ಇಂದು ಸಂಜೆ 6ಕ್ಕೆ ಡೆಡ್‍ಲೈನ್ ಫಿಕ್ಸ್
ಮೈಸೂರು

ಇಂದು ಸಂಜೆ 6ಕ್ಕೆ ಡೆಡ್‍ಲೈನ್ ಫಿಕ್ಸ್

July 23, 2019

ಬೆಂಗಳೂರು: ಅನಗತ್ಯವಾದ ಭಾಷಣ… ಗದ್ದಲ… ವಿತಂಡವಾದಗಳಿಂದ ಇಡೀ ದಿನ ಕಾಲಹರಣ ಮಾಡಿ ವಿಶ್ವಾಸ ಮತ ಕಲಾಪವನ್ನು ನಾಳೆಗೆ ಮುಂದೂಡಿ ಸುವ ಮೂಲಕ ಒಂದು ದಿನ ಕಾಲಾವಕಾಶ ಪಡೆಯುವಲ್ಲಿ ಕಾಂಗ್ರೆಸ್-ಜೆಡಿಎಸ್ ಶಾಸಕರು ಯಶಸ್ವಿಯಾದರು. ನಾಳೆ ಸಂಜೆ 6 ಗಂಟೆಗೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣ ಗೊಳಿಸುವುದಾಗಿ ಆಡಳಿತ ಪಕ್ಷಗಳ ಸದಸ್ಯರೇ ಸ್ವಯಂ ಡೆಡ್‍ಲೈನ್ ನಿಗದಿಪಡಿಸಿದ್ದಾರೆ.

ಸೋಮವಾರದಂದು ವಿಶ್ವಾಸಮತ ಪ್ರಕ್ರಿಯೆ ಮುಕ್ತಾಯಗೊಳಿಸುತ್ತೇವೆ ಎಂದು ಸದನದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಶುಕ್ರವಾರ ನೀಡಿದ್ದ ಮಾತು ತಪ್ಪುವ ಮೂಲಕ ರಾಜ್ಯದ ಜನತೆಯ ಮುಂದೆ ವಚನಭ್ರಷ್ಟರಾದರು. ಶತಾಯ-ಗತಾಯ ಇಂದು ವಿಶ್ವಾಸಮತ ಪ್ರಕ್ರಿಯೆ ಮುಗಿಸಲೇ ಬಾರದು ಎಂದು ನಿರ್ಧ ರಿಸಿಕೊಂಡವರಂತೆ ಸದನವನ್ನು ಪ್ರವೇಶಿಸಿದ ದೋಸ್ತಿ ಶಾಸಕರು, ವ್ಯವಸ್ಥಿತವಾಗಿ ಕಾಲಹರಣ ಮಾಡಿದರು. ಸಹಜವಾಗಿ ಇಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಹಿರಿಯ ಶಾಸಕರಾದ ಹೆಚ್.ಕೆ.ಪಾಟೀಲ್, ಸಚಿವರಾದ ಯು.ಟಿ.ಖಾದರ್, ಡಿ.ಕೆ.ಶಿವಕುಮಾರ್ ಅವರುಗಳು ಆಡಳಿತ ಪಕ್ಷದ ಪರ ಮಾತನಾಡಬೇಕಾ ಗಿತ್ತು. ಅದೇ ರೀತಿ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ, ಮಾಧುಸ್ವಾಮಿ, ಸುರೇಶ್ ಕುಮಾರ್ ಸೇರಿದಂತೆ ಕೆಲ ಶಾಸಕರು ವಿಪಕ್ಷದ ಪರ ಮಾತನಾಡಬೇಕಿತ್ತು. ವಿಪರ್ಯಾಸ ವೆಂದರೆ, ಆಡಳಿತ ಪಕ್ಷದ ಪರವಾಗಿ ಯಾವ ಪ್ರಮುಖರು ಇಂದು ಮಾತನಾಡಲೇ ಇಲ್ಲ. ಸಿದ್ದರಾಮಯ್ಯನವರಂತೂ ಸದನವನ್ನು ಮುಂದೂಡಿಸುವ ಸಲುವಾಗಿ ಮಾತನಾಡಿ, ನಾಳೆ (ಜು.23) ಸಂಜೆ 6 ಗಂಟೆಯವರೆಗೆ ಸಮಯಪಡೆದುಕೊಂಡರು.

ಆಡಳಿತ ಪಕ್ಷದ ಪರವಾಗಿ ರಾತ್ರಿ 8.30ರವರೆವಿಗೂ ಕೆಲ ಶಾಸಕರು ಮಾತನಾಡಿದರು. ಈ ಹಿಂದೆ ಕೃಷ್ಣಬೈರೇಗೌಡ ಮಾತನಾಡಿದ್ದ ಕೆಲ ವಿಷಯಗಳನ್ನೇ ಪ್ರತಿಯೊಬ್ಬರು ಪುನರಾವರ್ತನೆ ಮಾಡುವ ಮೂಲಕ ಗಂಟೆಗಟ್ಟಲೇ ಅನಾವಶ್ಯಕವಾಗಿ ಭಾಷಣ ಬಿಗಿಯುವ ಮೂಲಕ ಕಾಲಹರಣ ಮಾಡುವುದರಲ್ಲಿ ಯಶಸ್ವಿಯೂ ಆದರು.

ರಾತ್ರಿ 8.30ರಲ್ಲಿ ವಿಪಕ್ಷದ ಪರವಾಗಿ ಬಿ.ಎಸ್.ಯಡಿಯೂರಪ್ಪ ಮಾತನಾಡಲಾರಂ ಭಿಸುತ್ತಿದ್ದಂತೆಯೇ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಸದನದಲ್ಲಿ ಗದ್ದಲವೆಬ್ಬಿಸುವ ಮೂಲಕ ಇಂದು ವಿಶ್ವಾಸ ಪ್ರಕ್ರಿಯೆ ಮುಕ್ತಾಯಗೊಳ್ಳುವುದಿಲ್ಲ ಎಂಬ ಮುನ್ಸೂಚನೆ ನೀಡಿದರು. ಯಡಿಯೂರಪ್ಪ ಅವರು, ಶುಕ್ರವಾರ ವಿಧಾನಸಭಾಧ್ಯಕ್ಷರು, ಮುಖ್ಯಮಂತ್ರಿ ಗಳು ಮತ್ತು ಸಿದ್ದರಾಮಯ್ಯನವರು ನೀಡಿದ ವಚನದಂತೆ ವಿಶ್ವಾಸಮತ ಯಾಚನೆ ಮಾಡಬೇಕು ಎಂದು ಹೇಳುತ್ತಿದ್ದಂತೆಯೇ ತಮ್ಮ ಆಸನಗಳಿಂದ ಎದ್ದು ಸಭಾಧ್ಯಕ್ಷರ ಬಾವಿಗೆ ಬಂದ ಮೈತ್ರಿ ಶಾಸಕರು `ಬೇಕೇ ಬೇಕು, ನ್ಯಾಯ ಬೇಕು’, `ಸಂವಿಧಾನ ಉಳಿಸಿ’ ಎಂದು ಘೋಷಣೆ ಕೂಗುತ್ತಾ ಗದ್ದಲವೆಬ್ಬಿಸಿದರು. ಈ ಗದ್ದಲದಿಂದ ಮಾತನಾಡಲಾಗದೆ ಯಡಿಯೂರಪ್ಪ ಸುಮ್ಮನೆ ಕೂರುವಂತಹ ಪರಿಸ್ಥಿತಿ ನಿರ್ಮಾಣವಾಯಿತು.

ಸದನವನ್ನು ಹತೋಟಿಗೆ ತರಲು ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ಹೆಣಗಾಡ ಬೇಕಾಯಿತು. `ಸಂವಿಧಾನ ಉಳಿಸಿ ಎಂದು ಕೂಗುತ್ತಿದ್ದೀರಿ ಆದರೆ, ನೀವೇ ಸಂವಿಧಾನಕ್ಕೆ ಅಪಚಾರ ಮಾಡುತ್ತಿದ್ದೀರಿ. ವಿರೋಧ ಪಕ್ಷದ ನಾಯಕರು ಮಾತನಾಡಲೂ ಅವಕಾಶ ನೀಡುವುದಿಲ್ಲ ಅಂದರೆ ಅರ್ಥವೇನು?’ ಎಂದು ಹರಿಹಾಯ್ದರಲ್ಲದೇ, ಎಲ್ಲರು ಅವರವರ ಸ್ಥಾನದಲ್ಲಿ ಕುಳಿತುಕೊಳ್ಳಿ ಎಂದು ಗದರಿದರು. ವಿಧಾನಸಭಾಧ್ಯಕ್ಷರು ಎಷ್ಟೇ ಗದರಿದರೂ ಗಣನೆಗೆ ತೆಗೆದುಕೊಳ್ಳದೇ, ಮೈತ್ರಿ ಶಾಸಕರು ಘೋಷಣೆ ಕೂಗುತ್ತಲೇ ಇದ್ದರು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಎದ್ದು ನಿಂತು ಎಲ್ಲರು ಕುಳಿತುಕೊಳ್ಳಿ ಎಂದು ಮನವಿ ಮಾಡಿದರೂ ಮೈತ್ರಿ ಶಾಸಕರು ಕೇರ್ ಮಾಡಲಿಲ್ಲ. ಸಹನೆ ಕಳೆದು ಕೊಂಡ ವಿಧಾನಸಭಾಧ್ಯಕ್ಷರು ನಿಮ್ಮ ನಾಯಕರು ಹೇಳಿದರು ಕೇಳುವುದಿಲ್ಲವೇ? ಲೈವ್ ಹೋಗುತ್ತಿದೆ. ಆರೂವರೆ ಕೋಟಿ ಜನ ನೋಡುತ್ತಿದ್ದಾರೆ. ನಿಮ್ಮ ಸಭಾ ನಾಯಕರು ಹೇಳಿದರೂ ನೀವು ನಿಮ್ಮ ಸ್ಥಳಗಳಿಗೆ ಹೋಗುತ್ತಿಲ್ಲ ಎಂದು ಗುಡುಗಿದರು. ಆದರೂ ಅದನ್ನು ಲೆಕ್ಕಿಸದೆ, ಘೋಷಣೆಗಳು ಮುಗಿಲು ಮುಟ್ಟಿತು. ನಾನು 2 ನಿಮಿಷ ಮಾತ ನಾಡಬೇಕು. ಎಲ್ಲಾ ನಿಮ್ಮ ಜಾಗಕ್ಕೆ ಹೋಗಿ ಕುಳಿತುಕೊಳ್ಳಿ ನೀವು ಹೋಗದಿದ್ದರೆ ನಾನು ಮಾತನಾಡೋಲ್ಲ ಎಂದು ಮುಖ್ಯಮಂತ್ರಿಗಳು ಸಣ್ಣಗೆ ಬೆದರಿಸಿಯೂ ನೋಡಿದರು. ಅದಕ್ಕೂ ಕೂಡಾ ಮೈತ್ರಿ ಶಾಸಕರು ಬಗ್ಗದಿದ್ದಾಗ ಕೊನೆಗೆ ಸಿದ್ದರಾಮಯ್ಯ ಎದ್ದು ನಿಂತು `ಎಲ್ಲ ನಿಮ್ಮ ನಿಮ್ಮ ಜಾಗದಲ್ಲಿ ಹೋಗಿ ಕುತ್ಕೊಳ್ಳಿ’ ಎಂದು ಗುಟುರು ಹಾಕಿದಾಗ ಎಲ್ಲಾ ಶಾಸಕರು ತಮ್ಮ ತಮ್ಮ ಸ್ಥಾನಕ್ಕೆ ಹೋಗಿ ಕುಳಿತುಕೊಂಡರು.

ಆ ನಂತರ ಮಾಧುಸ್ವಾಮಿಯವರು ಮಾತನಾಡುತ್ತಿದ್ದಂತೆಯೇ ಮತ್ತೆ ತಮ್ಮ ವರಸೆ ತೋರಿಸಿದ ಮೈತ್ರಿ ಶಾಸಕರು ಗದ್ದಲವೆಬ್ಬಿಸಿ ಸಭೆಗೆ ಅಡಚಣೆಯುಂಟು ಮಾಡಿದರು. ಹೀಗೆ ರಾತ್ರಿ 10 ಗಂಟೆವರೆಗೂ ಯಾವುದೇ ಚರ್ಚೆಗೆ ಅವಕಾಶ ನೀಡದೇ, ಗದ್ದಲದಲ್ಲೇ ಸಭೆ ಮುಳುಗುವಂತೆ ಮಾಡುವಲ್ಲಿ ಮೈತ್ರಿ ಶಾಸಕರು ಯಶಸ್ವಿಯೂ ಆದರು. ಅಲ್ಲದೇ, ಸಮಯವಾಗಿಬಿಟ್ಟಿದೆ ಇನ್ನು ನಾವೆಲ್ಲಾ ಮಾತನಾಡಬೇಕಿದೆ. ಸಭೆಯನ್ನು ನಾಳೆಗೆ ಮುಂದೂಡಿ ಎಂದು ಪಟ್ಟು ಹಿಡಿದರು. ಯಾವುದೇ ಚರ್ಚೆ ನಡೆಯದೇ ಕೇವಲ ಗದ್ದಲದಲ್ಲೇ ಸಭೆ ಮುಂದುವರಿಯುತ್ತಿದ್ದಾಗ ಸ್ಪೀಕರ್ ರಮೇಶ್ ಕುಮಾರ್ ಅವರು 10.30ರಲ್ಲಿ ತಮ್ಮ ಸ್ಥಾನವನ್ನು ಉಪಾಧ್ಯಕ್ಷ ಕೃಷ್ಣಾರೆಡ್ಡಿ ಅವರಿಗೆ ಬಿಟ್ಟು ಊಟಕ್ಕೆ ತೆರಳಿದ್ದರು.

11 ಗಂಟೆಗೆ ರಮೇಶ್ ಕುಮಾರ್ ಅವರು ವಾಪಸ್ ಬಂದು ತಮ್ಮ ಆಸನದಲ್ಲಿ ಆಸೀನ ರಾಗುವವರೆವಿಗೂ ಮೈತ್ರಿ ಪಕ್ಷದ ಶಾಸಕರ ಗದ್ದಲ ಮುಂದುವರೆದೇ ಇತ್ತು. ಕೃಷ್ಣಾರೆಡ್ಡಿಯವರು ತಾವು ಸಭಾಧ್ಯಕ್ಷರ ಆಸನದಲ್ಲಿದ್ದ 30 ನಿಮಿಷಗಳ ಕಾಲವೂ `ಎಲ್ಲ ನಿಮ್ಮ ಜಾಗದಲ್ಲಿ ಹೋಗಿ ಕುಳಿತುಕೊಳ್ಳಿ’ ಎಂದಷ್ಟೇ ಹೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೃಷ್ಣಾರೆಡ್ಡಿಯವರು ಚರ್ಚೆಗೆ ಅವಕಾಶ ನೀಡಲು ಒಮ್ಮೆ ಮುಂದಾದರಾದರೂ ಮೈತ್ರಿ ಶಾಸಕರ ಗದ್ದಲದಿಂದಾಗಿ ಅದು ಸಾಧ್ಯವಾಗಲಿಲ್ಲ.

ರಮೇಶ್‍ಕುಮಾರ್ ಅವರು, ವಾಪಸ್ ಬಂದು ಆಸೀನರಾಗುತ್ತಿದ್ದಂತೆಯೇ ಹೆಚ್.ಕೆ. ಪಾಟೀಲ್ ಅವರು ಇಂದಿನ ಸಭೆ ಮುಂದೂಡಬೇಕು ಎಂಬುದಕ್ಕೆ ಪೂರಕವಾಗಿ ಕೆಲ ವಿಷಯಗಳನ್ನು ಮುಂದಿಟ್ಟು ಮಾತನಾಡಿದರು. ನಂತರ `ನಾನು ಯಾರ ಪರವಾಗಿಯೂ ಇಲ್ಲ, ವಿರೋಧವಾಗಿಯೂ ಇಲ್ಲ. ನಮ್ಮ ವಿಧಾನಸಭೆಗೆ ಗೌರವವಿದೆ’ ಎಂದು ಮಾತು ಆರಂಭಿಸಿದ ಆರ್.ವಿ.ದೇಶಪಾಂಡೆ, ಈಗಾಗಲೇ ಸಮಯ ಮೀರಿದೆ. ನಾಳೆ ಯಾವುದೇ ಕಾರಣಕ್ಕೂ ಮುಂದೂಡದೇ ವಿಶ್ವಾಸಮತ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಬಿಡೋಣ. ದಯವಿಟ್ಟು ಸಹಕರಿಸಿ ಎಂದು ಕೈ ಮುಗಿದು ಮನವಿ ಮಾಡುವ ಮೂಲಕ ಸಭೆ ಮುಂದೂಡಲು ಒಂದು ಅಸ್ತ್ರವನ್ನು ಬಿಟ್ಟರು. ದೇಶಪಾಂಡೆ ಅವರ ಮನವಿ ಬಗ್ಗೆ ಅಭಿಪ್ರಾಯ ಕೇಳಿದಾಗ ಯಡಿಯೂರಪ್ಪನವರು ಅದನ್ನು ಒಪ್ಪದೆ ರಾತ್ರಿ 1 ಗಂಟೆಯಾ ದರೂ ಪರವಾಗಿಲ್ಲ. ಕುಳಿತಿರುತ್ತೇವೆ. ಇಂದೇ ಪ್ರಕ್ರಿಯೆ ಮುಗಿಸಿಬಿಡಿ ಎಂದರು.

ರಾತ್ರಿ 9.30ರಿಂದ ಆಡಳಿತ ಪಕ್ಷದ ಯಾರೂ ಮಾತನಾಡಿಲ್ಲ. ಕೇವಲ ಕಾಲಹರಣ ಮಾಡುತ್ತಿದ್ದಾರೆ. ಒಬ್ಬರು ಮಾತನಾಡಿದ್ದನ್ನೇ ಮತ್ತೊಬ್ಬರು ಗಂಟೆಗಟ್ಟಲೇ ಮಾತನಾಡುತ್ತಾ, ವ್ಯವಸ್ಥಿತವಾಗಿ ಕಾಲ ಕಳೆಯುತ್ತಿದ್ದಾರೆ. ಅವರಿಗೆ ಮಾತನಾಡಲು ಕಾಲಮಿತಿಯೇ ಇಲ್ಲದಂತಾಗಿದೆ. ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಎದ್ದು ಹೋಗಿದ್ದಾರೆ. ಸಿದ್ದರಾಮಯ್ಯ ಮಾತನಾಡುತ್ತಲೇ ಇಲ್ಲ. ಇದು ಏನನ್ನು ತೋರಿಸುತ್ತದೆ ಎಂದು ಪ್ರಶ್ನಿಸುವ ಮೂಲಕ ಯಡಿಯೂರಪ್ಪ ಮೈತ್ರಿ ಪಕ್ಷ ಶಾಸಕರು ವ್ಯವಸ್ಥಿತವಾಗಿ ಕಾಲಹರಣ ಮಾಡುತ್ತಿರುವುದನ್ನು ಪ್ರಸ್ತಾಪಿಸಿದರು. ಕೊನೆಗೆ ಎದ್ದು ನಿಂತ ಸಿದ್ದರಾಮಯ್ಯ, ಇಂದು ಪ್ರಕ್ರಿಯೆ ಮುಗಿಸುತ್ತೇವೆಂದು ನಾನು ಮತ್ತು ಮುಖ್ಯಮಂತ್ರಿಗಳು ಹೇಳಿದ್ದೆವು. ಆದರೆ ಕೆಲ ಬೆಳವಣಿಗೆಗಳಿಂದ ಸದಸ್ಯರುಗಳು ಅದರ ಬಗ್ಗೆ ಚರ್ಚೆ ನಡೆಸಿದ್ದಾರೆ. ಈಗ ನಾನು, ಮುಖ್ಯಮಂತ್ರಿಗಳು ಮತ್ತೆ ಕೆಲವು ಸಚಿವರು, ಶಾಸಕರು ಮಾತನಾಡಿ ಪ್ರಸ್ತಾಪವನ್ನು ಮತಕ್ಕೆ ಹಾಕುವುದರೊಳಗೆ ಬೆಳಗಾಗಿ ಬಿಡುತ್ತದೆ. ಆದ್ದರಿಂದ ನಾಳೆ ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳದೇ ಮತಕ್ಕೆ ಹಾಕೋಣ ಅದಕ್ಕೆ ಸಹಕರಿಸಿ ಎಂದು ಮನವಿ ಮಾಡಿದರು. ಈ ವೇಳೆ ವಿಧಾನಸಭಾಧ್ಯಕ್ಷರು ನಾಳೆ ಎಷ್ಟೊತ್ತಿಗೆ ಮುಗಿಸುತ್ತೀರಿ ಎಂಬುದನ್ನು ಹೇಳಿಬಿಡಿ. ನೀವು ಎಷ್ಟು ಜನ ಮಾತನಾಡಿದರೂ ಸರಿ, ಒಬ್ಬರೇ ಬೇಕಾದರೆ ನೀವು ನೀಡಿದ ಕಾಲಮಿತಿಯವರೆಗೂ ಮಾತನಾಡಿದರೂ ಸರಿ ನನಗೆ ಒಂದು ಸಮಯವನ್ನು ಹೇಳಿಬಿಡಿ ಎಂದರು. ಆಗ ಸಿದ್ದರಾಮಯ್ಯನವರು ರಾತ್ರಿ 8 ಗಂಟೆಗೆ ಎಲ್ಲವನ್ನು ಮುಗಿಸಿಬಿಡೋಣ ಎಂದು ಹೇಳಿದಾಗ ಅದಕ್ಕೆ ಒಪ್ಪದ ಸ್ಪೀಕರ್ ರಮೇಶ್ ಕುಮಾರ್, ಸಂಜೆ 4 ಗಂಟೆಯೊಳಗೆ ಮುಗಿಸಿಬಿಡಬೇಕು. ಅದರ ಮೇಲೆ ಒಂದು ನಿಮಿಷ ವಾದರೂ ನಾನು ಕೂರುವುದಿಲ್ಲ ಎಂದರು. ಆ ವೇಳೆ ಎದ್ದು ನಿಂತ ಡಿ.ಕೆ.ಶಿವ ಕುಮಾರ್, 6 ಗಂಟೆಯವರೆಗೂ ನಾವು ಮಾತನಾಡುತ್ತೇವೆ. ಆ ನಂತರ ಮತಕ್ಕೆ ಹಾಕಿ 8 ಗಂಟೆಯೊಳಗೆ ಎಲ್ಲವನ್ನು ಮುಗಿಸಿಬಿಡೋಣ ಎಂದು ಚೌಕಾಸಿಗಿಳಿದಾಗ ಅದಕ್ಕೆ ಮಣಿದ ರಮೇಶ್‍ಕುಮಾರ್ 8 ಗಂಟೆಯಲ್ಲ ಆಗಲ್ಲ. 6 ಗಂಟೆಯೊಳಗೆ ಎಲ್ಲವೂ ಮುಗಿದುಹೋಗ ಬೇಕು ಎಂದು ಹೇಳುವ ಮೂಲಕ ಸದನವನ್ನು ಮುಂದೂಡಲು ಸಿದ್ದವಾಗಿಬಿಟ್ಟರು. ಬಿಜೆಪಿಯ ಮಾಧುಸ್ವಾಮಿ ಮತ್ತಿತರರು ವಿರೋಧ ವ್ಯಕ್ತಪಡಿಸಿದರೂ ಅದನ್ನು ಲೆಕ್ಕಿಸದ ವಿಧಾನಸಭಾ ಧ್ಯಕ್ಷರು, ನಾಳೆ ಬೆಳಿಗ್ಗೆ 10 ಗಂಟೆಗೆ ಸದನ ಆರಂಭವಾಗುತ್ತದೆ. 6 ಗಂಟೆಯೊಳಗೆ ಎಲ್ಲಾ ಪ್ರಕ್ರಿಯೆಗಳು ಮುಗಿಯಬೇಕು ಎಂದು ಅಪ್ಪಣೆ ಮಾಡಿ ಸದನವನ್ನು ಮುಂದೂಡಿ ಹೊರ ನಡೆದರು.

Translate »