ದಿನೇಶ್ ಗುಂಡೂರಾವ್ ಸಿದ್ದರಾಮಯ್ಯನ ಚೇಲಾ, ಬಕೆಟ್: ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ತೀವ್ರ ವಾಗ್ದಾಳಿ
ಮೈಸೂರು

ದಿನೇಶ್ ಗುಂಡೂರಾವ್ ಸಿದ್ದರಾಮಯ್ಯನ ಚೇಲಾ, ಬಕೆಟ್: ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ತೀವ್ರ ವಾಗ್ದಾಳಿ

September 28, 2019

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂ ರಾವ್ ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರ ಚೇಲಾ, ಬಕೆಟ್. ಆತನಿಗೆ ಮಾಡಲು ಬೇಕಾದಷ್ಟು ಕೆಲಸಗಳಿವೆ. ಅದನ್ನು ಬಿಟ್ಟು ನಮ್ಮ ಬಗ್ಗೆ ಮಾತನಾಡುತ್ತಾನೆ. ಅವನು ನಮ್ಮ ಬಗ್ಗೆ ಏನು ಮಾತಾಡುವುದು, ಅವನೊಬ್ಬ ಅಯೋಗ್ಯ ಎಂದು ಅನರ್ಹ ಶಾಸಕ ಎಸ್.ಟಿ. ಸೋಮಶೇಖರ್ ಕಟು ಶಬ್ದಗಳಲ್ಲಿ ದಿನೇಶ್ ಗುಂಡೂ ರಾವ್ ವಿರುದ್ಧ ಕಿಡಿಕಾರಿದ್ದಾರೆ.

ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಕೊಠಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೌದು ನಾವು ಅನರ್ಹರಾಗಿದ್ದೇವೆ. ಆದರೆ ರಾಜಕೀಯ ವ್ಯಭಿಚಾರಿಗಳಲ್ಲ. ನಾವು ಯಾವ ದ್ರೋಹ ಮಾಡಿದ್ದೇವೆ? ಕಾಂಗ್ರೆಸ್ಸಿಗೆ ದ್ರೋಹ ಮಾಡಿದ್ದೇವೆಯೇ? ಸಮ್ಮಿಶ್ರ ಸರ್ಕಾರ ಸರಿ ಇಲ್ಲ ಎಂದು ಇಡೀ ರಾಜ್ಯವೇ ಹೇಳುತ್ತಿತ್ತು. ಅದಕ್ಕೆ ನಾವು ಶಾಸಕ ಸ್ಥಾನಕ್ಕೆ ರಾಜೀ ನಾಮೆ ನೀಡಿ ಸರ್ಕಾರ ಪತನಗೊಳಿಸಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ನಾವೇನು ರಾಜೀನಾಮೆ ಕೊಟ್ಟಿರಲಿಲ್ಲ. ಪದೇ ಪದೆ ಅನರ್ಹ ಶಾಸಕರ ಬಗ್ಗೆ ಮಾತಾನಾಡುವುದು ಬೇಡ ಎಂದು ದಿನೇಶ್ ಗುಂಡೂರಾವ್ ಬಗ್ಗೆ ಎಚ್ಚರಿಕೆ ನೀಡಿದರೂ ಹಿರಿಯ ಕಾಂಗ್ರೆಸ್ ನಾಯಕರನ್ನು ಕಡೆಗಣಿ ಸುತ್ತೀರಿ. ಕೆ.ಹೆಚ್.ಮುನಿಯಪ್ಪ, ಬಿ.ಕೆ. ಹರಿಪ್ರಸಾದ್ ಗುರುವಾರದ ಸಭೆಯಲ್ಲಿ ಪ್ರಶ್ನೆ ಮಾಡಿದ್ದರಲ್ಲಿ ತಪ್ಪೇನಿದೆ?

ಪಕ್ಷ ವಿರೋಧಿಗಳನ್ನು ಜೊತೆಯಲ್ಲಿಟ್ಟುಕೊಂಡು ಸಭೆ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ?. ಹಿರಿಯ ಕಾಂಗ್ರೆಸ್ ನಾಯಕರನ್ನು ಕಣೆಗಣಿಸುತ್ತಿದ್ದೀರಿ. ದಿನೇಶ್ ಗುಂಡೂರಾವ್‍ಗೆ ಮಾನ ಮರ್ಯಾದೆಯೂ ಇಲ್ಲ. ಆತನಿಗೆ ತಾಕತ್ತೂ ಇಲ್ಲ ಎಂದು ಏಕ ವಚನದಲ್ಲಿ ಟೀಕಿಸಿದರು.

ಕೆಪಿಸಿಸಿಯಲ್ಲಿ ಪ್ರಾಮಾಣಿಕ ಅಧ್ಯಕ್ಷರಾಗಿದ್ದ ಜಿ. ಪರಮೇಶ್ವರ್ ಅವರನ್ನು ಕಡೆಗಣಿಸು ತ್ತೀರಿ. ದಿನೇಶ್ ಗುಂಡೂರಾನ್‍ಗೆ ಕೆಪಿಸಿಸಿ ಅಧ್ಯಕ್ಷರಾಗಲು ಅರ್ಹತೆ ಇದ್ದಿದ್ದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ನಾವು ಕಾಂಗ್ರೆಸ್ ಪಕ್ಷವನ್ನು ಬಿಡುವ ಪರಿಸ್ಥಿತಿ ಬರುತ್ತಿರಲಿಲ್ಲ. ಇವನು ಸರಿಯಾಗಿದ್ದಿದ್ದರೆ ನಾವು ಕಾಂಗ್ರೆಸ್ ಬಿಡುತ್ತಿದ್ದೆವಾ? ನಾವು ಕಾಂಗ್ರೆಸ್ ಬಿಡಲು ಈ ದಿನೇಶ್ ಗುಂಡೂರಾವ್ ನೇರ ಕಾರಣ ಎಂದು ಆರೋಪಿಸಿದರು.

ದಿನೇಶ್ ಗುಂಡೂರಾವ್, ರಿಜ್ವಾನ್ ಅರ್ಷದ್, ಕೃಷ್ಣಭೈರೇಗೌಡರನ್ನು ಮುಂದೆ ಇಟ್ಟುಕೊಂಡು ಪಕ್ಷ ನಡೆಸುತ್ತಾರೆ. ಹಿರಿಯರನ್ನು ಕಡೆಗಣಿಸುತ್ತಿದ್ದಾನೆ. ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ, ರಿಜ್ವಾನ್ ಅರ್ಷಾದ್ ಮಾತ್ರ ಕಾಂಗ್ರೆಸ್ಸಿಗರಾ? ಇದು ಸಿದ್ದರಾಮಯ್ಯನಾ ಕಾಂಗ್ರೆಸ್ ಪಕ್ಷನಾ? ನಿಜವಾದ ಕಾಂಗ್ರೆಸ್ಸ್ ಪಕ್ಷವಾ? ದಿನೇಶ್ ಗುಂಡೂರಾವ್ ಅಯೋಗ್ಯ ಅಧ್ಯಕ್ಷ, ನನ್ನ ಜತೆಯಲ್ಲಿ ಸದಸ್ಯ ಆಗಿದ್ದ ಆತ ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಮಗ ಎಂಬ ಕಾರಣಕ್ಕೆ ಅವನಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನಮಾನ ಸಿಕ್ಕಿದೆ ಎಂದು ಕಿಡಿ ಕಾರಿದರು.

7 ಬಾರಿ ಗೆದ್ದಂತಹ ಕೆ.ಎಚ್.ಮುನಿಯಪ್ಪಗೆ ಅವಮಾನ ಮಾಡಿದ್ದಾರೆ. ರಮೇಶ್ ಕುಮಾರ್ ಮುನಿಯಪ್ಪರನ್ನು ಸೋಲಿಸಿದರು. ಅವರ ಮೇಲೆ ಏನು ಕ್ರಮ ಕೈಗೊಳ್ಳಲಾಗಿದೆ. ಮುನಿಯಪ್ಪ ನಿನ್ನೆಯ ಸಭೆಯಲ್ಲಿ ಹೇಳಿದ್ದು ಸರಿ ಇದೆ. ಸಿದ್ದರಾಮಯ್ಯ, ರಮೇಶ್ ಕುಮಾರ್ ಅವರಿಗೆ ನಮ್ಮನ್ನು ಅನರ್ಹ ಮಾಡಿಸುವುದರಲ್ಲಿ ಸಂತೋಷ ಆಗಿದೆ. ಅದೇ ಕೆ.ಹೆಚ್. ಮುನಿಯಪ್ಪ ಅವರನ್ನು ಕೋಲಾರದಲ್ಲಿ ಸೋಲಿಸಿದವರನ್ನು ಇವರು ಯಾಕೆ ಅನರ್ಹಗೊಳಿಸಲಿಲ್ಲ? ದೇವೇಗೌಡರನ್ನು ತುಮಕೂರಿನಲ್ಲಿ ಸೋಲಿಸಿದವರಿಗೆ ನೋಟಿಸ್ ಏಕೆ ನೀಡಿಲ್ಲ? ನಿಖಿಲ್ ಕುಮಾರಸ್ವಾಮಿಯನ್ನು ಮಂಡ್ಯದಲ್ಲಿ ಸೋಲಿಸಿದವರ ವಿರುದ್ಧ ಕ್ರಮವನ್ನೇಕೆ ಕೈಗೊಂಡಿಲ್ಲ? ಇದು ಸಿದ್ದರಾಮ ಯ್ಯರ ಕಾಂಗ್ರೆಸ್ಸ ಪಕ್ಷವಾ ಅಥವಾ ನಿಜವಾದ ಕಾಂಗ್ರೆಸ್ ಪಕ್ಷವೇ ಎಂದು ಪ್ರಶ್ನಿನಿಸಿದರು.

Translate »