ಬೆಂಗಳೂರು/ಹಾವೇರಿ,ನ.18- ಚುನಾವಣಾ ಅಭ್ಯರ್ಥಿಗಳು ಮುನ್ನೆಚ್ಚರಿಕೆಯಾಗಿ ತಮ್ಮ ಕುಟುಂಬಸ್ಥರಿಂದ ಪ್ರತ್ಯೇಕವಾಗಿ ನಾಮಿನೇಷನ್ ಮಾಡಿದ್ದಾರೆ. ಹಿರೇಕೆರೂರಿನಲ್ಲಿ ತಂದೆಗಾಗಿ ಮಗಳು, ಮಹಾಲಕ್ಷ್ಮಿ ಲೇಔಟ್‍ನಲ್ಲಿ ಪತಿಗಾಗಿ ಪತ್ನಿ ಮತ್ತು ಗೋಕಾಕ್‍ನಲ್ಲಿ ತಮ್ಮನಿ ಗಾಗಿ ಅಣ್ಣ ನಾಮಪತ್ರ ಸಲ್ಲಿಸಿದ್ದಾರೆ. ಹಿರೇಕೆರೂರು ವಿಧಾನಸಭಾ ಕ್ಷೇತ್ರದಿಂದ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್ ಸಹ ಪ್ರತ್ಯೇಕವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಮೊದಲು ಅನರ್ಹ ಶಾಸಕ ಬಿ.ಸಿ.ಪಾಟೀಲ್ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದರು. ತಂದೆಯ ಬಳಿಕ ಸೃಷ್ಟಿ ಅವರು ಸಹ ನಾಮಿನೇಷನ್ ಫೈಲ್ ಮಾಡಿದ್ದಾರೆ.
ನಾಮಪತ್ರ ಸಲ್ಲಿಕೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸೃಷ್ಟಿ ಪಾಟೀಲ್, ಕೆಲವೊಮ್ಮೆ ತಾಂತ್ರಿಕ ಕಾರಣಗಳಿಂದ ನಾಮಪತ್ರಗಳು ತಿರಸ್ಕೃತವಾಗುತ್ತವೆ. ಹಾಗಾಗಿ ತಂದೆಯವರ ಸೂಚನೆ ಮೇರೆಗೆ ನಾಮಪತ್ರ ಸಲ್ಲಿಸಿದ್ದೇನೆ. ಬಿ.ಸಿ.ಪಾಟೀಲ್ ಅವರ ನಾಮಪತ್ರ ಅಂಗೀಕಾರವಾದ ಕೂಡಲೇ ನಾನು ನಾಮಿನೇಷನ್ ಹಿಂದಕ್ಕೆ ಪಡೆದುಕೊಳ್ಳುತ್ತೇನೆ. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಚುನಾವಣೆಗೆ ಸ್ಪರ್ಧೆ ಮಾಡಬಹುದು. ಯಾರು ಬೇಕಾದರೂ ನಾಮಪತ್ರ ಸಲ್ಲಿಕೆ ಮಾಡಲಿ ಗೆಲುವು ಮಾತ್ರ ನಮ್ಮದೇ ಎಂದು ಸೃಷ್ಟಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು. ಇತ್ತ ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿಯೂ ಲಖನ್ ಜಾರಕಿಹೊಳಿ ಅವರ ಜೊತೆಯಲ್ಲಿಯೇ ಸೋದರ, ಶಾಸಕ ಸತೀಶ್ ಜಾರಕಿಹೊಳಿ ಸಹ ಪ್ರತ್ಯೇಕವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯನವರ ಜೊತೆ ಪತ್ನಿ ಹೇಮಲತಾ ಸಹ ಪ್ರತ್ಯೇಕವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಹಾಗೂ ನಾಮಪತ್ರ ಸಲ್ಲಿಕೆಯಲ್ಲಿ ಯಾವುದಾದರೂ ಕಾನೂನು ತೊಡಕುಗಳು ಉಂಟಾಗಬಹುದು ಎಂದು ಪ್ರತಿ ಬಾರಿ ಪತಿಗೆ ಪ್ರತಿಸ್ಪರ್ಧಿಯಾಗಿ ಹೇಮಲತಾ ಗೋಪಾಲಯ್ಯ ನಾಮಪತ್ರ ಸಲ್ಲಿಸುತ್ತಾರೆ.