ಗಜ ಪಯಣಕ್ಕೆ ಅದ್ಧೂರಿ ಚಾಲನೆ
ಮೈಸೂರು

ಗಜ ಪಯಣಕ್ಕೆ ಅದ್ಧೂರಿ ಚಾಲನೆ

September 3, 2018

ಹನಗೋಡು:  ಮಂಗಳವಾದ್ಯ ನಿನಾದ, ಸಹಸ್ರಾರು ಜನರ ಹರ್ಷೋದ್ಘಾರದ ನಡುವೆ ಮೊದಲ ತಂಡದ ಗಜ ಪಯಣ ಅದ್ಧೂರಿಯಾಗಿ ನೆರವೇರಿತು. ಇದರೊಂದಿಗೆ ಮೈಸೂರು ದಸರಾ ಮಹೋತ್ಸವದ ಸಾಂಪ್ರದಾಯಿಕ ಆಚರಣೆಗಳಿಗೂ ವಿಧ್ಯುಕ್ತ ಚಾಲನೆ ದೊರಕಿತು.

ಹುಣಸೂರು ತಾಲೂಕಿನ ವೀರನಹೊಸ ಹಳ್ಳಿ ಗ್ರಾಮದ ಸಮೀಪ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಪ್ರವೇಶ ದ್ವಾರದ ಬಳಿ ಅರ್ಜುನ ನೇತೃತ್ವದ ಧನಂಜಯ, ಗೋಪಿ, ವಿಕ್ರಮ ಹಾಗೂ ಸರಳ ಗಜ ಪಡೆಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಪುಷ್ಪಾರ್ಚನೆ ಮಾಡುವ ಮೂಲಕ ಗಜ ಪಯಣಕ್ಕೆ ಚಾಲನೆ ನೀಡಿದರು.

ಇದಕ್ಕೂ ಮುನ್ನ ಅರಮನೆ ಪುರೋಹಿತ ಪ್ರಹ್ಲಾದ್ ರಾವ್ ಅವರು, ಆನೆಗಳ ಪಾದಗಳನ್ನು ಶುಚಿಗೊಳಿಸಿ, ಕಡುಬು, ಚಕ್ಕುಲಿ, ಕೋಡು ಬಳೆ, ಮೋದಕ ವನ್ನಿಟ್ಟು ನೈವೇದ್ಯ ಮಾಡಿ, ವಿಘ್ನ ವಿನಾಯಕ ಪೂಜೆ ಸಲ್ಲಿಸಿದರು. ಗಣಪತಿ ಅರ್ಚನೆ ಬಳಿಕ ಎಲ್ಲಾ ಆನೆಗಳಿಗೆ ಪ್ರಿಯವಾದ ಕಬ್ಬು ಹಾಗೂ ಬೆಲ್ಲವನ್ನು ಮೆಲ್ಲಲು ನೀಡಿ, ಸಾಂಪ್ರ ದಾಯಿಕವಾಗಿ ಸ್ವಾಗತಿಸಲಾಯಿತು. ಡೊಳ್ಳು ಕುಣಿತ, ಬೊಂಬೆ ಕುಣಿತ, ಮಂಗಳ ವಾದ್ಯ ಇನ್ನಿತರ ಜಾನ ಪದ ಕಲಾತಂಡಗಳೊಂದಿಗೆ ಮಹಿಳೆ ಯರು, ಹಾಡಿ ಮಕ್ಕಳು ಪೂರ್ಣಕುಂಭ ಸ್ವಾಗತ ನೀಡಿದರು. ಇಲ್ಲಿನ ಆಂಜನೇಯ ಸ್ವಾಮಿ ದೇವಾಲಯದ ಬಳಿ ನಿಂತು ಗಜ ಪಯಣದ ಘಳಿಗೆಯನ್ನು ಕಣ್ತುಂಬಿಕೊಂಡ ಸಹಸ್ರಾರು ಜನರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಇದೆಲ್ಲದರ ನಡುವೆ ಭೀಮ ಹಾಗೂ ಅಭಿಮನ್ಯು ಆನೆಗಳ ಅನುಪಸ್ಥಿತಿಯಿಂದ ಸ್ಥಳೀಯರಲ್ಲಿ ನಿರಾಸೆ ಮೂಡಿಸಿತ್ತು.

ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್, ಶಾಸಕರಾದ ಎ.ಹೆಚ್. ವಿಶ್ವನಾಥ್, ತನ್ವೀರ್ ಸೇಠ್, ಎಲ್. ನಾಗೇಂದ್ರ ಕೆ.ಟಿ.ಶ್ರೀಕಂಠೇಗೌಡ, ಹರ್ಷ ವರ್ಧನ, ಕೆ.ಮಹದೇವು, ಅಶ್ವಿನ್‍ಕುಮಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಯೀಮಾ ಸುಲ್ತಾನ, ತಾಲೂಕು ಪಂಚಾಯ್ತಿ ಅಧ್ಯಕ್ಷೆ ಪದ್ಮಮ್ಮ, ಉಪಾಧ್ಯಕ್ಷ ಪ್ರೇಮಕುಮಾರ್, ಐಜಿಪಿ ಶರತ್‍ಚಂದ್ರ, ಜಿಲ್ಲಾಧಿಕಾರಿ ಅಭಿ ರಾಮ್ ಜಿ.ಶಂಕರ್ಸೇರಿದಂತೆ ಅನೇಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಹಬ್ಬದ ಸಂಭ್ರಮ: ಗಜ ಪಯಣ ಆರಂಭವಾದ ವೀರನಹೊಸಹಳ್ಳಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸುತ್ತಮುತ್ತಲ ಗ್ರಾಮದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಗಜ ಪಡೆಯನ್ನು ಸ್ವಾಗತಿಸಿದ ನಂತರ ವೇದಿಕೆ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲ ಮಾವುತರು ಹಾಗೂ ಕಾವಾಡಿಗಳಿಗೆ ಶಾಲು ಹೊದಿಸಿ, ಫಲ ತಾಂಬೂಲದೊಂದಿಗೆ ಅಭಿನಂದಿಸಿ, ದಸರೆಗೆ ಆಗಮಿಸುವಂತೆ ವಿಧ್ಯುಕ್ತ ಆಹ್ವಾನ ನೀಡಿದರು.

ಇದೇ ಸಂದರ್ಭದಲ್ಲಿ ಸಾ ಮಿಲ್ ಹಾಗೂ ಟಿಂಬರ್ ಮರ್ಚೆಂಟ್ಸ್ ಅಸೋಸಿಯೇಷನ್ ವತಿಯಿಂದ ಕೊಡಗಿನ ನೆರೆ ಸಂತ್ರಸ್ತರ ನೆರವಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಸಾವಿರ ರೂ. ದೇಣಿಗೆ ನೀಡಲಾಯಿತು.

ಹಾಡಿ ಮಕ್ಕಳ ನೃತ್ಯ ವೈಭವ: ವೀರನಹೊಸಹಳ್ಳಿ ಮತ್ತು ನಾಗಾಪುರ ಆಶ್ರಮ ಶಾಲೆಯ ಮಕ್ಕಳು ಸ್ವಾಗತ ನೃತ್ಯ ಪ್ರದರ್ಶಿಸಿದರೆ, ಹರಳಹಳ್ಳಿ ಶಾಲೆಯ ಮಕ್ಕಳು `ಅಡವಿ ದೇವಿಯ ಕಾಡು ಜನಗಳ ಈ ಹಾಡು…’ ಹಾಡಿಗೆ ಮನಮೋಹಕವಾಗಿ ನರ್ತಿಸಿದರು. ವೀರನಹೊಸಹಳ್ಳಿ, ನಲ್ಲೂರುಪಾಲ ಆಶ್ರಮ ಶಾಲೆ, ನಾಗಾಪುರ ಪ್ರೌಢಶಾಲಾ ವಿದ್ಯಾರ್ಥಿಗಳು ವಿಭಿನ್ನ ನೃತ್ಯ ಪ್ರದರ್ಶಿಸುವ ಮೂಲಕ ನೆರೆದಿದ್ದವರ ಮನಸೂರೆಗೊಂಡರು. ಗುರುಪುರ ಟಿಬೇಟಿಯನ್ ಕೇಂದ್ರೀಯ ಶಾಲೆ ವಿದ್ಯಾರ್ಥಿಗಳು ತಮ್ಮ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯ ಪ್ರದರ್ಶಿಸಿದರು. ನೆರೆದಿದ್ದವರು ಕೇಕೆ, ಶಿಳ್ಳೆಯೊಂದಿಗೆ ಸಾಂಸ್ಕೃತಿಕ ವೈಭವವನ್ನು ಆಸ್ವಾದಿಸಿದರು. ಗಿರಿಜನ ಯುವಕರು ತಮ್ಮ ಮೊಬೈಲ್‍ಗಳಲ್ಲಿ ರೆಕಾರ್ಡ್ ಮಾಡಿಕೊಳ್ಳುವಲ್ಲಿ ತಲ್ಲೀನರಾಗಿದ್ದರು. ಕೀನ್ಯಾ ಇನ್ನಿತರ ವಿದೇಶಿ ವಿದ್ಯಾರ್ಥಿಗಳೂ ಗಜ ಪಯಣದ ಸಂಪೂರ್ಣ ಕಾರ್ಯಕ್ರಮವನ್ನು ಸವಿದು, ಮೆಚ್ಚುಗೆ ವ್ಯಕ್ತಪಡಿಸಿದರು.

ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ವೀರನಹೊಸಹಳ್ಳಿ ಗ್ರಾಮದಲ್ಲಿ ಗಜ ಪಯಣ ಕಾರ್ಯಕ್ರಮ ನಡೆಸುವುದು ಸೂಕ್ತವಲ್ಲವೆಂದು ಕಳೆದ 6 ವರ್ಷಗಳಿಂದಲೂ ನಾಗಾಪುರ ಆಶ್ರಮ ಶಾಲೆ ಬಳಿ ಆಯೋಜಿಸಲಾಗುತ್ತಿತ್ತು. ಆದರೆ ಸಾರ್ವಜನಿಕರ ಒತ್ತಾಯದ ಮೇರೆಗೆ ಈ ಬಾರಿ ಮತ್ತೆ ವೀರನಹೊಸಹಳ್ಳಿಯಲ್ಲೇ ಗಜ ಪಯಣ ನೆರವೇರಿತು.

ಅರಣ್ಯ ಭವನ ಆವರಣದಲ್ಲಿ ಗಜಪಡೆ

ಅಕ್ಟೋಬರ್ 10ರಿಂದ 19ರವರೆಗೆ ನವರಾತ್ರಿ ದಸರಾ ಮಹೋತ್ಸವ ನಡೆಯ ಲಿದ್ದು, ಇದರ ಮುನ್ನುಡಿಯಾಗಿ ಇಂದು ಗಜಪಯಣಕ್ಕೂ ಚಾಲನೆ ದೊರಕಿದೆ. ಜಂಬೂಸವಾರಿಯಲ್ಲಿ ಭಾಗಿಯಾಗುವ ಗಜಪಡೆಯಲ್ಲಿ ಮೊದಲ ಹಂತದಲ್ಲಿ ಒಟ್ಟು 6 ಆನೆಗಳು ನಾಡಿಗೆ ಆಗಮಿಸಿವೆ. ವೀರನಹೊಸಹಳ್ಳಿಯಿಂದ ಅರ್ಜುನ, ಧನಂಜಯ, ಗೋಪಿ, ವಿಕ್ರಮ ಹಾಗೂ ಸರಳ ಹಾಗೂ ಬಂಡಿಪುರದಿಂದ ಚೈತ್ರ ಆನೆ ಭಾನುವಾರ ಸಂಜೆ ಮೈಸೂರಿನ ಅರಣ್ಯ ಭವನದ ಆವರಣಕ್ಕೆ ಸುರಕ್ಷಿತವಾಗಿ ತಲುಪಿವೆ. ಸೆ.5ರಂದು ಈ ಗಜಪಡೆ ಅರಮನೆ ಅಂಗಳವನ್ನು ಪ್ರವೇಶಿಸಲಿದ್ದು, ಅಂದು ಸಂಜೆ 4.30ಕ್ಕೆ ಮೈಸೂರು ಅರಮನೆ ಮಂಡಳಿ ವತಿಯಿಂದ ಗಜ ಸ್ವಾಗತ ನೆರವೇರಲಿದೆ.

Translate »