ಮೈಸೂರು ಮಹಾ ನಗರಪಾಲಿಕೆ ಚುನಾವಣೆ: ಇಂದು ಮತ ಎಣಿಕೆ
ಮೈಸೂರು

ಮೈಸೂರು ಮಹಾ ನಗರಪಾಲಿಕೆ ಚುನಾವಣೆ: ಇಂದು ಮತ ಎಣಿಕೆ

September 3, 2018

ಮೈಸೂರು: ಮೈಸೂರು ಮಹಾನಗರ ಪಾಲಿಕೆಯ 65 ವಾರ್ಡುಗಳಿಗೆ ಶುಕ್ರವಾರ ನಡೆದ ಮತದಾನದ ಎಣಿಕಾ ಕಾರ್ಯ ಸೋಮ ವಾರ (ಸೆ.3) ಬೆಳಿಗ್ಗೆ 8ರಿಂದ ಪಡುವಾರ ಹಳ್ಳಿಯಲ್ಲಿರುವ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಆರಂಭ ಗೊಳ್ಳಲಿದ್ದು, ಮಧ್ಯಾಹ್ನದ ವೇಳೆಗೆ ಪಾಲಿಕೆಯ ಆಡಳಿತ ಯಾರ ಪಾಲಿಗೆ ಒಲಿಯಲಿದೆ ಎಂಬ ಸ್ಪಷ್ಟ ಚಿತ್ರಣ ದೊರೆಯಲಿದೆ.

ಮೈಸೂರು ನಗರ ವ್ಯಾಪ್ತಿಯ ಎಲ್ಲಾ 65 ವಾರ್ಡುಗಳ ಮತಯಂತ್ರಗಳನ್ನು ಮಹಾರಾಣಿ ವಾಣಿಜ್ಯ ಕಾಲೇಜಿನ 4 ಸ್ಟ್ರಾಂಗ್ ರೂಂಗಳಲ್ಲಿ ಬಿಗಿ ಭದ್ರತೆಯಲ್ಲಿ ಇಡಲಾಗಿದ್ದು, 13 ನೋಡಲ್ ಅಧಿಕಾರಿ ಗಳು, 13 ಆರ್‍ಓಗಳು ಪೊಲೀಸರೊಂದಿಗೆ ಬಿಗಿ ಭದ್ರತೆಯಲ್ಲಿಕಾರ್ಯ ನಿರ್ವಹಿಸುತ್ತಿದ್ದಾರೆ. ಮತ ಎಣಿಕೆಗಾಗಿ 13 ಎಣಿಕಾ ಕೊಠಡಿಗಳನ್ನು ಸಿದ್ಧಪಡಿಸ ಲಾಗಿದೆ. ಈ 13 ಎಣಿಕಾ ಕೊಠಡಿಗಳಿಗೆ ತಲಾ ಒಬ್ಬರಂತೆ ಚುನಾವಣಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಆಯಾ ಚುನಾವಣಾಧಿಕಾರಿಗಳಿಗೆ 5 ವಾರ್ಡ್‍ಗಳ ಮತ ಎಣಿಕಾ ಕಾರ್ಯ ಜವಾಬ್ದಾರಿ ವಹಿಸಲಾಗಿದೆ. ಓರ್ವ ಚುನಾವಣಾಧಿಕಾರಿಗಳ ವ್ಯಾಪ್ತಿಗೆ ಬರುವ 5 ವಾರ್ಡ್‍ಗಳಿಗೂ ಪ್ರತ್ಯೇಕವಾಗಿ 5 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ. ಈ ಟೇಬಲ್‍ಗಳಲ್ಲಿ ಒಂದೊಂದು ವಾರ್ಡ್‍ನ ಮತ ಎಣಿಕಾ ಕಾರ್ಯ ನಡೆಯಲಿದೆ.

ಆಯಾ ವಾರ್ಡ್‍ನಲ್ಲಿ ಎಷ್ಟು ಮತಗಟ್ಟೆ (ಬೂತ್)ಗಳಿರುತ್ತದೆಯೋ ಅಷ್ಟು ಸುತ್ತು ಮತ ಎಣಿಕಾ ಕಾರ್ಯ ನೆರವೇರಲಿದೆ. ಉದಾಹರಣೆಗೆ ಯಾವುದಾದರೂ ಒಂದು ವಾರ್ಡ್ ನಲ್ಲಿ 20 ಮತಗಟ್ಟೆಗಳಿದ್ದರೆ, ಆ ವಾರ್ಡಿನ ಮತ ಎಣಿಕೆ ಕಾರ್ಯ 20 ಸುತ್ತು ನಡೆಯ ಲಿದೆ. ಇದರಂತೆ 1ರಿಂದ 65 ವಾರ್ಡ್‍ಗಳಲ್ಲಿ ಎಷ್ಟೆಷ್ಟು ಮತಗಟ್ಟೆಗಳಿರುತ್ತವೆಯೋ ಅಷ್ಟು ಸುತ್ತಿನ ಮತ ಎಣಿಕೆ ನಡೆಯುತ್ತದೆ. ಪ್ರತಿಯೊಂದು ಟೇಬಲ್‍ಗೂ ಒಬ್ಬರು ಎಣಿಕೆ ಮೇಲ್ವಿಚಾರಕರು, ಒಬ್ಬರು ಎಣಿಕೆ ಸಹಾಯಕರು ಕಾರ್ಯ ನಿರ್ವಹಿಸಲಿದ್ದಾರೆ. ಇವರಿಗೆ ಸ್ಟ್ರಾಂಗ್ ರೂಂನಿಂದ ಇವಿಎಂ ಯಂತ್ರಗಳನ್ನು ತಂದುಕೊಡಲು ಗ್ರೂಪ್-ಸಿ ಮತ್ತು ಗ್ರೂಪ್-ಡಿ ನೌಕರರನ್ನು ನಿಯೋಜಿಸಲಾಗಿದೆ. ಈ ಎಲ್ಲಾ ವ್ಯವಸ್ಥೆಯನ್ನು ನಿರ್ವಹಣೆ ಮಾಡುವುದಕ್ಕಾಗಿ ಐವರು ಕೆಎಎಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಇದರೊಂ ದಿಗೆ 20 ಗ್ರಾಮ ಲೆಕ್ಕಿಗರು, 10 ಶಿರಸ್ತೇದಾರರನ್ನು ಮೇಲ್ವಿಚಾರಣೆಗೆ ನೇಮಕ ಮಾಡಲಾಗಿದೆ.

ಬೆಳಿಗ್ಗೆ 8 ಗಂಟೆಗೆ ಎಣಿಕಾ ಕಾರ್ಯ ಆರಂಭವಾಗುತ್ತಿದೆಯಾದರೂ, 7.30ರೊಳಗೆ ಅಭ್ಯರ್ಥಿಗಳು ಅಥವಾ ಅಭ್ಯರ್ಥಿ ಪರ ಏಜೆಂಟರು ಮತ ಎಣಿಕಾ ಕೇಂದ್ರಕ್ಕೆ ಆಗಮಿಸು ವಂತೆ ಸೂಚನೆ ನೀಡಲಾಗಿದೆ. ಏಜೆಂಟರು ಮತ್ತು ಅಭ್ಯರ್ಥಿಗಳಿಗೆ ಮತ ಎಣಿಕಾ ಕೇಂದ್ರಕ್ಕೆ ಪ್ರವೇಶಿಸಲು ಗುರುತಿನ ಚೀಟಿ ನೀಡಲಾಗಿದ್ದು, ಅವುಗಳನ್ನು ಕಡ್ಡಾಯವಾಗಿ ತಂದರೆ ಮಾತ್ರ ಎಣಿಕಾ ಕೇಂದ್ರದ ಒಳಗೆ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಚುನಾವಣಾಧಿಕಾರಿಗಳು, ವೀಕ್ಷಕರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ಅನ್ನು ತೆರೆಯಲಾಗುತ್ತದೆ. ನಂತರ ಆಯಾಯ ಟೇಬಲ್‍ಗಳಲ್ಲಿ ಎಣಿಕಾ ಕಾರ್ಯ ಆರಂಭವಾಗಲಿದೆ.

ಈ ಸಂಬಂಧ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಅವರು `ಮೈಸೂರು ಮಿತ್ರ’ನೊಂ ದಿಗೆ ಮಾತನಾಡಿ, ಮತ ಎಣಿಕಾ ಕಾರ್ಯಕ್ಕೆ ಅಗತ್ಯವಾದ ಸಿದ್ಧತೆಗಳನ್ನು ಪೂರ್ಣಗೊಳಿ ಸಲಾಗಿದೆ. ಒಟ್ಟು 13 ಎಣಿಕಾ ಕೊಠಡಿಗಳಿದ್ದು, ಪ್ರತಿಯೊಂದು ಕೊಠಡಿಯಲ್ಲಿ ತಲಾ 5 ವಾರ್ಡ್‍ಗಳ ಎಣಿಕಾ ಕಾರ್ಯ ಜರುಗಲಿದೆ. ಯಾವ ಯಾವ ವಾರ್ಡ್‍ಗಳ ಎಣಿಕಾ ಕಾರ್ಯ ಯಾವ ಸಂಖ್ಯೆಯ ಕೊಠಡಿಯಲ್ಲಿ ನಡೆಯಲಿದೆ ಎಂದು ಫಲಕ ಹಾಕಲಾಗಿದೆ. ಇದರೊಂದಿಗೆ ಮಾಧ್ಯಮದವರಿಗೆ, ವೀಕ್ಷಕರಿಗೆ ಹಾಗೂ ಚುನಾವಣಾಧಿಕಾರಿಗಳಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಚುನಾವಣಾ ಆಯೋಗದ ವತಿಯಿಂದ ನೀಡಿರುವ ಗುರುತಿನ ಚೀಟಿ ಇದ್ದವರಿಗೆ ಮಾತ್ರ ಒಳಗೆ ಬಿಡುವಂತೆ ನಿರ್ದೇಶನ ನೀಡಲಾಗಿದೆ. ಡಿಸಿಪಿ ಮತ್ತು ಎಸಿಪಿ ದರ್ಜೆಯ ಅಧಿಕಾರಿಗಳ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಮಂದಿ ಪೊಲೀಸರು, 4 ಕೆಎಸ್‍ಆರ್‍ಪಿ ತುಕಡಿ ಹಾಗೂ ಶಸ್ತ್ರ ಸಜ್ಜಿತ ಪೊಲೀಸರನ್ನು ಮತ ಎಣಿಕಾ ಕೇಂದ್ರದ ಭದ್ರತೆಗೆ ನಿಯೋಜಿಸಲಾಗಿದ್ದು, ಮುಖ್ಯ ಪ್ರವೇಶ ದ್ವಾರದ ಬಳಿ ಮೆಟಲ್ ಡಿಟೆಕ್ಟರ್ ಸಾಧನ ಅಳವಡಿಸಿ ಪ್ರತಿಯೊಬ್ಬರ ಮೇಲೂ ನಿಗಾ ಇಡಲು ಕ್ರಮ ಕೈಗೊಳ್ಳಲಾಗಿದೆ.

ಬಿಗಿ ಭದ್ರತೆ: ನಗರಪಾಲಿಕೆಯ ಮತ ಎಣಿಕೆ ನಡೆ ಯುವ ಹಿನ್ನೆಲೆಯಲ್ಲಿ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕೇಂದ್ರದ ಸುತ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸ ಲಾಗಿದೆ. ಮತ ಎಣಿಕೆಯ ಒಳಗೆ ಅನ ಗತ್ಯವಾಗಿ ಪ್ರವೇಶಿಸುವ ತಡೆಗಟ್ಟುವ ನಿಟ್ಟಿ ನಲ್ಲಿ ಎಣಿಕಾ ಕೇಂದ್ರದ ಪ್ರವೇಶ ದ್ವಾರ ದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

Translate »