ಅಂಗನವಾಡಿ ನೌಕರರಿಂದ ಡಿಸಿ ಕಚೇರಿ ಚಲೋ
ಹಾಸನ

ಅಂಗನವಾಡಿ ನೌಕರರಿಂದ ಡಿಸಿ ಕಚೇರಿ ಚಲೋ

July 11, 2018

ಹಾಸನ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವ ದಲ್ಲಿ ರಾಜ್ಯ ಅಂಗನವಾಡಿ ನೌಕರರ ಸಂಘ ಸಾವಿರಾರು ಕಾರ್ಯಕರ್ತರು ಡಿಸಿ ಕಚೇರಿ ಚಲೋ ನಡೆಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿ ಹಿರಿಯ ಸಂಘಟಕಿ ಸೌಭಾಗ್ಯ ಬೃಹತ್ ಬ್ಯಾನರ್‍ನಲ್ಲಿ ಸಹಿ ಮಾಡುವುದರ ಮೂಲಕ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಭಾರೀ ಮೆರವಣಿಗೆ ಹೊರಟ ಪ್ರತಿಭಟ ನಾಕಾರರು, ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರಲ್ಲದೆ, ಆವರಣದಲ್ಲಿ ಜಮಾವಣೆಗೊಂಡು ಬೇಡಿಕೆ ಈಡೇರಿಕೆಗೆ ಘೋಷಣೆ ಕೂಗಿದರು.

ಐಸಿಡಿಎಸ್ ಯೋಜನೆಯಡಿಯಲ್ಲಿ ಕೆಲಸ ಮಾಡುವ ಅಂಗನವಾಡಿ ನೌಕರ ರನ್ನು ಅತ್ಯಂತ ಕಡಿಮೆ ಸವಲತ್ತುಗಳಿಗೆ ದಿನಕ್ಕೆ 6.30 ಗಂಟೆಯ ಕೆಲಸದೊಟ್ಟಿಗೆ ಚುನಾವಣೆ, ಸರ್ವೇ, ಭಾಗ್ಯಲಕ್ಷ್ಮೀ, ಸ್ರ್ತೀಶಕ್ತಿ, ವಿಕಲಚೇತನ ಸಂಬಂಧಿತ ಕೆಲಸಗಳು ಸೇರಿದಂತೆ ರಾಜ್ಯ ಸರ್ಕಾರ ಹೊಸದಾಗಿ ಪ್ರಕಟಿಸಿದ ಮಾತೃಪೂರ್ಣ ಯೋಜನೆಗೂ ಬಳಸಿಕೊಳ್ಳಲಾಗುತ್ತಿದೆ. ಸಣ್ಣಪುಟ್ಟ ತಪ್ಪುಗಳಾದರೆ, ಅವಮಾನಿಸುವುದು ಕೆಲಸದಿಂದ ತೆಗೆಯುವ ಪ್ರಕ್ರಿಯೆಗಳು ಹೆಚ್ಚಾಗುತ್ತಿದ್ದು, ಅಂಗನವಾಡಿ ನೌಕರರ ವಿರೋಧಿ ಧೋರಣೆ ಖಂಡಿಸಿ, ವಿವಿಧ ಬೇಡಿಕೆ ಈಡೇರಿಕೆಗಳಿಗಾಗಿ ಸಂಘದ ರಾಜ್ಯ ಸಮಿತಿಯ ಕರೆಯಂತೆ ಜಿಲ್ಲಾಧಿಕಾರಿ ಕಚೇರಿ ಚಲೋ ಹಮ್ಮಿಕೊಳ್ಳಲಾಗಿದ್ದು, ಸೇವಾ ಜೇಷ್ಠತೆಯ ಆಧಾರದಲ್ಲಿ 45ನೇ ಐಎಲ್‍ಸಿ ಶಿಫಾರಸ್ಸಿನಂತೆ 18,000 ಕನಿಷ್ಠ ಮಾಸಿಕ ವೇತನ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ ತೀವ್ರ ವಾಗಿದೆ. ಇತರೆ ರಾಜ್ಯದಲ್ಲಿರುವಂತೆ ನಮ್ಮ ರಾಜ್ಯದಲ್ಲಿಯೂ ಕೂಡ ಅಂಗನವಾಡಿ ನೌಕರರ ಗೌರವಧನ ಹೆಚ್ಚಳವಾಗಬೇಕು ಮತ್ತು ಸೇವಾ ಜೇಷ್ಠತೆ ಆಧಾರದಲ್ಲಿ ವೇತನ ನಿಗದಿಪಡಿಸಬೇಕು. ಮಾತೃ ವಂದನಾ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ ಅಂಗನವಾಡಿ ನೌಕರರ ಮುಖಾಂತರ ಜಾರಿ ಮಾಡಿಸುತ್ತಿದೆ. ಆದರೆ 2010ರಿಂದಲೂ ಕೇಂದ್ರ ಗೌರವಧನದಲ್ಲಿ ಒಂದು ಪೈಸೆಯನ್ನೂ ಹೆಚ್ಚಳ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಪ್ರತಿಭಟನಾಕಾ ರರು, ವಿವಿಧ ಯೋಜನೆಗಳಿಗೆ ಡಿಡಿ, ಡಿಓ, ಸಿಡಿಪಿಓ, ಮೇಲ್ವಿಚಾರಕಿಯರನ್ನು ಖಾಯಂ ಗೊಳಿಸಬೇಕು ಎಂದು ಆಗ್ರಹಿಸಿದರು.

ಐಸಿಡಿಎಸ್ ಯೋಜನೆಯ ಸಾರ್ವತ್ರೀ ಕರಣದ ಭಾಗವಾಗಿ 3,331 ಮಿನಿ ಅಂಗನ ವಾಡಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆದರೆ ಹಲವು ಮಿನಿ ಅಂಗನವಾಡಿ ಕೇಂದ್ರ ಗಳಲ್ಲಿ ಹೆಚ್ಚು ಮಕ್ಕಳು, ಫಲಾನುಭವಿ ಗಳಿದ್ದರೂ ಆ ಕೇಂದ್ರಗಳನ್ನು ಪೂರ್ಣ ಕೇಂದ್ರಗಳೆಂದೂ ಪರಿಗಣಿಸುತ್ತಿಲ್ಲ. ಇಬ್ಬರ ಕೆಲಸ ಒಬ್ಬರೇ ಮಾಡುತ್ತಿರುವುದರಿಂದ ಸಿಬ್ಬಂದಿಗೆ ಅತೀವ ಒತ್ತಡಕ್ಕೂಳಗಾಗಿರುವುದಷ್ಟೇ ಅಲ್ಲದೆ ಸಂಪೂರ್ಣವಾಗಿ ಆ ಮಕ್ಕಳಿಗೆ ನ್ಯಾಯ ಒದಗಿಸಲು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಈಗಂತೂ ಮಾತೃಪೂರ್ಣ ಯೋಜನೆ ಜಾರಿಯಲ್ಲಿರುವುದರಿಂದ ನೌಕರರು ಶೋಷಣೆಗೊಳಗಾಗಿದ್ದಾರೆ. ಆದ್ದರಿಂದ ಹೊಸ ಅಂಗನವಾಡಿ ಕೇಂದ್ರಗಳು ತೆರೆದಾಗ ಮಿನಿ ಅಂಗನ ವಾಡಿ ಕಾರ್ಯಕರ್ತೆಯರಿಗೆ ಆದ್ಯತೆ ನೀಡಿ, ಮಿನಿ ಅಂಗನವಾಡಿ ಕೇಂದ್ರಗಳನ್ನು ಸಂಪೂರ್ಣ ಅಂಗನವಾಡಿ ಕೇಂದ್ರಗಳನ್ನಾಗಿ ಪರಿವರ್ತಿಸಬೇಕು. ಅಲ್ಲದೆ ಈಗಾಗಲೇ ಖಾಸಗಿಯಂತೆ ಸರ್ಕಾರ ಎಲ್‍ಕೆಜಿ ಮತ್ತು ಯುಕೆಜಿಯನ್ನು ಗ್ರಾಪಂ, ಹೋಬಳಿ ಮತ್ತು ನಗರಗಳಲ್ಲಿ ಅವಕಾಶ ನೀಡಿರು ವುದರಿಂದ ಅಂಗನವಾಡಿ ಕೇಂದ್ರಗಳಿಗೆ ಬರುವ ಮಕ್ಕಳ ಸಂಖ್ಯೆ ದಿನದಿನಕ್ಕೆ ಕಡಿಮೆಯಾಗುತ್ತಿದೆ. ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‍ಕೆಜಿ, ಯುಕೆಜಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರಲ್ಲದೆ, ಇನ್ನಿತರೆ ಬೇಡಿಕೆ ಈಡೇ ರಿಸಲು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಸಿಐಟಿಯು ಪ್ರಧಾನ ಕಾರ್ಯದರ್ಶಿ ಡಿ.ಎಲ್. ರಾಘವೇಂದ್ರ, ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಇಂದ್ರಮ್ಮ, ಉಪಾಧ್ಯಕ್ಷೆ ಎಂ.ಬಿ.ಪುಷ್ಪ, ಗೌರವಾಧ್ಯಕ್ಷೆ ಮಂಜಮ್ಮ, ಶೈಲಜಾ, ಜಯಂತಿ, ಮೀನಾಕ್ಷಿ, ಸಾವಿತ್ರಿ, ಅರವಿಂದ್ ಪ್ರತಿಭಟನೆಯಲ್ಲಿದ್ದರು.

Translate »