ಮೈಸೂರು, ಮಾ.16- ಕನ್ನಡದ ಕಟ್ಟಾಳು ಪಾಟೀಲ್ ಪುಟ್ಟಪ್ಪ ಅವರ ನಿಧನಕ್ಕೆ ಶಾಸಕ ರಾದ ಜಿ.ಟಿ.ದೇವೇಗೌಡ, ಸಂದೇಶ್ ನಾಗರಾಜ್, ಎಲ್. ನಾಗೇಂದ್ರ, ಮಾಜಿ ಸಚಿವರಾದ ಅಡಗೂರು ಹೆಚ್.ವಿಶ್ವನಾಥ್, ಬಿಜೆಪಿ ಮುಖಂಡ ಆರ್.ರಘು ಅತೀವ ಸಂತಾಪ ಸೂಚಿಸಿದ್ದಾರೆ.
ಪಾಟೀಲ್ ಪುಟ್ಟಪ್ಪನವರು ಕನ್ನಡ ನಾಡು ಕಟ್ಟುವಲ್ಲಿ ಅವರದ್ದೇ ಆದ ವಿಶೇಷ ಕೊಡುಗೆ ನೀಡಿದ್ದಾರೆ. ಕನ್ನಡ ಭಾಷಾ ಬೆಳವಣಿಗೆಗೆ ಹಾಗೂ ರಾಜ್ಯದ ಅಖಂಡತೆಗೆ ಸಾಕಷ್ಟು ಶ್ರಮಿಸಿದ್ದಾರೆ. ಒಬ್ಬ ಪತ್ರಕರ್ತರಾಗಿಯೂ ರಾಜ್ಯ ಹಾಗೂ ದೇಶಕ್ಕಾಗಿ ತಮ್ಮದೇ ಆದ ಕಾಣಿಕೆ ನೀಡಿದ್ದಾರೆ. ಅವರ ನಿಧನ ನಾಡಿಗೆ ತುಂಬಲಾರದ ನಷ್ಟ ಎಂದು ಶೋಕಿಸಿದ್ದಾರೆ. ಅದರಲ್ಲೂ ಹೆಚ್.ವಿಶ್ವನಾಥ್ ಅವರು, ರಾಜ್ಯದ ಏಕೀ ಕರಣಕ್ಕೆ ವಿಶೇಷ ಶ್ರಮವಹಿಸಿದ ಪಾಟೀಲ್ ಪುಟ್ಟಪ್ಪನವರು ಹೊಸ ಕರ್ನಾಟಕದ ಬಗ್ಗೆ ಹೊಸಬಗೆಯ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸಾಕಷ್ಟು ಪರಿಶ್ರಮಪಟ್ಟರು.
ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿ ರಾಜ್ಯಕ್ಕೆ ಅಭೂತಪೂರ್ವ ಕೊಡುಗೆ ನೀಡಿದ್ದಾರೆ. ಸಾಹಿತಿ, ಪತ್ರಕರ್ತರಾಗಿ `ಪ್ರಪಂಚ’ದ ಮೂಲಕ ಸಮಾಜಕ್ಕೆ ಸತ್ಯ ಸಂದೇಶವನ್ನು ಸಾರಿದ್ದಾರೆ. ಪಾಪು ಸದಾ ಸ್ಮರಣೀಯರು ಎಂದು ತಿಳಿಸಿದ್ದಾರೆ.