ಮೋದಿಯವರ ಭ್ರಷ್ಟಾಚಾರ ರಹಿತ  ಆಡಳಿತ ಮುಂದಿಟ್ಟು ಮತ ಯಾಚಿಸಿ
ಮೈಸೂರು

ಮೋದಿಯವರ ಭ್ರಷ್ಟಾಚಾರ ರಹಿತ ಆಡಳಿತ ಮುಂದಿಟ್ಟು ಮತ ಯಾಚಿಸಿ

March 7, 2019

ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಿರಂತರ ಕಠಿಣ ಪರಿಶ್ರಮ, ಭ್ರಷ್ಟಾಚಾರ ರಹಿತ ಆಡಳಿತ ಹಾಗೂ ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ಮತ ಯಾಚಿಸಿ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಮೈಸೂರಿನ ಜೆ.ಕೆ. ಮೈದಾನದಲ್ಲಿ ಇಂದು ನಡೆದ ಬಿಜೆಪಿ ಶಕ್ತಿ ಕೇಂದ್ರಗಳ ಪ್ರಮುಖರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾ ಡುತ್ತಿದ್ದ ಅವರು, ಮೋದಿ ಅವರು ಶ್ರಮಜೀವಿ, ದೇಶಕ್ಕಾಗಿ ನಿರಂತರ ವಾಗಿ ದುಡಿಯುತ್ತಿದ್ದಾರೆ. ಅವರ ವೇಗಕ್ಕೆ ಹೆಜ್ಜೆ ಹಾಕುವುದು ನಮಗೇ ಸವಾಲಾಗಿದೆ. ಅವರು ನೀಡಿದ ಉತ್ತಮ ಯೋಜನೆಗಳು, ತಾರತಮ್ಯ ವಿಲ್ಲದ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ, ಸಾಧನೆ ಬಗ್ಗೆ ಆತ್ಮವಿಶ್ವಾಸ ದಿಂದ ಜನರಿಗೆ ಧೈರ್ಯವಾಗಿ ಹೇಳಿ ಎಂದು ಸಲಹೆ ನೀಡಿದರು.

ಈ ಹಿಂದಿನ ಯುಪಿಎ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವ ವಾಡುತ್ತಿತ್ತು. ಕಳೆದ 5 ವರ್ಷಗಳಲ್ಲಿ ಬಿಜೆಪಿ ಸರಕಾರ ಒಳ್ಳೆಯ ಕೆಲಸ ಮಾಡಿದೆ. ಜನರ ಒಳಿತಿಗಾಗಿ ಪ್ರತೀ ಕ್ಯಾಬಿನೆಟ್ ಮೀಟಿಂಗ್‍ನಲ್ಲಿ ನೂರಾರು ನಿರ್ಧಾರಗಳನ್ನು ಮೋದಿ ಕೈಗೊಂಡಿದ್ದಾರೆ. ಅದನ್ನು ಜನರಿಗೆ ಮನವರಿಕೆ ಮಾಡಿ ಮತ್ತು ಹಿಂದಿನ ಕಾಂಗ್ರೆಸ್ ಸರ್ಕಾರ ಏನೂ ಕೆಲಸ ಮಾಡದಿ ರುವುದನ್ನೂ ಹೇಳಿ, ಜೊತೆಗೆ ನಾವು ಮಾಡುವ ಒಳ್ಳೆ ಕೆಲಸ ಗಳಿಗೆ ಸಂಸತ್ ಒಳಗೆ ಹಾಗೂ ಹೊರಗೆ ಅಡ್ಡಿ ಮಾಡಿದ ವಿರೋಧ ಪಕ್ಷಗಳ ವರ್ತನೆ ಬಗ್ಗೆಯೂ ಪ್ರಚಾರ ಮಾಡಿ ಎಂದು ಸಲಹೆ ನೀಡಿದರು. ಎನ್‍ಡಿಎ ಮೈತ್ರಿ ಕೂಟದ ವಿರುದ್ಧ ಮಹಾ ಘಟಬಂಧನ್ ಹೆಸರಲ್ಲಿ ಕೆಲ ಪ್ರತಿಪಕ್ಷಗಳು ಕೈ ಜೋಡಿಸುತ್ತಿರುವುದು ಕಲಬೆರಕೆ ಸ್ಥಿತಿಯಾಗಿದೆ ಎಂದ ನಿರ್ಮಲಾ ಸೀತಾರಾಮನ್, ಪ್ರತಿ ಪಕ್ಷಗಳದ್ದು ನೆಗೆಟೀವ್ ಅಜೆಂಡಾ ಆಗಿದ್ದು, ಕಾಂಗ್ರೆಸ್ ಪಕ್ಷ ಹತಾಶವಾಗಿ ನೀರಿನಿಂದ ಹೊರಬಿದ್ದ ಮೀನಿನಂತೆ ವಿಲವಿಲ ಒದ್ದಾಡುತ್ತಿದೆ ಎಂದರು.

ಪುಲ್ವಾಮಾದಲ್ಲಿ ನಮ್ಮ ಯೋಧರ ಮೇಲೆ ನಡೆದ ಆತ್ಮಾಹುತಿ ದಾಳಿಗೆ ಪ್ರತಿಯಾಗಿ ಪಾಕ್ ಉಗ್ರರ ಅಡಗು ತಾಣಗಳನ್ನು ಧ್ವಂಸ ಮಾಡಿದ ಕೇಂದ್ರ ಸರ್ಕಾರದ ನಿರ್ಧಾರದಿಂದ ದೇಶ ಸುರಕ್ಷವಾಗಿದೆ. ಜನ ನಿಟ್ಟುಸಿರು ಬಿಟ್ಟಿದ್ದಾರೆ ಎಂಬುದನ್ನು ಮತದಾರರಿಗೆ ಮನವರಿಕೆ ಮಾಡಿಕೊಡಿ ಎಂದು ನುಡಿದರು.

60 ವರ್ಷಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಬೆಲೆ ಏರಿಕೆ ನಿಯಂತ್ರಿಸಿರಲಿಲ್ಲ. ಜನರಿಗೆ ಬೇಕಾದ ವಸ್ತುಗಳನ್ನು ಪೂರೈಸಿರಲಿಲ್ಲ. ಈ 5 ವರ್ಷಗಳಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಬಂದಿದೆ. ಇದರಿಂದ ಬೆಲೆಗಳು ಕಡಿಮೆಯಾಗಿ ದೇಶದ ಬಡ-ಮಧ್ಯಮ ವರ್ಗದ ಜನರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಇದೇ ಸಂದರ್ಭ ನುಡಿದರು.

ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಅವ್ಯವಹಾರ ನಡೆದಿಲ್ಲ ಎಂದು ಸುಪ್ರೀಂಕೋರ್ಟ್ ಮತ್ತು ಸಿಎಜಿ ಹೇಳಿದೆ. ಸೇನೆಗೆ ಬೇಕಾದ ಗನ್, ಬುಲೆಟ್ ಪ್ರೂಫ್ ಜಾಕೆಟ್‍ನಂತಹ ಸಾಮಗ್ರಿಗಳ ಖರೀದಿಯಲ್ಲಿ ಒಂದು ಪೈಸೆಯನ್ನೂ ಕಿಕ್‍ಬ್ಯಾಕ್ ಪಡೆದಿಲ್ಲ. ಇದರಿಂದ ಹತಾಶರಾದ ಪ್ರತಿಪಕ್ಷದ ನಾಯಕರು ಬೇಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದ್ದು, ದೇಶದ ಪ್ರಧಾನಮಂತ್ರಿ ವಿರುದ್ಧ ಕೀಳು ಮಟ್ಟದ ಪದ ಬಳಸಿ ಮಾತನಾಡುತ್ತಿರುವ ಕಾಂಗ್ರೆಸ್‍ನವರಿಗೆ ಏನು ಹೇಳಬೇಕು ಎಂದು ಸಚಿವರು ಪ್ರಶ್ನಿಸಿದರು. ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಹುಲ್ ಗಾಂಧಿ ಅಪ್ಪಿಕೊಂಡು ಕಣ್ಣು ಹೊಡೆದದ್ದನ್ನು ಟೀಕಿಸಿದ ನಿರ್ಮಲಾ ಸೀತಾರಾಮನ್, ಲೋಕಸಭೆಗೆ ಪಾವಿತ್ರ್ಯವಿದೆ, ರಾಹುಲ್ ಗಾಂಧಿ ಅವರ ಆ ನಡೆ ಕೆಟ್ಟ ವರ್ತನೆಯಾಗಿತ್ತು ಎಂದರು. ಸ್ವಾಮಿನಾಥನ್ ವರದಿ ಶಿಫಾರಸ್ಸುಗಳನ್ನು ಹಂತ-ಹಂತವಾಗಿ ಜಾರಿಗೆ ತಂದು ರೈತರನ್ನು ಸಬಲರನ್ನಾಗಿಸಲು ನರೇಂದ್ರ ಮೋದಿ ಅವರು ಕಾರ್ಯಕ್ರಮ ರೂಪಿಸಿದರೆ, ರಾಜ್ಯ ಸರ್ಕಾರಗಳು ರೈತರ ಸಾಲ ಮನ್ನಾ ಹೆಸರಲ್ಲಿ ನಾಟಕವಾಡುತ್ತಿವೆ ಎಂದು ಟೀಕಿಸಿದರು.’

Translate »