ಈ ಬಾರಿ ವೀರನಹೊಸಹಳ್ಳಿ ಗೇಟ್‍ನಿಂದ ದಸರಾ ಗಜಪಯಣ
ಮೈಸೂರು

ಈ ಬಾರಿ ವೀರನಹೊಸಹಳ್ಳಿ ಗೇಟ್‍ನಿಂದ ದಸರಾ ಗಜಪಯಣ

August 30, 2018

ಹುಣಸೂರು:  ನಾಡ ಹಬ್ಬ ದಸರಾ ಮಹೋತ್ಸವಕ್ಕೆ ನಾಂದಿ ಹಾಡುವ ಗಜಪಯಣವನ್ನು ಹಿಂದಿನಂತೆ ವೀರನಹೋಸಹಳ್ಳಿ ಗೇಟ್ ಬಳಿಯೇ ಚಾಲನೆ ನೀಡಿ ಸಾಂಪ್ರದಾಯಿಕ ಪದ್ಧತಿ ಮುಂದುವರೆಸುವಂತೆ ಶಾಸಕ ಹೆಚ್. ವಿಶ್ವನಾಥ್ ಅಧಿಕಾರಿಗಳಿಗೆ ಸೂಚಿಸಿದರು.

ಇಂದು ಬೆಳಿಗ್ಗೆ ನಾಗರಹೊಳೆ ರಾಷ್ಟ್ರಿಯ ಉದ್ಯಾನವನದ ವೀರನಹೊಸಹಳ್ಳಿ ವಲಯಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸೆಪ್ಟೆಂಬರ್ 2 ರಂದು ಬೆಳಿಗ್ಗೆ 9 ಗಂಟೆಗೆ ನಡೆಯುವ ಗಜಪಯಣದ ಪೂರ್ವ ಸಿದ್ಧತೆ ಪರಿಶೀಲಿಸಿ ಮಾತನಾಡಿದ ಅವರು, ರಾಜ ಮಹಾರಾಜರ ಕಾಲದಲ್ಲಿ ದಸರಾ ಮಹೋತ್ಸವ ಮೆರವಣಿಗೆಯ ಕೇಂದ್ರ ಬಿಂದುಗಳಾದ ಆನೆಗಳನ್ನು ಮೈಸೂರಿಗೆ ಕರೆತರುವ ಮುನ್ನ ಖುದ್ದು ರಾಜರುಗಳೇ ನಾಗರಹೊಳೆ ಕಾಡಿಗೆ ಬಂದು ಆದಿವಾಸಿ ಸಮುದಾಯದ ಸಂಪ್ರದಾಯಗಳನ್ನು ಪಾಲಿಸಿ, ಮಾವುತರಿಗೆ ಗೌರವಪೂರ್ಣ ಆಹ್ವಾನ ನೀಡಿ ಆನೆಗಳನ್ನು ಬರಮಾಡಿ ಕೊಳ್ಳುತ್ತಿದರು. ಆದರೆ ಇತ್ತೀಚಿನ ದಿನಗಳಲ್ಲಿ ಕಾನೂನು ನೆಪವೊಡ್ಡಿ ಸಂಪ್ರದಾಯಗಳನ್ನು ಮೂಲೆಗುಂಪು ಮಾಡಿ, ಬೇಕಾಬಿಟ್ಟಿ ಆಚರಣೆ ಮಾಡುತ್ತಿರುವುದು ಸರಿಯಲ್ಲ ಎಂದ ಅವರು, ಹಿಂದೆ ಉಸ್ತುವಾರಿ ಸಚಿವನಾಗಿದ್ದಾಗ ಗಜಪಯಣವನ್ನು ಪುನಃ ವೀರನಹೋಸಹಳ್ಳಿ ಗೇಟ್ ಬಳಿಯಿಂದ ಚಾಲನೆಗೆ ತಂದು ಸಂಪ್ರದಾಯ ಮುಂದುವರೆಸಿದ್ದೆ. ನಂತರದ ದಿನಗಳಲ್ಲಿ ಕಾನೂನು ನೆಪವೊಡ್ಡಿ ಗಜಪಯಣವನ್ನು ವೀರನಹೋಸಹಳ್ಳಿಯಿಂದ ನಾಗಪುರ ಗೇಟ್‍ಗೆ ಸ್ಥಳಾಂತರಿಸಿದ್ದು, ಈ ಬಾರಿ ವೀರನ ಹೊಸಹಳ್ಳಿಯಲ್ಲೇ ಚಾಲನೆಯಾಗುವಂತೆ, ಸೂಕ್ತ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು. ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಮೂಲಕ ಯುವ ದಸರಾವನ್ನು ಮಾದರಿಯಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕಾರ್ಡ್ ಗೊಂದಲ ಬೇಡ : ಪ್ರತಿ ವರ್ಷ ಪಾಸ್ ಹಂಚಿಕೆಯಲ್ಲಿ ಅಧಿಕಾರಿಗಳ ಎಡವಟ್ಟು ಎದ್ದು ಕಾಣುತ್ತಿದ್ದು, ಅದರ ಬಿಸಿ ಮುಖ್ಯಮಂತ್ರಿಗಳಿಗೂ ತಟ್ಟಿದ ಉದಾಹರಣೆ ಇರುವುದರಿಂದ ಈ ಬಾರಿ ಶಿಸ್ತುಬದ್ಧವಾಗಿ ಪಾಸ್‍ಗಳನ್ನು ಹಂಚುವ ಮೂಲಕ ಪ್ರವಾಸಿಗರಿಗೆ ಪ್ರಾಮುಖ್ಯತೆ ನೀಡಬೇಕೆಂದು ಸೂಚಿಸಿದರು.

ಶಾಸಕರ ಭೇಟಿ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಅರಣ್ಯ ಮುಖ್ಯಸಂರಕ್ಷಣಾಧಿಕಾರಿ(ಸಿ.ಸಿ.ಎಫ್) ಬಿ.ಶಂಕರ್, ಡಿಸಿಎಫ್ ಸಿದ್ದರಾಮಯ್ಯ, ರವಿಶಂಕರ್, ತಹಸೀಲ್ದಾರ್ ಮೋಹನ್, ವೀರನಹೊಸಹಳ್ಳಿ ಆರ್‍ಎಫ್‍ಓ ಅನನ್ಯಕುಮಾರ್, ಗ್ರಾ.ಪಂ ಸದಸ್ಯ ಸುಭಾಷ್, ಎಪಿಎಂಸಿ ಮಾಜಿ ಅಧ್ಯಕ್ಷ ಕಿರಂಗೂರು ಬಸವರಾಜು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

Translate »