ನವದೆಹಲಿ: ಕಾಂಗ್ರೆಸ್ ಸಂಸದರ ನಿಯೋಗ ನವದೆಹಲಿಯಲ್ಲಿಂದು ಕೇಂದ್ರ ಬುಡಕಟ್ಟು ಖಾತೆ ಸಚಿವ ಜುಯಲ್ ಹೊರಮ್ ಅವರನ್ನು ಭೇಟಿಯಾಗಿ ಪರಿವಾರ ಮತ್ತು ತಳವಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಮನವಿ ಸಲ್ಲಿಸಿ ಒತ್ತಾಯಿಸಿತು. ಸಂಸದÀ ಆರ್.ಧ್ರುವನಾರಾಯಣ್, ವಿ.ಎಸ್.ಉಗ್ರಪ್ಪ, ಡಿಕೆ ಸುರೇಶ್, ಚಂದ್ರಪ್ಪ, ಶಾಸಕ ರಘುಮೂರ್ತಿ ನಿಯೋಗದಲ್ಲಿದ್ದರು. ಈ ಬಗ್ಗೆ ಮಾತನಾಡಿದ ಸಂಸದ ಧ್ರುವನಾರಾಯಣ್ ರಾಜ್ಯದಲ್ಲಿ 12 ಲಕ್ಷದಷ್ಟು ಜನಸಂಖ್ಯೆಯಿರುವ ಪರಿವಾರ ಮತ್ತು ತಳವಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಕಳೆದ 34 ವರ್ಷಗಳಿಂದ ಒತ್ತಾಯ ಮಾಡಲಾಗುತ್ತಿದೆ. ಇತರೆ ಸಮುದಾಯಗಳಿಗೆ ಹೋಲಿಸಿದರೆ ಈ ಸಮು ದಾಯ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದೆ. ಈ ಬಗ್ಗೆ ರಾಜ್ಯ ಸರ್ಕಾರ ಕಳುಹಿಸಿದ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಒಪ್ಪಿದೆ. ಈ ಬಗ್ಗೆ ಶೀಘ್ರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದೇವೆ. ಮನವಿಗೆ ಸ್ಪಂದಿಸಿರುವ ಸಚಿವರು ಈ ಬಗ್ಗೆ ಕ್ರಮವಹಿಸುವುದಾಗಿ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.
