ಬೆಂಗಳೂರು, ಸೆ.27-ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗ ಉಪ ಚುನಾವಣೆಗೆ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಡಿಸೆಂಬರ್ 5ರಂದು ಮತದಾನ ನಡೆಯಲಿದೆ. ನವೆಂಬರ್ 11ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ನಾಮಪತ್ರ ಸಲ್ಲಿಸಲು ನವೆಂಬರ್ 18 ಕೊನೇ ದಿನ. ನವೆಂಬರ್ 19ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದ್ದು, ನವೆಂಬರ್ 21 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಡಿಸೆಂಬರ್ 9ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರ ಬೀಳಲಿದೆ.
ಕಾಂಗ್ರೆಸ್‍ನ 14 ಮತ್ತು ಜೆಡಿಎಸ್‍ನ ಮೂವರು ಶಾಸಕರನ್ನು ವಿಧಾನಸಭೆಯ ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ಅವರು ಆಗಸ್ಟ್ 25 ಮತ್ತು 28ರಂದು ಅನರ್ಹಗೊಳಿಸಿದ್ದರು. ಅನರ್ಹಗೊಂಡ ಶಾಸಕರ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿತ್ತು. ಕಾಂಗ್ರೆಸ್‍ನ ಮುನಿರತ್ನ ಪ್ರತಿನಿಧಿಸುತ್ತಿದ್ದ ರಾಜರಾಜೇಶ್ವರಿನಗರ ಮತ್ತು ಪ್ರತಾಪಗೌಡ ಪಾಟೀಲ್ ಪ್ರತಿನಿಧಿಸುತ್ತಿದ್ದ ಮಸ್ಕಿ ಕ್ಷೇತ್ರಗಳ ಚುನಾವಣಾ ತಕರಾರು ಅರ್ಜಿ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದ ಕಾರಣ ಆ ಎರಡು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ 15 ಕ್ಷೇತ್ರಗಳಿಗೆ ಅಕ್ಟೋಬರ್ 21ಕ್ಕೆ ಉಪ ಚುನಾವಣೆ ಯನ್ನು ಆಯೋಗ ಘೋಷಿಸಿತ್ತು. ಚುನಾವಣಾ ಅಧಿಸೂಚನೆ ಹೊರಡಿಸಿ, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಗಳು ಆರಂಭವಾಗಿದ್ದವು. ಸೆಪ್ಟೆಂಬರ್ 30ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನವೂ ಆಗಿತ್ತು. ಆದರೆ ತಮ್ಮ ಅನರ್ಹತೆ ವಿರುದ್ಧ ಸುಪ್ರೀಂಕೋರ್ಟ್‍ನಲ್ಲಿ ಅನರ್ಹ ಶಾಸಕರು ಆಕ್ಷೇಪಣೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯುತ್ತಿತ್ತು. ಈ ಹಂತದಲ್ಲಿ ಚುನಾವಣಾ ಆಯೋ ಗದ ಪರ ವಕೀಲರು ಆರಂಭದಲ್ಲಿ ಅನರ್ಹ ಶಾಸಕರು ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಆಯೋಗದ ಆಕ್ಷೇಪವಿಲ್ಲ ಎಂದು ಕೋರ್ಟ್ ಮುಂದೆ ಹೇಳಿದ್ದರು. ವಿಚಾರಣೆ ಮುಂದುವರೆದು ಕೆಪಿಸಿಸಿ ಪರ ವಕೀಲರು ಉಪ ಚುನಾವಣೆಯಲ್ಲಿ
ಅನರ್ಹ ಶಾಸಕರ ಸ್ಪರ್ಧೆಗೂ ಆಕ್ಷೇಪ ವ್ಯಕ್ತಪಡಿಸಿದಾಗ ನ್ಯಾಯಮೂರ್ತಿಗಳು, ಈ ಪ್ರಕರಣದಲ್ಲಿ ಸಾಂವಿಧಾನಿಕ ಅಂಶಗಳಿರುವುದರಿಂದ ಕೂಲಂಕುಷವಾಗಿ ವಿಚಾರಣೆ ನಡೆಸ ಬೇಕಾಗಿದೆ. ಚುನಾವಣೆ ನಡೆದರೆ ಒಂದು ವೇಳೆ ನಂತರ ತೀರ್ಪು ಅನರ್ಹ ಶಾಸಕರ ಪರ ತೀರ್ಪು ಹೊರ ಬಿದ್ದರೆ ಮತ್ತೊಂದು ಸಮಸ್ಯೆ ಉದ್ಭವಿಸಲಿದೆ ಎಂದು ಹೇಳುತ್ತಿದ್ದಂತೆಯೇ ಮಧ್ಯೆ ಪ್ರವೇಶಿಸಿದ ಚುನಾವಣಾ ಆಯೋಗದ ಪರ ವಕೀಲರು ಉಪ ಚುನಾವಣೆಯನ್ನು ಕೆಲ ದಿನಗಳ ಕಾಲ ಮುಂದೂಡುವುದಾಗಿ ಸುಪ್ರೀಂಕೋರ್ಟ್ ಮುಂದೆ ಪ್ರಸ್ತಾಪಿಸಿದ್ದರು. ಅವರ ಪ್ರಸ್ತಾವನೆಯನ್ನು ಸುಪ್ರೀಂಕೋರ್ಟ್ ಅಂಗೀಕರಿಸಿತ್ತು. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 21ರಂದು ನಡೆಯಬೇಕಾಗಿದ್ದ ಉಪ ಚುನಾವಣೆ ಮುಂದೂಡಲ್ಪಟ್ಟಿತ್ತು.
ಈ ಶಾಸಕರನ್ನು ಆಗಸ್ಟ್ 25 ಮತ್ತು 28ರಂದು ಅನರ್ಹಗೊಳಿಸಿದ್ದು, ತೆರವಾಗಿರುವ ಕ್ಷೇತ್ರಗಳಿಗೆ ಫೆಬ್ರವರಿ ಒಳಗಾಗಿ ಚುನಾವಣೆ ನಡೆಯಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಡಿಸೆಂಬರ್ 5ಕ್ಕೆ ಉಪ ಚುನಾವಣೆಯನ್ನು ಆಯೋಗ ನಿಗದಿಪಡಿಸಿದೆ. ಅಷ್ಟರಲ್ಲಿ ಸುಪ್ರೀಂಕೋರ್ಟ್‍ನಲ್ಲಿ ಸಲ್ಲಿಸಲಾಗಿರುವ ಅನರ್ಹ ಶಾಸಕರ ಅರ್ಜಿ ಮೇಲಿನ ಅಂತಿಮ ತೀರ್ಪು ಹೊರ ಬೀಳಬಹುದು ಎಂಬ ನಿರೀಕ್ಷೆಯಿಂದ ಆಯೋಗ ಚುನಾವಣೆಗೆ ದಿನಾಂಕ ನಿಗದಿಪಡಿಸಿದೆ ಎಂದು ಹೇಳಲಾಗಿದೆ. ಒಂದು ವೇಳೆ ಸುಪ್ರೀಂಕೋರ್ಟ್‍ನಲ್ಲಿ ಅನರ್ಹ ಶಾಸಕರ ಪರ ತೀರ್ಪು ಹೊರ ಬಿದ್ದರೆ, ಅವರೆಲ್ಲಾ ಶಾಸಕರಾಗಿ ಮುಂದು ವರೆಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಂದರೆ ಚುನಾವಣೆ ಘೋಷಣೆಯಾ ಗಿರುವ ಕ್ಷೇತ್ರಗಳು ಖಾಲಿ ಇರುವುದಿಲ್ಲ. ಅದೇ ವೇಳೆ ರಾಣೆಬೆನ್ನೂರು ಕ್ಷೇತ್ರದಿಂದ ಕೆಪಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದ ಶಾಸಕ ಆರ್.ಶಂಕರ್ ಹೊರತುಪಡಿಸಿ ಇನ್ನುಳಿದ ಶಾಸಕರು ರಾಜೀನಾಮೆಯನ್ನೂ ಸಲ್ಲಿಸಿದ್ದು, ಅನರ್ಹ ಶಾಸಕರ ಪರ ತೀರ್ಪು ಬಂದಲ್ಲಿ ಅವರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿದರೆ ಉಪ ಚುನಾವಣೆ ನಡೆಯಲು ಸಾಧ್ಯವಾ ಗುತ್ತದೆ. ಇಲ್ಲದಿದ್ದರೆ ಉಪ ಚುನಾವಣೆ ರದ್ದಾಗುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ.
ಜೆಡಿಎಸ್‍ನ ಎ.ಹೆಚ್.ವಿಶ್ವನಾಥ್ ಪ್ರತಿನಿಧಿಸುತ್ತಿರುವ ಹುಣಸೂರು, ನಾರಾಯಣಗೌಡ ಪ್ರತಿನಿಧಿಸುತ್ತಿರುವ ಕೆ.ಆರ್.ಪೇಟೆ, ಗೋಪಾಲಯ್ಯ ಪ್ರತಿನಿಧಿಸುತ್ತಿರುವ ಮಹಾಲಕ್ಷ್ಮಿ ಲೇಔಟ್, ಕಾಂಗ್ರೆಸ್ ಶಾಸಕರ ಕ್ಷೇತ್ರಗಳಾದ ಯಶವಂತಪುರ (ಎಸ್.ಟಿ. ಸೋಮಶೇಖರ್), ಶಿವಾಜಿನಗರ (ರೋಷನ್ ಬೇಗ್), ಹೊಸಕೋಟೆ (ಎಂಟಿಬಿ ನಾಗರಾಜ್), ಕೆ.ಆರ್.ಪುರಂ (ಭೈರತಿ ಬಸವರಾಜ್), ಚಿಕ್ಕಬಳ್ಳಾಪುರ (ಡಾ.ಸುಧಾಕರ್), ಬಳ್ಳಾರಿ ಜಿಲ್ಲೆಯ ವಿಜಯನಗರ (ಆನಂದ್ ಸಿಂಗ್), ಯೆಲ್ಲಾಪುರ (ಶಿವರಾಂ ಹೆಬ್ಬಾರ್), ಹಿರೇಕೆರೂರು (ಬಿ.ಸಿ.ಪಾಟೀಲ್), ಗೋಕಾಕ್ (ರಮೇಶ್ ಜಾರಕಿ ಹೊಳಿ), ಕಾಗವಾಡ (ಶ್ರೀಮಂತ ಪಾಟೀಲ್), ಅಥಣಿ (ಮಹೇಶ್ ಕುಮಟಳ್ಳಿ) ಮತ್ತು ರಾಣೆಬೆನ್ನೂರು (ಆರ್.ಶಂಕರ್) ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ.