ಬಹಿರಂಗ ಪ್ರಚಾರಕ್ಕೆ ತೆರೆ
ಮೈಸೂರು

ಬಹಿರಂಗ ಪ್ರಚಾರಕ್ಕೆ ತೆರೆ

August 30, 2018

ಮೈಸೂರು: ಮಿನಿ ಸಮರವೆಂದೇ ಹೇಳಲಾದ ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಬಹಿರಂಗ ಪ್ರಚಾರಕ್ಕೆ ಇಂದು ಬೆಳಿಗ್ಗೆ 7 ಗಂಟೆಗೆ ತೆರೆ ಬಿದ್ದಿತು.

ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಅಬ್ಬರದ ಪ್ರಚಾರ ಅಂತ್ಯಗೊಂಡಿದ್ದು, ಇದೀಗ ಅಭ್ಯರ್ಥಿಗಳು ತಂತಮ್ಮ ವಾರ್ಡ್ ಗಳಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಮತದಾರನ ಸೆಳೆಯಲು ಅಂತಿಮ ಕಸರತ್ತು ನಡೆಸುತ್ತಿದ್ದಾರೆ.

ಐವರು ಬೆಂಬಲಿಗರೊಂದಿಗೆ ಕರಪತ್ರ, ಕಿರು ಪರಿಚಯ ಪುಸ್ತಕಗಳನ್ನು ಮನೆ ಮನೆಗೆ ತಲುಪಿಸಿ ಕೈಮುಗಿದು ತಮಗೆ ಮತ ಹಾಕುವ ಮೂಲಕ ನಿಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡಿ ಎಂದು ಅಭ್ಯರ್ಥಿಗಳು ಮತದಾರರಿಗೆ ಮನವಿ ಮಾಡುತ್ತಿದ್ದದ್ದು ಇಂದು ಕಂಡು ಬಂತು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳ ಬೆಂಬಲಿಗರು ವಾರ್ಡ್‍ನಲ್ಲಿ ಮನೆ ಮನೆಗೆ ತೆರಳಿ ಮತದಾರರ ಗುರುತಿನ ಚೀಟಿಯ ಕ್ರಮ ಸಂಖ್ಯೆ, ಬ್ಲಾಕ್ ಸಂಖ್ಯೆ ಮೂಲಕ ಅವರು ಯಾವ ಮತಗಟ್ಟೆಯಲ್ಲಿ ಮತ ಚಲಾಯಿಸಬೇಕು ಎಂಬುದನ್ನು ಮೊಬೈಲ್‍ನಲ್ಲಿ ತಿಳಿದುಕೊಂಡು ಹೇಳುವ ಕಾರ್ಯದಲ್ಲೂ ನಿರತರಾಗಿದ್ದಾರೆ.

ನಾಳೆ (ಆ.30) ಮೈಸೂರಿನ ಮಹಾರಾಣಿ ಕಲಾ ಕಾಲೇಜು, ಮಹಾ ರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಹಾಗೂ ಟೆರಿಷಿಯನ್ ಕಾಲೇಜು ಕೇಂದ್ರಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮಸ್ಟರಿಂಗ್ ಕಾರ್ಯ ನಡೆಯಲಿದೆ. ಅಧ್ಯಕ್ಷೀಯ ಅಧಿಕಾರಿ ಹಾಗೂ ಮತಗಟ್ಟೆ ಅಧಿಕಾರಿಗಳು ಮತದಾರರ ಪಟ್ಟಿ, ಲೇಖನ ಸಾಮಾಗ್ರಿ, ಅಳಿಸಲಾರದ ಇಂಕ್, ವಿದ್ಯುನ್ಮಾನ ಮತಯಂತ್ರಗಳು ಹಾಗೂ ಸಲಕರಣೆಗಳನ್ನು ಪಡೆದು ಭದ್ರತಾ ಪೊಲೀಸ್ ಸಿಬ್ಬಂದಿಗಳೊಂದಿಗೆ ಕೆಎಸ್‌ಆರ್‌ಟಿಸಿ ಬಸ್‍ಗಳ ಮೂಲಕ ನಿಯೋಜಿತ ಮತಗಟ್ಟೆಗೆ ತಲುಪುವರು. ಆಗಸ್ಟ್ 31ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಸೇರಿ ಒಟ್ಟು 815 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. 4,10,395 ಮಹಿಳೆಯರು, 98 ಇತರರು ಸೇರಿದಂತೆ ಒಟ್ಟು 7,98,673 ಮತದಾರರು ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾವಣೆ ಮಾಡಬೇಕಾಗಿದೆ. ಮೈಸೂರು ನಗರದ 65 ವಾರ್ಡ್‍ಗಳಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್, ಬಿಎಸ್‍ಪಿ, ಎಸ್‍ಡಿಪಿಐ ಸೇರಿ ದಂತೆ ವಿವಿಧ ರಾಜಕೀಯ ಪಕ್ಷಗಳು ಹಾಗೂ ಸ್ವತಂತ್ರರೂ ಸೇರಿ ಒಟ್ಟು 393 ಅಭ್ಯರ್ಥಿಗಳು ಕಣದಲ್ಲಿದ್ದು, ಮತದಾರ ಯಾರಿಗೆ ಒಲಿದಿದ್ದಾನೆಂಬುದು ಸೆಪ್ಟೆಂಬರ್ 3ರಂದು ಬಹಿರಂಗಗೊಳ್ಳಲಿದೆ.

ಪ್ರತೀ ಬೂತ್‍ಗೆ ಒಂದೊಂದು ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಒದಗಿಸಲಾಗಿದ್ದು, ಈ ಬಾರಿ ಕ್ರಮ ಸಂಖ್ಯೆ ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಭಾವಚಿತ್ರವನ್ನೂ ಅಳವಡಿಸಲಾಗಿದ್ದು, ಓಔಖಿಂಗೂ ಅವಕಾಶ ಕಲ್ಪಿಸಲಾಗಿದೆ. ಆದರೆ ವಿವಿ ಪ್ಯಾಟ್ ಯಂತ್ರ ಮಾತ್ರ ಇರುವುದಿಲ್ಲ ಎಂದು ಮೈಸೂರು ಮಹಾನಗರ ಪಾಲಿಕೆ ಕಮೀಷ್ನರ್ ಕೆ.ಹೆಚ್.ಜಗದೀಶ್ ಅವರು ತಿಳಿಸಿದ್ದಾರೆ.

ಹಕ್ಕು ಚಲಾಯಿಸಿದ ಪ್ರತೀ ಮತದಾರರಿಗೂ ಎಡಗೈನ ಉಂಗುರ ಬೆರಳಿಗೆ ಅಳಿಸಲಾರದ ಇಂಕ್‍ನಿಂದ ಗುರುತು ಮಾಡಲಾಗುವುದು. ಸೆಪ್ಟೆಂಬರ್ 3ರಂದು ಬೆಳಿಗ್ಗೆ 8 ಗಂಟೆಗೆ ಮೈಸೂರಿನ ಪಡುವಾರಹಳ್ಳಿ, ವಾಲ್ಮೀಕಿ ರಸ್ತೆಯಲ್ಲಿರುವ ಮಹಾರಾಣಿ ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಹೊಸ ಕಟ್ಟಡದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಅಂದು ಮಧ್ಯಾಹ್ನದ ವೇಳೆಗೆ ಎಲ್ಲಾ 65 ವಾರ್ಡ್‍ಗಳ ಪೂರ್ಣ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ. ಪ್ರತಿ ಮತಗಟ್ಟೆಗಳಲ್ಲಿ ವಿಡಿಯೋ ರೆಕಾರ್ಡ್ ಮಾಡಲಾಗುವುದಲ್ಲದೆ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಿ ಕಟ್ಟೆಚ್ಚರ ವಹಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಕಮೀಷ್ನರ್ ತಿಳಿಸಿದ್ದಾರೆ.

ಮತಯಂತ್ರದಲ್ಲಿ ದೋಷ ಕಂಡು ಬಂದರೆ ತಕ್ಷಣ ಕ್ರಮ

ಮೈಸೂರು: ಪಾಲಿಕೆ ಚುನಾವಣೆಯ ಮತಯಂತ್ರದಲ್ಲಿ ದೋಷ ಕಂಡು ಬಂದರೆ, ತಕ್ಷಣ ಸಮಸ್ಯೆ ನಿವಾರಿಸಲು ನಗರ ಪಾಲಿಕೆಯ ಪ್ರತಿ ವಾರ್ಡಿಗೂ ಮೂರು ಇವಿಎಂ ಯಂತ್ರಗಳನ್ನು ಕಾಯ್ದಿರಿಸಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿಗಳೂ ಆದ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 815 ಮತಗಟ್ಟೆ ಕೇಂದ್ರಗಳಿಗೆ ಸಿಬ್ಬಂದಿಗಳು ತೆರಳಲು 96 ಕೆಎಸ್‍ಆರ್‍ಟಿಸಿ ಬಸ್, 35 ಮಿನಿ ಬಸ್ ಹಾಗೂ 5 ಟೆಂಪೋ ಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಈ ಬಸ್‍ಗಳನ್ನು ನೀಡಲು ಕೆಎಸ್‍ಆರ್‍ಟಿಸಿ ಅಧಿಕಾರಿಗಳು ಹಾಗೂ ಆರ್‍ಟಿಓ ಅಧಿಕಾರಿ ಗಳಿಗೆ ಮನವಿ ಮಾಡಲಾಗಿದೆ ಎಂದರು. ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ಮಹಾರಾಜ ಕಾಲೇಜು, ಮಹಾರಾಣಿ ವಿಜ್ಞಾನ ಮತ್ತು ಕಲಾ ಕಾಲೇಜು, ಪಡುವಾರಹಳ್ಳಿ ಬಳಿ ಇರುವ ಮಹಾ ರಾಣಿ ವಾಣಿಜ್ಯ ಕಾಲೇಜು ಮತ್ತು ಸಿದ್ಧಾರ್ಥ ಬಡಾವಣೆಯ ಟೆರಿಷಿಯನ್ ಕಾಲೇಜಿನಲ್ಲಿ ಮಸ್ಟರಿಂಗ್ ಹಾಗೂ ಡಿ-ಮಸ್ಟರಿಂಗ್ ಕೇಂದ್ರಗಳನ್ನು ತೆರೆಯಲಾಗಿದೆ. ಸೆ.3 ರಂದು ಎಲ್ಲಾ ವಾರ್ಡ್‍ಗಳ ಮತ ಎಣಿಕೆ ಪಡುವಾರಹಳ್ಳಿ ಬಳಿಯ ಮಹಾರಾಣಿ ವಾಣಿಜ್ಯ ಕಾಲೇಜಿನಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು. ಪ್ರತಿಯೊಂದು ಮತಗಟ್ಟೆ ಕೇಂದ್ರಕ್ಕೂ ಕುಡಿಯುವ ನೀರು, ದೀಪದ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಲಾಗಿದೆ.

ಕೆಲವೆಡೆ ಹೆಚ್ಚುವರಿ ಮೊಬೈಲ್ ಶೌಚಾಲಯ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು. ಪ್ರತಿಬಾರಿ ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ಮತದಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಪ್ರತಿ ವಾರ್ಡ್‍ನಲ್ಲೂ ನಡೆಯುತ್ತಿದ್ದು, ಇವಿಎಂ ಮತಯಂತ್ರ ಬಳಕೆ ಬಗ್ಗೆ ಬೀದಿ ನಾಟಕಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಇದಲ್ಲದೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಮತದಾನದ ಬಗ್ಗೆ ಜಾಥಾ, ಕರ ಪತ್ರ ವಿತರಣೆ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲೂ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

3,586 ಸಿಬ್ಬಂದಿ ನಿಯೋಜನೆ: ಆ.31 ರಂದು ನಡೆಯಲಿರುವ ಚುನಾವಣಾ ಪ್ರಕ್ರಿಯೆಯಲ್ಲಿ 3,586 ಮಂದಿ ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದು, ಇವರಲ್ಲಿ 815 ಪಿಆರ್‍ಓ, 1,630 ಎಪಿಆರ್‍ಓ ಹಾಗೂ ಇಬ್ಬರು ಮತಗಟ್ಟೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ತುರ್ತು ಸಂದರ್ಭಕ್ಕೆ ಶೇ.10 ರಷ್ಟು ಸಿಬ್ಬಂದಿಯನ್ನು(326 ಮಂದಿ)ಕಾಯ್ದಿರಿಸಲಾಗಿದೆ ಎಂದು ಮಾಹಿತಿ ನೀಡಿದರು.

2 ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲು: ಈ ಬಾರಿ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಯೋಗದ ನಿರ್ದೇಶನದಂತೆ ಮಾದರಿ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದು, ಈವರೆಗೆ ಎರಡು ಪ್ರತ್ಯೇಕ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ರಾಮಕೃಷ್ಣನಗರದ ವಾರ್ಡ್ ನಂ.58ರ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, ಮತ ಪ್ರಚಾರ ವೇಳೆ ಹಣ ಮತ್ತು ಬೆಳ್ಳಿ ದೀಪವನ್ನು ಹಂಚಿಕೆ ಮಾಡುತ್ತಿದ್ದು, ಸ್ಥಳದಲ್ಲೇ ಸಿಕ್ಕಿ ಬಿದ್ದಿದ್ದಾರೆ. ಈ ವೇಳೆ 3 ಬೆಳ್ಳಿ ದೀಪ, 1670 ರೂ. ನಗದು ವಶಪಡಿಸಿಕೊಂಡಿದ್ದು, ಈ ಕೃತ್ಯದಲ್ಲಿ ಭಾಗಿಯಾದ ಅಭ್ಯರ್ಥಿ ಹೆಚ್.ಸಿ.ಕೃಷ್ಣ ವಿರುದ್ಧ ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ವಾರ್ಡ್ ನಂ. 40ರ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ್ ನೀತಿ ಸಂಹಿತೆ ಉಲ್ಲಂಘಿಸಿ ಬಹಿರಂಗ ಪ್ರಚಾರ ನಡೆಸಿದ್ದು, ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ ಎಂದು ಕೆ.ಎಚ್.ಜಗದೀಶ್ ಮಾಹಿತಿ ನೀಡಿದರು.

Translate »