ಬೆಂಗಳೂರು, ಸೆ.11- ಮೋಟಾರು ವಾಹನ ತಿದ್ದುಪಡಿ ಕಾಯ್ದೆಯ ಅನ್ವಯ ಭಾರೀ ದಂಡ ವಿಧಿಸುತ್ತಿದ್ದ ಸರ್ಕಾರದ ನಡೆಗೆ ದೇಶಾದ್ಯಂತ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ನಡು ವೆಯೇ ಗುಜರಾತ್ ಸರ್ಕಾರ ದಂಡದ ಮೊತ್ತ ವನ್ನು ಕಡಿಮೆ ಮಾಡಿತ್ತು. ಸದ್ಯ ಕರ್ನಾಟಕದಲ್ಲೂ ದಂಡದ ಪ್ರಮಾಣ ಕಡಿಮೆ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ, ದಂಡದ ಮೊತ್ತ ಜಾಸ್ತಿಯಾಗಿರುವ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಬೇರೆ ಬೇರೆ ರಾಜ್ಯ ಗಳಲ್ಲಿ ಕಡಿಮೆ ಮಾಡಿರುವಂತೆ ನಮ್ಮಲ್ಲೂ ಕಡಿತ ಮಾಡುವ ಯೋಚನೆ ಇದೆ. ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಬೇರೆ ರಾಜ್ಯಗಳಿಂದ ಮಾಹಿತಿ ಪಡೆಯಲು ಸೂಚನೆ ನೀಡಿದ್ದೇವೆ. 2 ದಿನಗಳ ಒಳಗೆ ಈ ಮಾಹಿತಿ ಲಭಿಸುವ ನಿರೀಕ್ಷೆ ಇದ್ದು, ಆ ತಕ್ಷಣವೇ ಕ್ರಮ ಕೈಗೊಳ್ಳುತ್ತೇನೆ. ಸದ್ಯದ ಪರಿಸ್ಥಿತಿಯಲ್ಲಿ ಅಧಿಕಾರಿಗಳಿಗೆ ನೀಡಬೇಕಾದ ಕೆಲ ಸೂಚನೆಗಳನ್ನು ನೀಡಿದ್ದೇವೆ ಎಂದು ಹೇಳಿದರು. ಆದರೆ ಸದ್ಯಕ್ಕೆ ದಂಡ ವಸೂಲಿ ಮುಂದುವರೆಯುವುದೋ ಇಲ್ಲ ತಾತ್ಕಾಲಿಕ ತಡೆ ನೀಡಲಾಗುವುದೋ ಎಂಬುದನ್ನು ಡಿಸಿಎಂ ಸ್ಪಷ್ಟಪಡಿಸಲಿಲ್ಲ. ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದವರಿಗೆ ಭಾರೀ ದಂಡ ವಿಧಿಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಆಕ್ಷೇಪ ಕೇಳಿಬರು ತ್ತಿದೆ. ಇದೇ ವೇಳೆ ಗುಜರಾತ್ ಸಿಎಂ ವಿಜಯ್ ರೂಪಾಣಿ ಅವರು, ಹೊಸ ಕಾಯ್ದೆಯಲ್ಲಿ ವಿಧಿಸುತ್ತಿರುವ ದಂಡದ ಮೊತ್ತ ಗರಿಷ್ಠ ಪ್ರಮಾಣದಲ್ಲಿದ್ದು, ಈ ಬಗ್ಗೆ ಚರ್ಚೆ ನಡೆಸಿ ಕೆಲ ದಂಡದ ಮೊತ್ತಗಳನ್ನು ಕಡಿಮೆ ಮಾಡಲಾಗಿದೆ ಎಂದು ಹೇಳಿದ್ದರು.
ಗುಜರಾತ್ ಸರ್ಕಾರದ ಹೊಸ ನಿಯಮಗಳಂತೆ ಹೆಲ್ಮೆಟ್ ಧರಿಸದಿದ್ದರೆ 500 ರೂ. ದಂಡ ನಿಗದಿ ಮಾಡಲಾಗಿದೆ. ಕೇಂದ್ರ ಸರ್ಕಾರ ಸೆ.1ರಿಂದ ಜಾರಿ ಮಾಡಿದ್ದ ಹೊಸ ತಿದ್ದುಪಡಿ ಕಾಯ್ದೆಯ ಅನ್ವಯ ಈ ಮೊತ್ತ 1 ಸಾವಿರ ರೂ. ಇತ್ತು. ಸೀಟ್ ಬೆಲ್ಟ್ ಧರಿಸದಿದ್ದರೆ 1 ಸಾವಿರ ಬದಲಾಗಿ 500 ರೂ., ಡ್ರೈವಿಂಗ್ ಲೈಸೆನ್ಸ್ ಇಲ್ಲದಿದ್ದರೆ ದ್ವಿಚಕ್ರ ವಾಹನ ಸವಾರರಿಗೆ 2 ಸಾವಿರ ರೂ., ಉಳಿದ ವಾಹನಗಳಿಗೆ 3 ಸಾವಿರ ರೂ. ನಿಗದಿ ಮಾಡಲಾಗಿದೆ. ಆದರೆ ಲೈಸನ್ಸ್, ಆರ್‍ಸಿ, ವಿಮೆ ಮೊದಲ ಬಾರಿಗೆ ಇಲ್ಲದಿದ್ದರೆ 500 ರೂ. ದಂಡ ವಿಧಿಸಿದರೆ, 2ನೇ ಬಾರಿಗೆ ಈ ಮೊತ್ತ ಕೇಂದ್ರ ಸರ್ಕಾರ ನೀತಿಗೆ ಅಡಿ ಅನ್ವಯವಾಗಲಿದೆ. ತ್ರಿಬಲ್ ರೈಡಿಂಗ್ ಮಾಡುವವರಿಗೆ ವಿಧಿಸಲಾಗುತ್ತಿದ್ದ 1 ಸಾವಿರ ರೂ. ದಂಡವನ್ನು 100 ರೂ.ಗಳಿಗೆ ಕಡಿಮೆ ಮಾಡಲಾಗಿದೆ. ಮಾಲಿನ್ಯ ಪ್ರಮಾಣ ಪತ್ರ ಪಡೆಯದ ವಾಹನಗಳಿಗೆ ನಿಗದಿ ಮಾಡಿದ್ದ 10 ಸಾವಿರಗಳನ್ನು ಸಣ್ಣ ವಾಹನಗಳಿಗೆ 1 ಸಾವಿರ ರೂ. ಭಾರೀ Áಹನಗಳಿಗೆ 3 ಸಾವಿರ ರೂ.ಗೆ ಇಳಿಸಲಾಗಿದೆ.