ಮೊದಲ ತಂಡದ ಗಜಪಡೆಯ ವಿವರ
ಮೈಸೂರು

ಮೊದಲ ತಂಡದ ಗಜಪಡೆಯ ವಿವರ

September 3, 2018

ಮೈಸೂರು: ವಿಶ್ವ ವಿಖ್ಯಾತ ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸುವ ಅರ್ಜುನ ನೇತೃತ್ವದ 6 ಆನೆಗಳ ತಂಡ ಮೈಸೂರಿಗೆ ಆಗಮಿಸಿವೆ. ಇವುಗಳ ನೇತೃತ್ವ ವಹಿಸಿರುವ 58 ವರ್ಷದ ಗಂಡಾನೆ ಅರ್ಜುನ(5870 ಕೆಜಿ) ನನ್ನು 1968ರಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದ್ದು, ಈ ಆನೆ ಕಳೆದ 18 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. ಇದನ್ನು ಬಳ್ಳೆ ಆನೆ ಶಿಬಿರದಿಂದ ಮೈಸೂರಿಗೆ ಕರೆ ತರಲಾಗಿದೆ. 2012ರಿಂದ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಅರ್ಜುನನನ್ನು ಮಾವುತ ವಿನು ಮತ್ತು ಸಣ್ಣಪ್ಪ ನೋಡಿಕೊಳ್ಳುತ್ತಿದ್ದಾರೆ.

1977ರಲ್ಲಿ ಕಾಕನಕೋಟೆಯಲ್ಲಿ ಸೆರೆ ಹಿಡಿಯಲಾಗಿದ್ದ 62 ವರ್ಷದ ಹೆಣ್ಣಾನೆ ವರಲಕ್ಷ್ಮಿ(3325 ಕೆಜಿ) ಕಳೆದ 9 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದು, ಈ ಬಾರಿಯೂ ಮತ್ತಿಗೋಡು ಆನೆ ಶಿಬಿರದಿಂದ ಮೈಸೂರಿಗೆ ಆಗಮಿಸಿದೆ. ವರಲಕ್ಷ್ಮಿಯನ್ನು ಮಾವುತ ಜೆ.ಕೆ.ರವಿ ಮತ್ತು ಕಾವಾಡಿ ಮಾದೇಶ ನೋಡಿಕೊಳ್ಳುತ್ತಿದ್ದಾರೆ.

1990ರಲ್ಲಿ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಸೆರೆಸಿಕ್ಕ 45 ವರ್ಷದ ಗಂಡಾನೆ ವಿಕ್ರಮ(3820 ಕೆಜಿ) ಕಳೆದ 14 ವರ್ಷದಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದು, 2015ರಿಂದ ಪಟ್ಟದ ಆನೆಯಾಗಿ ಅರಮನೆಯ ದಸರಾ ಪೂಜಾ ವಿಧಿ-ವಿಧಾನದಲ್ಲಿ ಭಾಗಿಯಾಗು ತ್ತಿದೆ. ದುಬಾರೆ ಆನೆ ಶಿಬಿರದಿಂದ ಆಗಮಿಸಿರುವ ವಿಕ್ರಮನನ್ನು ಮಾವುತ ಪುಟ್ಟ ಹಾಗೂ ಕಾವಾಡಿ ಹೇಮಂತ್ ಕುಮಾರ್ ಪೋಷಿಸುತ್ತಿದ್ದಾರೆ.

2013ರಲ್ಲಿ ಹಾಸನ ಜಿಲ್ಲೆ ಯಸಳೂರು ಅರಣ್ಯ ಪ್ರದೇಶದಲ್ಲಿ ಸೆರೆಸಿಕ್ಕ 35 ವರ್ಷದ ಗಂಡಾನೆ ಧನಂಜಯ(4050ಕೆಜಿ) ಮೊದಲ ಬಾರಿಗೆ ದಸರಾ ಮಹೋತ್ಸವ ದಲ್ಲಿ ಭಾಗವಹಿಸುತ್ತಿದೆ. ಇದನ್ನು ಪುಂಡಾನೆಗಳನ್ನು ಸೆರೆ ಹಿಡಿಯುವಲ್ಲಿಯೂ ಬಳಸಲಾಗುತ್ತಿದೆ. ಇದರ ಪೋಷಣೆಯನ್ನು ಮಾವುತ ಜೆ.ಸಿ. ಭಾಸ್ಕರ, ಜೆ.ಬಿ.ಸೂನ್ಯ ನಿರ್ವಹಿಸುತ್ತಿದ್ದಾರೆ. ಇದನ್ನು ದುಬಾರೆ ಆನೆ ಶಿಬಿರದಿಂದ ಮೈಸೂರಿಗೆ ಕರೆ ತರಲಾಗಿದೆ.

ಬಂಡೀಪುರ ಆನೆ ಶಿಬಿರದಿಂದ ಮೈಸೂರಿಗೆ ಆಗಮಿಸಿರುವ 45 ವರ್ಷದ ಹೆಣ್ಣಾನೆ ಚೈತ್ರ(3600 ಕೆಜಿ) ಶಾಂತ ಸ್ವಭಾವವುಳ್ಳದ್ದಾಗಿದ್ದು, ಕಳೆದ 4 ವರ್ಷದಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸಿದೆ. ಇದು ಆನೆ ಶಿಬಿರದಲ್ಲಿದ್ದ ಗಂಗೆ ಎಂಬ ಹೆಣ್ಣಾನೆಗೆ ಜನಿಸಿದ್ದಾಗಿದೆ. ಇದನ್ನು ಮಾವುತ ಮಹದೇವ, ಕಾವಾಡಿ ಕಲೀಂ ನಿರ್ವಹಿಸುತ್ತಿದ್ದಾರೆ. 1993ರಲ್ಲಿ ಕಾರ್ಯ ಕೊಪ್ಪ ಅರಣ್ಯ ಪ್ರದೇಶದಲ್ಲಿ ಸೆರೆಸಿಕ್ಕ 36 ವರ್ಷದ ಗಂಡಾನೆ ಗೋಪಿ(3710 ಕೆಜಿ) ಕಳೆದ 8 ವರ್ಷಗಳಿಂದ ದಸರಾ ಮಹೋತ್ಸವ ದಲ್ಲಿ ಭಾಗವಹಿಸುತ್ತಿದೆ. ಇದು ದುಬಾರೆ ಆನೆ ಶಿಬಿರದಲ್ಲಿ ಸಫಾರಿ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದು, ಇದನ್ನು ಮಾವುತ ನವೀದ್, ಕಾವಾಡಿ ಅಪ್ಪಯ್ಯ ನಿರ್ವಹಿಸುತ್ತಿದ್ದಾರೆ.

Translate »