`ಕೊಡಗಿಗೆ ನಮ್ಮ ಕೊಡುಗೆ’ ಪಾದಯಾತ್ರೆ
ಮೈಸೂರು

`ಕೊಡಗಿಗೆ ನಮ್ಮ ಕೊಡುಗೆ’ ಪಾದಯಾತ್ರೆ

September 3, 2018

ಬೆಂಗಳೂರು: ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಕೊಡಗು ಜಿಲ್ಲೆಯ ಪುನರ್ ನಿರ್ಮಾಣಕ್ಕಾಗಿ ಶ್ರೀ ಆದಿಚುಂಚನಗಿರಿ ಮಠ ಶ್ರೀಕ್ಷೇತ್ರದ ನೇತೃತ್ವದಲ್ಲಿ ದೇಣಿಗೆ ಸಂಗ್ರಹಿಸಲು ಇಂದು ನಗರದಲ್ಲಿ `ಕೊಡಗಿಗೆ ನಮ್ಮ ಕೊಡುಗೆ’ ಪಾದಯಾತ್ರೆ ನಡೆಸಲಾಯಿತು.

ಶ್ರೀ ಕ್ಷೇತ್ರದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ಶಾಸಕರಾದ ವಿ.ಸೋಮಣ್ಣ, ಎಂ.ಕೃಷ್ಣಪ್ಪ, ಕೆ.ಗೋಪಾಲಯ್ಯ, ಮಾಜಿ ಶಾಸಕ ಶಿವರಾಮಗೌಡ ಸೇರಿದಂತೆ ಅನೇಕ ಪ್ರಮುಖರು ಭಾಗವಹಿಸಿದ್ದರು.

ವಿಜಯನಗರದಲ್ಲಿರುವ ಶ್ರೀಕ್ಷೇತ್ರದ ಆವರಣದಿಂದ ಆರಂಭಗೊಂಡ ಪಾದಯಾತ್ರೆ ಶನಿಮಹಾತ್ಮ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಮಾಗಡಿ ರಸ್ತೆಯ ಆಂಜನೇಯಸ್ವಾಮಿ ದೇವಸ್ಥಾನ, ವಿಜಯನಗರದ ಮಾರುತಿ ಮಂದಿರದ ಮೂಲಕ ನಡೆದ ಪಾದಯಾತ್ರೆ ಸಂಕಷ್ಟಹರ ಗಣಪತಿ ದೇವಸ್ಥಾನದಲ್ಲಿ ಮುಕ್ತಾಯವಾಯಿತು.

ಡಾ.ಶ್ರೀ ನಿರ್ಮಲಾನಂದನಾಥ ಶ್ರೀಗಳು ಮಾರ್ಗದುದ್ದಕ್ಕೂ ಪಾದಯಾತ್ರೆಯಲ್ಲಿ ದೇಣಿಗೆ ಸಂಗ್ರಹಕ್ಕೆ ಪ್ರೇರೇಪಣೆ ನೀಡಿದರು. ಆರಂಭದಲ್ಲಿ ಮಾತನಾಡಿದ ಶ್ರೀಗಳು, ಕೊಡಗು ಜಿಲ್ಲೆ ನಮಗೆ ಹಸಿರು ಮತ್ತು ಉಸಿರನ್ನು ಕೊಟ್ಟಿದೆ. ನಮ್ಮ ದೇಹದ ಭಾಗದಂತಿರುವ ಕೊಡಗಿಗೆ ಮಳೆಯಿಂದ ಹಾನಿಯಾಗಿದೆ. ಅದನ್ನು ಪುನರ್ ನಿರ್ಮಿ ಸುವ ಕೆಲಸವನ್ನು ನಾವು ಮಾಡಬೇಕಿದೆ ಎಂದರು. ಕೊಡಗಿಗಾಗಿ ನಮ್ಮ ನಡಿಗೆ, ಈ ಪಾದಯಾತ್ರೆಯಲ್ಲಿ ಕ್ರಿಶ್ಚಿಯನ್ ಸಮುದಾಯದ ಫಾದರ್‍ಗಳು, ಇಸ್ಲಾಂ ಧರ್ಮದ ಮೌಲ್ವಿಗಳು, ಬೌದ್ಧ ಧರ್ಮದ ಗುರುಗಳು, ಪಾರ್ಸಿ ಸಮುದಾಯದ ಧಾರ್ಮಿಕ ಮುಖಂಡರು ಸೇರಿದಂತೆ ಸರ್ವಧರ್ಮಗಳ ಧಾರ್ಮಿಕ ಮುಖಂಡರು, ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಚಲನಚಿತ್ರ ಕಲಾವಿದರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು. ಮಳೆಯಿಂದ ಸಂತ್ರಸ್ತರಾಗಿರುವ ಕೊಡಗಿನವರ ಸಂಕಷ್ಟಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಅಲ್ಲಿ ಪ್ರಾಣ ಕಳೆದುಕೊಂಡವರಿಗೆ ನಮ್ಮ ಶ್ರದ್ಧಾಂಜಲಿ ಸಲ್ಲಬೇಕಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ, ಮಳೆ ಅನಾಹುತ ಸಂಭವಿಸಿದ ಸಂದರ್ಭದಲ್ಲೇ ನಾವು ಅಲ್ಲಿಗೆ ತೆರಳಿ ಸುಮಾರು 80 ಲಕ್ಷ ರೂ.ನಷ್ಟು ಸಹಾಯ ಮಾಡಿದ್ದೇವೆ. ಶ್ರೀಮಠದ ಮೂಲಕ ಮತ್ತಷ್ಟು ನೆರವು ನೀಡುತ್ತೇವೆ ಎಂದು ಭರವಸೆ ನೀಡಿದರು.

ಶಾಸಕ ವಿ.ಸೋಮಣ್ಣ ಅವರು ವೈಯಕ್ತಿಕವಾಗಿ 20 ಲಕ್ಷ ರೂ.ಗಳನ್ನು ನೀಡುವುದಾಗಿ ಘೋಷಣೆ ಮಾಡಿ, ಶ್ರೀ ನಿರ್ಮಲಾನಂದನಾಥ ಶ್ರೀಗಳು ಭಾರೀ ಮಳೆ ಸಂದರ್ಭದಲ್ಲಿ ಮೂರು ದಿನ ಕೊಡಗಿನಲ್ಲೇ ನೆಲೆಯೂರಿ ಅಲ್ಲಿನವರ ಕಷ್ಟಗಳಿಗೆ ಸ್ಪಂದಿಸಿ ಮಾನ ವೀಯತೆ ಮೆರೆದರು ಎಂದು ಹೇಳಿದರು.

ವಿಜಯನಗರ ಮತ್ತು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಗಳ ಬಿಬಿಎಂಪಿ ಸದಸ್ಯರಿಂದ 20 ಲಕ್ಷ ರೂ. ದೇಣಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು. ಮಾಜಿ ಸಚಿವ ಎಂ.ಕೃಷ್ಣಪ್ಪ 25 ಲಕ್ಷ ರೂ.ಗಳನ್ನು, ಶಾಸಕ ಗೋಪಾಲಯ್ಯ 2 ಲಕ್ಷ ರೂ. ಗಳನ್ನು, ಮಾಜಿ ಉಪ ಮೇಯರ್ ಎಂ.ಶ್ರೀನಿವಾಸ್ ಅವರು ತಮ್ಮ 10 ವರ್ಷ ವೇತನ 5 ಲಕ್ಷ ರೂ.ವನ್ನು, ಜೆಡಿಎಸ್‍ನ ಬೆಂಗಳೂರು ನಗರಾಧ್ಯಕ್ಷ ಪ್ರಕಾಶ್ 50 ಸಾವಿರ, ಶಿಡ್ಲಘಟ್ಟ ಒಕ್ಕಲಿಗರ ಸಂಘದಿಂದ 10 ಸಾವಿರ ರೂ. ದೇಣಿಗೆಯನ್ನು ಆರಂಭದಲ್ಲಿ ಶ್ರೀಗಳ ಮೂಲಕ ಕೊಡಗು ಸಂತ್ರಸ್ತರಿಗಾಗಿ ಅರ್ಪಿಸಲಾಯಿತು.

ಪಾದಯಾತ್ರೆಯ ಮಾರ್ಗದುದ್ದಕ್ಕೂ ಅಂಗಡಿ-ಮುಂಗಟ್ಟುಗಳ ಮಾಲೀಕರು, ವ್ಯಾಪಾರಸ್ಥರು, ಸಾರ್ವಜನಿಕರು, ನಿವಾಸಿಗಳು ಉದಾರತೆಯಿಂದ ದೇಣಿಗೆ ನೀಡಿ `ಕೊಡಗಿಗೆ ನಮ್ಮ ಕೊಡುಗೆ’ ಪಾದಯಾತ್ರೆಗೆ ಸ್ಪಂದಿಸಿದರು.

Translate »