ದಸರಾ ಗ್ರಾಮೀಣ ಕ್ರೀಡೆಗಿಲ್ಲ ಮೂರು ಕಾಸಿನ ಬೆಲೆ!  ಕ್ರೀಡಾಪಟುಗಳಿಗೆ ಅಗೌರವ!!
ಮೈಸೂರು

ದಸರಾ ಗ್ರಾಮೀಣ ಕ್ರೀಡೆಗಿಲ್ಲ ಮೂರು ಕಾಸಿನ ಬೆಲೆ!  ಕ್ರೀಡಾಪಟುಗಳಿಗೆ ಅಗೌರವ!!

September 27, 2019

ಮೈಸೂರು, ಸೆ.26(ಪಿಎಂ)- ಗ್ರಾಮೀಣ ಕ್ರೀಡೆಗಿಲ್ಲ ಬೆಲೆ! ಇಲ್ಲಿನ ಕ್ರೀಡಾಪಟುಗಳಿಗಿಲ್ಲ ಗೌರವ! ಹೌದು, ಗುರುವಾರ ನಡೆದ ಮೈಸೂರು ತಾಲೂಕಿನ ಗ್ರಾಮೀಣ ದಸರಾ ಹಾಗೂ ರೈತ ದಸರಾದಲ್ಲಿ ಕ್ರೀಡಾಪಟುಗಳ ವಿಚಾರದಲ್ಲಿ ತೋರಿದ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಹೀಗೇಳದೇ ವಿಧಿ ಇಲ್ಲ.

ಈ ಬಾರಿ ದಸರಾ ಮಹೋತ್ಸವದ ಅಂಗವಾಗಿ ಮೈಸೂರು ತಾಲೂಕಿನ ವರುಣಾ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣ ದಲ್ಲಿ ಆಯೋಜಿಸಿದ್ದ ಗ್ರಾಮೀಣ ದಸರಾ ಹಾಗೂ ರೈತ ದಸರಾದಲ್ಲಿ ಪಾಲ್ಗೊಂಡಿದ್ದ ಪಟುಗಳಿಗೆ ನಯಾಪೈಸೆ ಗೌರವಧನವನ್ನೂ ನೀಡದೇ ಕೇವಲ ಪ್ರಮಾಣ ಪತ್ರ ನೀಡಿ ಕೈತೊಳೆದುಕೊಳ್ಳಲಾಯಿತು.

25 ವರ್ಷ ಮೇಲ್ಪಟ್ಟ ರೈತರ ಹಾಗೂ ರೈತ ಮಹಿಳೆಯರು ತಾಲೂಕಿನ ವಿವಿಧ ಭಾಗಗಳಿಂದ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊ ಳ್ಳಲು ಉತ್ಸಾಹದಿಂದ ಆಗಮಿಸಿದ್ದರು. ಸ್ಪರ್ಧೆಗಳಲ್ಲಿ ಗೆಲ್ಲಬೇಕು, ಬಹುಮಾನ ಪಡೆಯಲೇಬೇಕು ಎಂದು ಬಂದು ಸಾಧನೆಗೈದರಿಗೆ ಕೊನೆಗೆ ನಿರಾಸೆ ಕಾದಿತ್ತು. ಬೆಳಿಗ್ಗೆ 9ಕ್ಕೆ ನಿಗದಿಯಾಗಿದ್ದ ಉದ್ಘಾಟನೆ 10ಕ್ಕೆ ನೆರವೇರಿತು. ಬೇರೆ ಬೇರೆ ಗ್ರಾಮಗಳಿಂದ ಬೆಳಂಬೆಳಿಗ್ಗೆ ಆಗ ಮಿಸಿದ್ದ ಪಟುಗಳಿಗೆ ಬೆಳಗಿನ ಉಪಾಹಾರದ ವ್ಯವಸ್ಥೆಯೂ ಇರಲಿಲ್ಲ.

ಈ ಅವಸ್ಥೆ ನಡುವೆಯೂ ಆಯೋಜಿಸಿದ್ದ ಕೆಸರು ಗದ್ದೆ ಓಟ, ಗೋಣಿಚೀಲದ ಒಳಗೆ ಕಾಲಿಟ್ಟು ಓಡುವುದು, ಗೊಬ್ಬರ ಮೂಟೆ ಹೊತ್ತು ಓಡುವ ಸ್ಪರ್ಧೆ, ಮೂರು ಕಾಲಿನ ಓಟ ಹಾಗೂ ಗುಂಡು ಎತ್ತುವ ಸ್ಪರ್ಧೆಯಲ್ಲಿ ರೈತರು ಹುರುಪಿನಿಂದ ಪಾಲ್ಗೊಂಡರು. ಇದರಲ್ಲಿ ಅನೇಕರು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿ ಬಹುಮಾನ ಕನಸು ಕಂಡಿದ್ದರು. ಆದರೆ ತಾಲೂಕು ಆಡಳಿತ ಯಾವುದೇ ಬಹುಮಾನಕ್ಕೂ ವ್ಯವಸ್ಥೆ ಮಾಡದೇ ಇದ್ದದ್ದು ಗೊತ್ತಾಗುತ್ತಿದ್ದಂತೆ ನಿರಾಸೆಗೊಂಡರು.

ಅದೇ ರೀತಿ ಚಮಚದಲ್ಲಿ ನಿಂಬೆ ಹಣ್ಣು ಇಟ್ಟುಕೊಂಡು ಓಡುವ ಸ್ಪರ್ಧೆ, ನೀರಿನ ಬಿಂದಿಗೆ ಹೊತ್ತು ಓಡುವ ಸ್ಪರ್ಧೆ, ಗೋಣಿ ಚೀಲದ ಒಳಗೆ ಕಾಲಿಟ್ಟು ಓಡುವುದು, ನೀರು ತುಂಬಿದ 3 ಮಡಿಕೆ ಹೊತ್ತು ನಡೆಯುವ ಸ್ಪರ್ಧೆ ಹಾಗೂ ಒಂಟಿ ಕಾಲಿನ ಓಟದ ಸ್ಪರ್ಧೆಗಳನ್ನು ಎದರಿಸಿದ ರೈತ ಮಹಿಳೆಯರಲ್ಲಿ ಗೆಲುವು ಸಾಧಿಸಿ ದವರು ಬಹುಮಾನ ಇಲ್ಲದನ್ನು ಕೇಳಿ ಬೇಸರ ವ್ಯಕ್ತಪಡಿಸಿದರು.

ಯುವ ಸಂಭ್ರಮ, ಯುವ ದಸರಾ ಸಾಂಸ್ಕøತಿಕ ಕಾರ್ಯಕ್ರಮ ಗಳಿಗೆ ಕೋಟಿ ಕೋಟಿ ಹಣ ನೀಡುತ್ತಾರೆ. ಪ್ರದರ್ಶನ ನೀಡುವ ವರಿಗೆ ಆಕರ್ಷಕ ಬಹುಮಾನ, ಗೌರವ ಸಂಭಾವನೆ ನೀಡುವ ಸರ್ಕಾರ, ಗ್ರಾಮೀಣ ಚಟುವಟಿಕೆ ನೆಪಮಾತ್ರಕ್ಕೆ ಆಯೋಜಿಸಿ ಚಿಲ್ಲರೆ ಕಾಸನ್ನೂ ನೀಡದೇ ಇರುವುದು ಹಳ್ಳಿಗಾಡಿನ ಜನತೆಗೆ ಬಗೆಗೆ ಆಡಳಿತ ವರ್ಗಕ್ಕೆ ಇರುವ ಅಸಡ್ಡೆಯನ್ನು ತೋರುತ್ತದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು 150 ಮಹಿಳೆಯರು ಹಾಗೂ 100ಕ್ಕೂ ಹೆಚ್ಚು ಪುರು ಷರು ಪಾಲ್ಗೊಂಡಿದ್ದು, ಯಾವುದೇ ಬಹುಮಾನ ಇಲ್ಲದ್ದನ್ನು ಕಂಡು ಸ್ಥಳದಲ್ಲಿದ್ದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಹಿರಣ್ಣ ವಿರುದ್ಧ ಗ್ರಾಮೀಣ ಕ್ರೀಡಾಪಟುಗಳು ಕಿಡಿಕಾರಿದರು. ಈ ವೇಳೆ ನಮ್ಮದು ಆಯೋಜನೆ ಮಾಡುವುದಷ್ಟೇ. ಬಹುಮಾನಕ್ಕೆ ಹಣ ವಿನಿಯೋಗಿಸುವ ಅಧಿಕಾರ ವ್ಯಾಪ್ತಿ ತಹಸೀಲ್ದಾರ್ ಅವರಿಗೆ ಬರು ತ್ತದೆ ಎಂದು ಕೈ ಚೆಲ್ಲಿ ಜಾರಿಗೊಂಡರು. ಇನ್ನು ಉದ್ಘಾಟನಾ ಸಮಾರಂಭದಲ್ಲಿ ಹಾಜರಿದ್ದ ತಹಸೀಲ್ದಾರ್ ಟಿ.ರಮೇಶ್‍ಬಾಬು, ತಾಪಂ ಇಓ ಕೃಷ್ಣಕುಮಾರ್ ಆ ಬಳಿಕ ಸ್ಥಳದಲ್ಲಿ ಕಾಣಿಸಿಕೊಳ್ಳಲೇ ಇಲ್ಲ.

ಮಧ್ಯಾಹ್ನ ಊಟವೂ ಇಲ್ಲ: ಮಧ್ಯಾಹ್ನದ ಊಟಕ್ಕೂ ವ್ಯವಸ್ಥೆ ಮಾಡದಿದ್ದ ಹಿನ್ನೆಲೆಯಲ್ಲಿ ಕ್ರೀಡಾಪಟುಗಳು ತಾಲೂಕು ಆಡ ಳಿತಕ್ಕೆ ಹಿಡಿಶಾಪ ಹಾಕಿದರು. ಬಳಿಕ ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಲಘು ಉಪಾಹಾರದ ವ್ಯವಸ್ಥೆ ಮಾಡಿ ಸಮಾ ಧಾನಪಡಿಸಲಾಯಿತು. ಮೈಸೂರು ತಾಲೂಕು ಕ್ಷೇತ್ರ ಶಿಕ್ಷಣಾಧಿ ಕಾರಿ ಕಚೇರಿ ವ್ಯಾಪ್ತಿಯ ದೈಹಿಕ ಶಿಕ್ಷಕರೂ ಮಧ್ಯಾಹ್ನ ಊಟ ಇಲ್ಲದ ಹಿನ್ನೆಲೆಯಲ್ಲಿ ಬೇಸರ ವ್ಯಕ್ತಪಡಿಸಿದರು. ಒಂದು ನೀರಿನ ಕ್ಯಾನ್ ವ್ಯವಸ್ಥೆ ಬಿಟ್ಟರೆ ಸೂಕ್ತ ನೀರಿನ ವ್ಯವಸ್ಥೆ ಇಲ್ಲದರ ಬಗ್ಗೆಯೂ ಕ್ರೀಡಾ ಪಟುಗಳು ಅಸಮಾಧಾನ ವ್ಯಕ್ತಪಡಿಸಿದರು.

Translate »