ಹೀನಾಯವಾಗಿ ಸೋತ ಕಾಂಗ್ರೆಸ್, ಜೆಡಿಎಸ್ ಘಟಾನುಘಟಿಗಳು
ಮೈಸೂರು

ಹೀನಾಯವಾಗಿ ಸೋತ ಕಾಂಗ್ರೆಸ್, ಜೆಡಿಎಸ್ ಘಟಾನುಘಟಿಗಳು

May 24, 2019

ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ಘಟಾನುಘಟಿ ನಾಯಕರು ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿ ಮಕಾಡೆ ಮಲಗಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಸಂಸದ ಜಿ.ಎಸ್. ಬಸವ ರಾಜು ವಿರುದ್ಧ ಸೋಲನನುಭವಿಸಿದ್ದಾರೆ, ಆರಂಭಿಕ ಎಣಿಕೆ ಪ್ರಕ್ರಿಯೆಯಲ್ಲಿ ಮುನ್ನಡೆ ಸಾಧಿಸಿದ್ದ ದೇವೇಗೌಡರು ನಂತರ ನಿರಂತರ ಹಿನ್ನಡೆಗೆ ಬಂದು ಸೋಲನನುಭವಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯ್ಲಿ ಒಂದು ಬಾರಿಯೂ ಮುನ್ನಡೆ ಸಾಧಿಸದೇ ಎದುರಾಳಿ ಬಿಜೆಪಿಯ ಬಿ.ಎನ್.ಬಚ್ಚೇಗೌಡ ವಿರುದ್ಧ ಪರಾಭವ ಗೊಂಡಿದ್ದಾರೆ, ಕೋಲಾರ ಲೋಕಸಭಾ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ಮುನಿಸ್ವಾಮಿ 1,10,000 ಸಾವಿರ ಮತಗಳ ಅಂತರದಿಂದ, ಸತತವಾಗಿ 7ನೇ ಬಾರಿ ಸಂಸದರಾಗಿರುವ ಕೆ.ಎಚ್.ಮುನಿಯಪ್ಪಗೆ ಸೋಲುಣಿಸಿದ್ದಾರೆ. ಇನ್ನು ಕಲಬುರಗಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ ಖರ್ಗೆ ಬಿಜೆಪಿಯ ಡಾಕ್ಟರ್ ಉಮೇಶ್ ಜಾಧವ್ ಎದುರು ಸೋಲಿಗೆ ಶರಣಾಗಿ ದ್ದಾರೆ. ಶಿವಮೊಗ್ಗ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಯಾಗಿದ್ದ ಮಧು ಬಂಗಾರಪ್ಪ ವಿರುದ್ಧ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ರಾಘವೇಂದ್ರ ಗೆಲುವು ಸಾಧಿಸಿದ್ದಾರೆ. ಬೆಂಗ ಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿ.ಕೆ ಹರಿಪ್ರಸಾದ್ ಮತ್ತು ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಚಿವ ಕೃಷ್ಣ ಭೈರೇಗೌಡ ಹೀನಾಯವಾಗಿ ಸೋಲನನುಭವಿಸಿದ್ದಾರೆ. ಮೈಸೂರು-ಕೊಡಗು ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿಜಯ್‍ಶಂಕರ್ ಕೂಡ ಬಿಜೆಪಿಯ ಪ್ರತಾಪ್ ಸಿಂಹ ಮುಂದೆ ಮಂಡಿಯೂರಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ತವರಲ್ಲೇ ಕಾಂಗ್ರೆಸ್‍ಗೆ ಭಾರೀ ಮುಖಭಂಗವಾಗಿದೆ.

ಖರ್ಗೆಗೆ ಖೆಡ್ಡಾ: ಕಳೆದ ಒಂದು ವರ್ಷಗಳ ಹಿಂದೆಯೇ ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಕಲಬುರಗಿಯಲ್ಲಿ ಸೋಲಿಸಲು ಬಿಜೆಪಿ ವರ್ಕೌಟ್ ಮಾಡಿದ್ದು ಅದರಂತೆ ಖರ್ಗೆ ವಿರುದ್ಧ ಬಿಜೆಪಿ ಅಭ್ಯರ್ಥಿ ಉಮೇಶ್ ಜಾದವ್ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಅಂದುಕೊಂಡಂತೆ ಬಿಜೆಪಿ ಪ್ರಯತ್ನ ಸಫಲವಾಗಿದ್ದು ಉಮೇಶ್ ಜಾದವ್ ವಿರುದ್ಧ ಮಲ್ಲಿಕಾರ್ಜುನ್ ಖರ್ಗೆ ಸೋತಿದ್ದಾರೆ. ಒಂದೇ ಒಂದು ಸುತ್ತಿನಲ್ಲೂ ಮಲ್ಲಿಕಾರ್ಜುನ್ ಖರ್ಗೆ ಅವರು ಮುನ್ನಡೆ ಪಡೆಯಲು ಸಾಧ್ಯವಾಗಿರಲಿಲ್ಲ. ಒಂದು ವರ್ಷ ಹಿಂದೆಯೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಬಿಜೆಪಿ ಪಣ ತೊಟ್ಟಿತ್ತು. ಅದರಂತೆ ಕಾಂಗ್ರೆಸ್ ಶಾಸಕ ಉಮೇಶ್ ಜಾಧÀವ್ ಅವರಿಗೆ ಗಾಳ ಹಾಕಿ ಬಿಜೆಪಿಗೆ ಸೇರುವಂತೆ ಮಾಡಿದ್ದರು. ಇದೇ ಖರ್ಗೆಯನ್ನು ಸೋಲಿಸಲು ಪ್ರಮುಖ ಕಾರಣವಾಗಿದೆ.

Translate »