ಬೆಂಗಳೂರು, ಫೆ.21- ಕೊರೊನಾದಿಂದ ಸಾಕಷ್ಟು ನಷ್ಟ ಅನುಭವಿಸಿರುವ ಕೆಲವು ಕ್ಷೇತ್ರಗಳಿಗೆ ತೆರಿಗೆ ವಿನಾಯಿತಿ ನೀಡುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕರ್ನಾಟಕ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (ಎಫ್‍ಕೆಸಿಸಿಐ) ಸದಸ್ಯರು ಮನವಿ ಮಾಡಿದ್ದಾರೆ. ರಾಜ್ಯ ಬಜೆಟ್‍ಗೆ ಇನ್ನು ಕೆಲ ದಿನಗಳು ಬಾಕಿಯಿದ್ದು, ಈ ಹಿನ್ನೆಯಲ್ಲಿ ವಿವಿಧ ವಲಯಗಳ ಸದಸ್ಯರೊಂದಿಗೆ ಚರ್ಚೆ ನಡೆಸುವ ಸಲುವಾಗಿ ನಿರ್ಮಲಾ ಸೀತಾ ರಾಮನ್ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವೆ ನಿರ್ಮಲಾ ಅವರನ್ನು ನಿನ್ನೆ ಭೇಟಿ ಮಾಡಿರುವ ಎಫ್‍ಕೆಸಿಸಿಐ ಅಧ್ಯಕ್ಷ ಸುಂದರ್ ಪೆರಿಕಾಲ್ ಅವರು, ಕೇಂದ್ರ ಬಜೆಟ್‍ನಲ್ಲಿ ಯಾವುದೇ ಘೋಷಣೆಗಳಾಗುವ ಹಿನ್ನೆಲೆಯಲ್ಲಿ ಹಲವು ವಲಯಗಳ ತೆರಿಗೆ ವಿನಾಯಿತಿ ನೀಡುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಲಾಕ್‍ಡೌನ್‍ನಿಂದಾಗಿ ಹೋಟೆಲ್, ಪ್ರವಾಸ, ಶಿಕ್ಷಣ ವಲಯ ಸೇರಿದಂತೆ ಸಾಕಷ್ಟು ವಲಯ ಗಳು ಸಂಕಷ್ಟಕ್ಕೆ ಸಿಲುಕಿದೆ. ವ್ಯವಹಾರಗಳು ಸೂಕ್ತ ರೀತಿಯಲ್ಲಿ ನಡೆಯದ ಕಾರಣ ಸಾಲ ಗಳನ್ನು ತೀರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ತೆರಿಗೆಯಲ್ಲಿ ವಿನಾಯಿತಿ ನೀಡುವಂತೆ ಅಥವಾ ಸಾಲದ ಬಡ್ಡಿ ಇಳಿಸುವಂತೆ ಮನವಿ ಮಾಡಿಕೊಂಡಿದ್ದೇವೆಂದು ತಿಳಿಸಿದ್ದಾರೆ. ಜಿಎಸ್‍ಟಿ ಪಾವತಿ ಮಾಡುವಲ್ಲಿ ಸಾಕಷ್ಟು ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿರುವ ಬಗ್ಗೆ ಸಚಿವರ ಗಮನಕ್ಕೆ ತರಲಾಗಿದೆ. ಬಜೆಟ್‍ನಲ್ಲಿ ಸರ್ಕಾರ ವಾರ್ಷಿಕ ಆದಾಯ ರೂ. 10 ಕೋಟಿ ಇರುವವರು ಆಸ್ತಿ ವಿವರ ನೀಡುವ ಅಗತ್ಯವಿಲ್ಲ ಎಂದು ಹೇಳಿದೆ. ಆದರೆ, ಬ್ಯಾಂಕ್‍ಗಳು ಮಾತ್ರ ಸಾಲವನ್ನು ನೀಡದೆ ಆಸ್ತಿ ವಿವರ ನೀಡುವಂತೆ ತಿಳಿಸುತ್ತಿವೆ. ಈ ವಿಚಾರ ಸಚಿವರ ಗಮನಕ್ಕೆ ತರಲಾಗಿದೆ ಎಂದಿದ್ದಾರೆ.