ರಕ್ಷಣಾ ಸಚಿವೆ ವಿರುದ್ಧ ಕೊಡಗಿನ ಜನಪ್ರತಿನಿಧಿಗಳ ಅಸಮಾಧಾನ: ಪರಿಸರವಾದಿಗಳೊಂದಿಗೆ ಚರ್ಚಿಸಿದ್ದೇ ಕಾರಣ
ಮೈಸೂರು

ರಕ್ಷಣಾ ಸಚಿವೆ ವಿರುದ್ಧ ಕೊಡಗಿನ ಜನಪ್ರತಿನಿಧಿಗಳ ಅಸಮಾಧಾನ: ಪರಿಸರವಾದಿಗಳೊಂದಿಗೆ ಚರ್ಚಿಸಿದ್ದೇ ಕಾರಣ

September 3, 2018

ಮಡಿಕೇರಿ: ಕೊಡಗು ಜಿಲ್ಲೆಯ ಪ್ರಕೃತಿ ವಿಕೋಪ ಪರಿಶೀಲನೆಗೆ ಬಂದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಅವರು ಪರಿಸರವಾದಿಗಳೊಂದಿಗೆ ಮಾತುಕತೆ ನಡೆಸಿ ಅವರ ಮನವಿ ಸ್ವೀಕರಿಸಿದರು. ಇದು ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ.ಮಹೇಶ್ ಸೇರಿದಂತೆ ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಸುನೀಲ್ ಸುಬ್ರಮಣಿ ಅವರ ಆಕ್ರೋಷಕ್ಕೆ ಕಾರಣವಾಯಿತ್ತಲ್ಲದೆ ಕೇಂದ್ರ ಸಚಿವೆ ಹಾಗೂ ಜನಪ್ರತಿನಿಧಿಗಳ ನಡುವೆ ವಾಗ್ವಾದ ನಡೆಯಿತು.

ಜಿಲ್ಲಾಧಿಕಾರಿ ಕಚೇರಿಗೆ ಬಂದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್, ಅಧಿಕಾರಿಗಳ ಸಭೆಗೂ ಮುನ್ನ, ನಿವೃತ್ತ ಏರ್ ಮಾರ್ಷಲ್ ಕೊಡಂದೇರ ನಂದಾ ಕಾರ್ಯಪ್ಪ (ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಪುತ್ರ), ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂ ಅಧ್ಯಕ್ಷರಾದ ಕರ್ನಲ್ ಕಡ್ರತಂಡ ಸಿ. ಸುಬ್ಬಯ್ಯ, ಸಂಚಾಲಕರಾದ ಮೇಜರ್ ಬಿದ್ದಂಡ ನಂದಾ ನಂಜಪ್ಪ, ಮೇಜರ್ ಓಡಿಯಂಡ ಎಸ್.ಚಿಂಗಪ್ಪ, ಗ್ರೂಪ್ ಕ್ಯಾಪ್ಟನ್ ಶುಭ್‍ಜಿ, ಮೇಜರ್ ಜನರಲ್ ಸೋಮಯಂಡ ಕೆ.ಕಾರ್ಯಪ್ಪ, ಕರ್ನಲ್ ಪಟ್ರಪಂಡ ಎಸ್.ಮುತ್ತಣ್ಣ ಸೇರಿದಂತೆ ಅಲ್ಲಿಗೆ ಬಂದ ಕೆಲವು ನಿವೃತ್ತ ಸೇನಾಧಿಕಾರಿಗಳನ್ನು ರಕ್ಷಣಾ ಸಚಿವರು ಭೇಟಿಯಾದರು.

ಕೊಡಗಿನಲ್ಲಿ ಪರಿಸರ ಸಂರಕ್ಷಣೆಯಾಗಬೇಕು ಮತ್ತು ಪಶ್ಚಿಮಘಟ್ಟ ಉಳಿಸಲು ಡಾ.ಕಸ್ತೂರಿರಂಗನ್ ವರದಿ ಜಾರಿಯಾಗಬೇಕೆಂದು ವಾದಿಸುತ್ತಲೇ ಬಂದಿದ್ದ ಮಾಜಿ ಸೇನಾಧಿಕಾರಿಗಳು ಸಚಿವೆಯನ್ನು ಭೇಟಿ ಮಾಡಲು ಬಂದಿರುವುದನ್ನು ಗಮನಿಸಿದ ಸ್ಥಳೀಯ ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ಎಂ.ಪಿ.ಸುನೀಲ್ ಸುಬ್ರಹ್ಮಣಿ, ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್, ಮಾಜಿ ಅಧ್ಯಕ್ಷ ರವಿಕುಶಾಲಪ್ಪ, ಬಿಜೆಪಿ ರಾಜ್ಯ ಕಾರ್ಯದರ್ಶಿ ಮನುಮುತ್ತಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಈ ನಡುವೆಯೇ ಸಚಿವೆ ನಿರ್ಮಲಾ ಸೀತಾರಾಮ್ ಮಾಜಿ ಸೇನಾಧಿಕಾರಿಗಳೊಂದಿಗೆ ಕೊಡಗಿನ ಪರಿಸ್ಥಿತಿಯ ಬಗ್ಗೆ ಸುದೀರ್ಘವಾಗಿ ಮಾತುಕತೆ ನಡೆಸಲು ಮುಂದಾದರು. ಇದು ಜನಪ್ರತಿನಿಧಿಗಳನ್ನು ಮತ್ತಷ್ಟು ಕೆರಳಿಸಿತು. ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರು ಕೂಡ ಸಚಿವೆ ಈ ರೀತಿ ಅಧಿಕಾರಿಗಳ ಸಭೆ ಬಿಟ್ಟು ಡಾ.ಕಸ್ತೂರಿರಂಗನ್ ವರದಿ ಜಾರಿಯ ಪರವಾಗಿರುವವರೊಂದಿಗೆ ಮಾತುಕತೆ ನಡೆಸುತ್ತಿರುವುದರ ವಿರುದ್ದ ತೀವ್ರ ಅತೃಪ್ತಿ ಹೊರಹಾಕಿದರು.

ಸಚಿವರು ತಕ್ಷಣ ಸಭೆಗೆ ಬರಬೇಕು, ಇಲ್ಲದಿದ್ದರೆ ಸಭಾತ್ಯಾಗ ಮಾಡುವುದಾಗಿ ಉಸ್ತುವಾರಿ ಸಚಿವರೂ ಸೇರಿದಂತೆ ಶಾಸಕರು ಪಟ್ಟು ಹಿಡಿದಾಗ ಸ್ಥಳದಲ್ಲಿದ್ದ ಸಂಸದ ಪ್ರತಾಪ್ ಸಿಂಹ ಗಲಿಬಿಲಿಗೊಳಗಾದರು. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ್ ಚರ್ಚೆ ನಡೆಸುತ್ತಿದ್ದಲ್ಲಿಗೆ ತೆರಳಿದ ಸಂಸದರು, ಸಭೆಗೆ ತಡವಾಗುತ್ತಿದೆ, ಸಚಿವ, ಶಾಸಕರು ಕಾಯುತ್ತಿದ್ದಾರೆ ಎಂದಾಗ ಸಚಿವೆ ರೇಗಿದರಲ್ಲದೇ, ತಾನು ಮಾಜಿ ಸೈನಿಕ ರೊಂದಿಗೆ ಮಾತನಾಡುತ್ತಿದ್ದು, ಸೇನೆ ಜಿಲ್ಲೆಗೆ ಭೇಟಿ ನೀಡಿದ ಮೇಲೆ ಇವರೊಂದಿಗೂ ಚರ್ಚಿಸುವುದು ತನ್ನ ಕರ್ತವ್ಯ ಎಂದರು.

ನಿವೃತ್ತ ಸೇನಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಅಲ್ಲಿಯೇ ಇದ್ದ ಸೇನಾನಿಗಳ ಜತೆ ಚರ್ಚಿಸಲು ರಕ್ಷಣಾ ಸಚಿವರು ಮುಂದಾದರು. ಈ ಸಂದರ್ಭ ಉಸ್ತುವಾರಿ ಸಚಿವ ಸಾ.ರಾ.ಮಹೇಶ್, ಮೇಡಂ, ಅಧಿಕಾರಿಗಳು ಸಾಕಷ್ಟು ಹೊತ್ತಿನಿಂದ ಕಾಯುತ್ತಿದ್ದಾರೆ. ಮೊದಲು ಸಭೆ ನಡೆಸಿ ಎಂದು ಒತ್ತಾಯಪೂರ್ವಕವಾಗಿ ಹೇಳಿದರು. ಇದರಿಂದ ಸಿಟ್ಟಗೆದ್ದ ಸಚಿವೆ ನಿರ್ಮಲಾ ಸೀತಾರಾಮ್, `ನಾನು ನನ್ನ ಕಾರ್ಯ ಕ್ರಮ ಪಟ್ಟಿಯಾನುಸಾರ ಮುಂದುವರೆ ಯುತ್ತಿದ್ದು, ನೀವು ಹೇಳುವ ಪ್ರಕಾರ ನಡೆಯಬೇಕೆಂದಿದ್ದರೆ ಹಾಗೇ ಮಾಡೋಣ’ ಎಂದರು. `ಅಧಿಕಾರಿಗಳು ಪರಿಹಾರ ಕಾರ್ಯಾಚರಣೆ ಬಿಟ್ಟು ಸಭೆಗೆ ಯಾಕೆ ಬಂದರು?’ ಎಂದೂ ಸಚಿವೆ ಪ್ರಶ್ನಿಸಿದರು. ಈ ಸಂದರ್ಭ ಶಾಸಕ ಕೆ.ಜಿ.ಬೋಪಯ್ಯ ‘ನಿಮಗನ್ನಿಸಿದ್ದನ್ನು ನೀವು ಮಾಡಿ’ ಎಂದು ಸಿಟ್ಟಿನಿಂದಲೇ ಹೇಳಿದರು. ಇದರಿಂದ ವಿಚಲಿತರಾದ ರಕ್ಷಣಾ ಸಚಿವೆ, ‘ನಾನು ಸೆಂಟ್ರಲ್ ಡಿಫೆನ್ಸ್ ಮಿನಿಸ್ಟರ್ ಇದ್ದೇನೆ, ನೀವು ಹೇಳಿದಂತೆ ಕೇಳಬೇಕೆಂದು ನೀವು ಬಯಸುತ್ತಿದ್ದೀರಿ. ಸರಿ.. ಹಾಗಿದ್ದರೆ ನಿಮ್ಮ ಇಚ್ಛೆ ಯಂತೆ ಸಭೆ ನಡೆಸೋಣ ಬನ್ನಿ’ ಎಂದು ಸ್ಥಳದಿಂದ ಹೊರಟರು.

ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿಯೂ ಅಸಹನೆಯಿಂದಲೇ ರಕ್ಷಣಾ ಸಚಿವರು ಜಿಲ್ಲಾಧಿಕಾರಿ ಶ್ರೀವಿದ್ಯಾ ಪ್ರದರ್ಶಿಸಿದ ಕೊಡಗು ಪ್ರಕೃತಿ ವಿಕೋಪದ ಪ್ರಾತ್ಯಕ್ಷಿಕೆ ಗಮನಿಸಿದರು. ಒಂದು ಹಂತದಲ್ಲಿ ಯಾರು ಸಭೆಯಲ್ಲಿ ಮಾತನಾಡುವುದು ಎಂಬ ಪ್ರಶ್ನೆ ಎದ್ದಾಗ ಉಸ್ತುವಾರಿ ಸಚಿವರಿಗೆ ಸಚಿವೆ ಇದನ್ನೆಲ್ಲಾ ನೀವು ಮಾತನಾಡಿಕೊಂಡು ನಿರ್ಧರಿಸಿ. ನಿಮ್ಮೊಳಗಿನ ಭಿನ್ನಾಭಿಪ್ರಾಯ ಪರಿಹರಿಸಿಕೊಳ್ಳಿ ಎಂದು ಗರಂ ಆಗಿಯೇ ಹೇಳಿದರು. ಅಧಿಕಾರಿಗಳ ಸಭೆಯಲ್ಲಿಯೂ ಹೆಚ್ಚೇನು ಹೇಳದ ಸಚಿವೆ ನಿರ್ಮಲಾ ಸೀತಾರಾಮನ್ ತರಾತುರಿಯಿಂದಲೇ ಸಭೆಯನ್ನು ಮುಕ್ತಾಯಗೊಳಿಸಿದರು.

Translate »