಲಿ ಆಗಮಿಸುತ್ತಿರುವ 6 ಆನೆಗಳ ಮೊದಲ ತಂಡಕ್ಕೆ ಜಿಲ್ಲಾ ಉಸ್ತು ವಾರಿ ಸಚಿವ ಜಿ.ಟಿ.ದೇವೇ ಗೌಡರು ಪೂಜೆ ಸಲ್ಲಿಸುವ ಮೂಲಕ ಗಜ ಪಯಣಕ್ಕೆ ಸಾಂಪ್ರದಾಯಿಕ ಚಾಲನೆ ನೀಡಲಿದ್ದಾರೆ. ಈ ಬಾರಿಯ ಗಜ ಪಯಣ ತಡವಾಗಿರುವ ಹಿನ್ನೆಲೆಯಲ್ಲಿ ಆನೆಗಳನ್ನು ವೀರನಹೊಸಹಳ್ಳಿಯಿಂದ ನೇರವಾಗಿ ಮೈಸೂರಿನ ಅರಣ್ಯ ಭವನದ ಆವರಣಕ್ಕೆ ಕರೆತಂದು, ಮರುದಿನ ಅಂದರೆ ಸೆ.3ರಂದು ಅರಮನೆ ಆವರಣಕ್ಕೆ ಬರಮಾಡಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ ಅಂದು ನಗರ ಪಾಲಿಕೆ ಚುನಾವಣಾ ಮತ ಎಣಿಕೆ ಕಾರ್ಯ ನಡೆಯುವುದರಿಂದ ಗಜ ಸ್ವಾಗತ ಕಾರ್ಯಕ್ರಮವನ್ನು ಸೆ.5ಕ್ಕೆ ಮುಂದೂಡಲಾಗಿದೆ. ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಸೆ.5ರ ಸಂಜೆ 4.30ಕ್ಕೆ ಅರಮನೆಗೆ ಆಗಮಿಸುವ ಗಜಪಡೆಯನ್ನು ಸ್ವಾಗತಿಸಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ನಾಳೆ(ಸೆ.2) ವೀರನಹೊಸಹಳ್ಳಿಯಿಂದ ಹೊರಡುವ ಗಜಪಡೆಯನ್ನು ಸೆ.5ರವರೆಗೆ ಎಲ್ಲಿ ಉಳಿಸಬೇಕೆಂದು ಇನ್ನೂ ನಿರ್ಧಾರವಾಗಿಲ್ಲ. ಈ ಬಗ್ಗೆ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿರುವ ಡಿಸಿಎಫ್ ಸಿದ್ದರಾಮಪ್ಪ, ಅರಮನೆಗೆ ಗಜ ಸ್ವಾಗತ ಕಾರ್ಯಕ್ರಮ ಮುಂದೂಡಲ್ಪಟ್ಟಿರುವ ಕಾರಣ, ಆನೆಗಳನ್ನು ಎಲ್ಲಿ ಉಳಿಸ ಬೇಕೆಂಬುದನ್ನೂ ಇನ್ನೂ ನಿರ್ಧರಿಸಿಲ್ಲ. 3 ದಿನಗಳ ಕಾಲ ಅರಣ್ಯ ಭವನದಲ್ಲಿ ಉಳಿಸಬಹುದಾದ ಸಾಧ್ಯತೆ ಬಗ್ಗೆ ಇಲಾಖೆ ಮೇಲಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಬೇಕಿದೆ. ಅರಣ್ಯ ಭವನದ ಆವರಣ ಅಥವಾ ಇಲವಾಲ ಸಮೀಪದ ಅಲೋಕ ಅರಣ್ಯ ಪ್ರದೇಶದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಬೇಕೋ? ಎಂಬುದು ನಾಳೆ(ಸೆ.2) ಬೆಳಿಗ್ಗೆ ಸ್ಪಷ್ಟವಾಗಲಿದೆ ಎಂದು ತಿಳಿಸಿದ್ದಾರೆ.

ಬಳ್ಳೆ ಶಿಬಿರದಲ್ಲಿದ್ದ ಅರ್ಜುನ, ದುಬಾರೆ ಶಿಬಿರದ ಧನಂಜಯ, ಗೋಪಿ, ವಿಕ್ರಮ, ಮತ್ತಿಗೋಡು ಶಿಬಿರದ ವರಲಕ್ಷ್ಮೀ ಹಾಗೂ ಬಂಡೀಪುರ ಶಿಬಿರದ ಚೈತ್ರ ಆನೆಗಳು ಮೊದಲ ತಂಡದಲ್ಲಿ ದಸರೆಗೆ ಆಗಮಿಸುತ್ತಿವೆ.

ಇದ್ದಲ್ಲೇ ಗಜ ಪಯಣ ವೀಕ್ಷಿಸಿ: ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ ಆನೆಗಳು ಕಾಡಿನಿಂದ ನಾಡಿಗೆ ಪ್ರಯಾಣ ಬೆಳೆಸುವ ಗಳಿಗೆಯನ್ನು ಸಾಮಾಜಿಕ ಜಾಲತಾಣದಲ್ಲಿ ವೀಕ್ಷಿಸಬಹುದಾಗಿದೆ. ಪ್ರವಾಸೋದ್ಯಮ ಇಲಾಖೆ ವತಿಯಿಂದ ತೆರೆಯಲಾಗಿರುವ ಮೈಸೂರು ದಸರಾ ಫೇಸ್‍ಬುಕ್ ಪೇಜ್‍ನಲ್ಲಿ ನಾಳಿನ ಗಜ ಪಯಣವನ್ನು ಫೇಸ್‍ಬುಕ್ ಲೈವ್ ಮೂಲಕ ನೇರ ಪ್ರಸಾರ ಮಾಡಲು ಸಿದ್ಧತೆ ನಡೆಸಲಾಗಿದೆ. ಅಲ್ಲದೆ ಪ್ರವಾಸೋದ್ಯಮ ಇಲಾಖೆ ವೆಬ್‍ಸೈಟ್‍ನಲ್ಲೂ ನೇರ ಪ್ರಸಾರ ಮಾಡುವ ಚಿಂತನೆ ನಡೆದಿದೆ. ಹುಣಸೂರಿನ ವೀರನಹೊಸಹಳ್ಳಿ ಭಾಗದಲ್ಲಿ ನೆಟ್‍ವರ್ಕ್ ಸಮಸ್ಯೆ ಉಂಟಾದರೆ ರೆಕಾರ್ಡ್ ಮಾಡಿಕೊಂಡು ನಂತರ ಅಪ್‍ಲೋಡ್ ಮಾಡುವ ಸಾಧ್ಯತೆಯೂ ಇದೆ.

Translate »