ಸಾಲ ಮನ್ನಾ: ತಕ್ಷಣ ಸ್ವಯಂ ದೃಢೀಕರಣ ಪತ್ರ ಸಲ್ಲಿಸುವಂತೆ ರೈತರಿಗೆ ಉಪ ತಹಶೀಲ್ದಾರ್ ಮನವಿ
ಹಾಸನ

ಸಾಲ ಮನ್ನಾ: ತಕ್ಷಣ ಸ್ವಯಂ ದೃಢೀಕರಣ ಪತ್ರ ಸಲ್ಲಿಸುವಂತೆ ರೈತರಿಗೆ ಉಪ ತಹಶೀಲ್ದಾರ್ ಮನವಿ

December 21, 2018

ಭೇರ್ಯ: ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಆದಷ್ಟು ಬೇಗನೇ ಸಾಲಮನ್ನಾ ಯೋಜನೆಯಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಿ ಸ್ವಯಂ ದೃಢೀಕರಣ ಪತ್ರವನ್ನು ಪಡೆಯಿರಿ ಎಂದು ಹೊಸಅಗ್ರಹಾರ ಹೋಬಳಿಯ ಉಪತಹಶೀಲ್ದಾರ್ ಯಧುಗಿರೀಶ್ ತಿಳಿಸಿದ್ದಾರೆ. ಅವರು ಇಂದು ಭೇರ್ಯ ಗ್ರಾಮದಲ್ಲಿರುವ ಕಾವೇರಿ ಗ್ರಾಮೀಣ ಬ್ಯಾಂಕ್‍ಗೆ ಭೇಟಿ ನೀಡಿ ಬ್ಯಾಂಕ್‍ನ ವ್ಯವಸ್ಥಾಪಕರ ಜತೆ ಕೃಷಿ ಸಾಲ ಮನ್ನಾ ವಿಚಾರವಾಗಿ ಚರ್ಚಿಸಿದರು.

ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ರೈತರ ಸಾಲಮನ್ನಾ ಯೋಜನೆಯ ಬಗ್ಗೆ ಹಲವಾರು ಗೊಂದಲಗಳಿದ್ದು, ಬ್ಯಾಂಕ್‍ನ ಅಧಿಕಾರಿಗಳ ಜತೆಯಲ್ಲಿ ಚರ್ಚಿಸಲಾಗುತ್ತಿದೆ ಎಂದ ಅವರು, ಕೆಲವೊಂದು ಬ್ಯಾಂಕ್ ಗಳಲ್ಲಿ ರೈತರು ಸರಿಯಾದ ದಾಖಲೆಗಳನ್ನು ನೀಡಿಲ್ಲ. ಇನ್ನೂ ಕೆಲವರು ಅರ್ಜಿಯನ್ನೇ ಸಲ್ಲಿಸಿಲ್ಲ. ಆದ್ದರಿಂದ ರೈತರು ತಮ್ಮ ಸಾಲಮನ್ನಾ ಅರ್ಜಿಗಳನ್ನು ಆದಷ್ಟು ಬೇಗ ಬ್ಯಾಂಕ್‍ಗೆ ಸಲ್ಲಿಸಬೇಕು ಎಂದು ಮನವಿ ಮಾಡಿದರು.

ಆಧಾರ್ ಕಾರ್ಡ್‍ನಲ್ಲಿರುವ ರೈತರ ಹೆಸರು ಮತ್ತು ಪಹಣಿಯಲ್ಲಿರುವ ಹೆಸರು ತಾಳೆಯಾಗಬೇಕು, ಇಲ್ಲದಿದ್ದಲ್ಲಿ ಸಾಲಮನ್ನಾ ಅರ್ಜಿಯನ್ನು ಡಾಟಾ ಎಂಟ್ರೀ ಮಾಡಲು ಸಹಕಾರಿಯಾಗುವುದಿಲ್ಲ ಎಂದ ತಿಳಿಸಿದ ಅವರು, ಆಧಾರ್ ಕಾರ್ಡ್‍ನಲ್ಲಿ ತಪ್ಪಾಗಿರುವ ಹೆಸರುಗಳನ್ನು ಕೂಡಲೇ ಸ್ಥಳೀಯ ನಾಡಕಚೇರಿ ಅಥವಾ ಆಧಾರ್ ಕೇಂದ್ರದಲ್ಲಿ ತಿದ್ದುಪಡಿ ಮಾಡಿಸಿ ಬಳಿಕ ಬ್ಯಾಂಕ್‍ಗೆ ಸಲ್ಲಿಸಿ ಎಂದು ತಿಳಿಸಿದರು.

ನಂತರ ಕಾವೇರಿ ಗ್ರಾಮೀಣ ಬ್ಯಾಂಕ್‍ನ ವ್ಯವಸ್ಥಾಪಕ ಶಿವಪ್ರಕಾಶ್ ಮಾತನಾಡಿ, ನಮ್ಮ ಶಾಖೆಯಲ್ಲಿ ಅಂದಾಜು ಒಂದು ಸಾವಿರ ರೈತರು ಸಾಲಮನ್ನಾ ಯೋಜನೆಯ ಪ್ರಯೋಜನ ಪಡೆಯಲಿದ್ದು, ಈವರೆಗೆ 500 ರೈತರು ಅರ್ಜಿ ಸಲ್ಲಿಸಿದ್ದಾರೆ. ಉಳಿದ ರೈತರು ಕೂಡಲೇ ಅರ್ಜಿ ಸಲ್ಲಿಸಿ ಎಂದರು. ಈ ಸಂದರ್ಭದಲ್ಲಿ ರಾಜಸ್ವ ನಿರೀಕ್ಷಕ ತನುರಾಜ್, ಬ್ಯಾಂಕ್‍ನ ಮಾರ್ಗ ವಿಸ್ತರಣಾಧಿಕಾರಿ ರಾಜೇಶ್, ಸಿಬ್ಬಂದಿ ರವಿ, ಮತ್ತು ರೈತ ಮುಖಂಡರು ಉಪಸ್ಥಿತರಿದ್ದರು.

Translate »