ದಸರಾ ಲಾಂಛನದಲ್ಲಿ ಬದಲಾವಣೆ ಇಲ್ಲ
ಮೈಸೂರು

ದಸರಾ ಲಾಂಛನದಲ್ಲಿ ಬದಲಾವಣೆ ಇಲ್ಲ

August 30, 2018

ಮೈಸೂರು: ಅಕ್ಟೋಬರ್ 10ರಿಂದ 19ರವರೆಗೆ ನಡೆಯಲಿರುವ 2018ರ ಮೈಸೂರು ದಸರಾ ಮಹೋತ್ಸವದ ಲಾಂಛನದಲ್ಲಿ ಬದಲಾವಣೆ ಇಲ್ಲ ಎಂದು ದಸರಾ ವಿಶೇಷಾಧಿಕಾರಿಯೂ ಆದ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ.

ಅಂಬಾರಿ ಹೊತ್ತ ಆನೆಯ ಚಿತ್ರವುಳ್ಳ ದಸರಾ ಮಹೋತ್ಸವದ ಲಾಂಛನವನ್ನು ಕಳೆದ ಬಾರಿಯ ಮಹೋತ್ಸವ ಸಂದರ್ಭ ಶಾಶ್ವತ ಲೋಗೋವನ್ನಾಗಿ ರೂಪಿಸಿ, ಅಂತಿಮಗೊಳಿಸಲಾಗಿದೆ. ಆ ಲೋಗೋ ನೋಡಿದ ತಕ್ಷಣ ಜನರಲ್ಲಿ ಮೈಸೂರು ದಸರಾ ಪರಿಕಲ್ಪನೆ ಮೂಡಬೇಕೆಂಬುದೇ ಅದರ ಉದ್ದೇಶ ಎಂದು ತಿಳಿಸಿದರು. ಪ್ರತಿ ವರ್ಷ ಲೋಗೋ ಬದಲಾಯಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟು, ಶಾಶ್ವತ ಲೋಗೋ ತಯಾರಿಸಿ ದಸರಾ ಕಾರ್ಯಕಾರಿ ಸಮಿತಿಯಲ್ಲಿ ಅಂತಿಮಗೊಳಿಸಿರುವುದರಿಂದ ಈ ಬಾರಿ ವಿನ್ಯಾಸ ಬದಲಿಸುವ ಅವಕಾಶ ವಿಲ್ಲವೆಂದೂ ಡಿಸಿ ತಿಳಿಸಿದರು.

ನಾಳೆ ಪೂರ್ವಭಾವಿ ಸಭೆ: ನಾಳೆ (ಗುರುವಾರ) 2018ರ ದಸರಾ ಮಹೋತ್ಸವ ಕಾರ್ಯಕಾರಿ ಸಮಿತಿ ಪೂರ್ವಭಾವಿ ಸಭೆ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆಯ ಲಿದೆ ಎಂದು ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ.

ಸೆಪ್ಟೆಂಬರ್ 3ರ ನಂತರ ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ದಸರಾ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ಅದಕ್ಕೆ ಪೂರಕವಾಗಿ ಜಿಲ್ಲಾಡಳಿತ ಕೈಗೊಂಡಿರುವ ಸಿದ್ಧತೆ ಕುರಿತು ಮಾಹಿತಿ ಕಲೆ ಹಾಕಲು ತಾವು ನಾಳೆ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸುತ್ತಿರುವುದಾಗಿ ತಿಳಿಸಿದರು. ಮಂಗಳವಾರ ಸರ್ಕಾರಿ ಅತಿಥಿ ಗೃಹದಲ್ಲಿ ನಡೆದ ದಸರಾ ಉನ್ನತ ಮಟ್ಟದ ಸಭೆಯಲ್ಲಿ ಮುಖ್ಯಮಂತ್ರಿಗಳು ನೀಡಿರುವ ಸಲಹೆ-ಸೂಚನೆಗಳಂತೆ ದಸರಾ ಮಹೋತ್ಸವದ ಕಾರ್ಯಕ್ರಮ ಆಯೋಜಿಸಿ ಕಾರ್ಯಕಾರಿ ಸಮಿತಿಯಲ್ಲಿ ಅನುಮೋದನೆ ಪಡೆದುಕೊಂಡು ಅದರಂತೆ ತಯಾರಿ ನಡೆಸಲಾಗುವುದು ಎಂದು ಅವರು ತಿಳಿಸಿದರು.

ವೆಬ್‍ಸೈಟ್ ಮರು ವಿನ್ಯಾಸ: ಈ ಬಾರಿ ಸಾಂಪ್ರದಾಯಿಕವಾಗಿ ದಸರಾ ಆಚರಿಸಲಾಗುತ್ತಿದೆಯಾದರೂ, ದೇಶ-ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸಲು ಕ್ರಮ ವಹಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿರುವುದರಿಂದ ದಸರಾ ವೆಬ್‍ಸೈಟ್ ಅನ್ನು ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಮಾಹಿತಿಯೊಂದಿಗೆ ವೆಬ್‍ಸೈಟ್ ಅನ್ನು ಮರು ವಿನ್ಯಾಸ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದೂ ಜಿಲ್ಲಾಧಿಕಾರಿಗಳು ತಿಳಿಸಿದರು.

ಮೈಸೂರು ಅರಮನೆ, ಜಗನ್ಮೋಹನ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ದಸರಾ ಇತಿಹಾಸ, ರಾಜ-ಮಹಾರಾಜರ ಪರಂಪರೆ, ಮೈಸೂರಿನ ಭೌಗೋಳಿಕ ಹಿನ್ನೆಲೆ, ಪ್ರವಾಸಿ ತಾಣಗಳು, ಸಾರಿಗೆ ವ್ಯವಸ್ಥೆ, ಮ್ಯೂಸಿಯಂಗಳು, ಪಾರಂಪರಿಕ ಕಟ್ಟಡಗಳು, ಪ್ರಾಚೀನ ದೇವಾಲಯಗಳೂ ಸೇರಿದಂತೆ ಹೊಟೇಲ್ ಉದ್ಯಮ ಕುರಿತಂತೆ ಆಂಗ್ಲ ಮತ್ತು ಕನ್ನಡ ಮಾಧ್ಯಮದಲ್ಲಿ ಹೆಚ್ಚು ಮಾಹಿತಿಯನ್ನು ಪ್ರವಾಸಿಗರಿಗೆ ವೆಬ್‍ಸೈಟ್‍ನಲ್ಲಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

Translate »