ಜನತಾ ಜನಾರ್ದನರ ವಿಜಯ: ಮೋದಿ
ಮೈಸೂರು

ಜನತಾ ಜನಾರ್ದನರ ವಿಜಯ: ಮೋದಿ

May 24, 2019

ನವದೆಹಲಿ: ಪ್ರಜಾಪ್ರಭುತ್ವದ ಈ ಹಬ್ಬ ಭಾರತ ಕ್ಕಷ್ಟೇ ಅಲ್ಲ, ಇಡೀ ವಿಶ್ವಕ್ಕೇ ಉತ್ತಮ ಮಾದರಿ. ಇಂಥದೊಂದು ಜನಸಮುದಾಯದ ಹಬ್ಬವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಜನತಾ ಜನಾರ್ದನರಿಗೆ ನಮೋ ನಮಃ. ಇದು ನಿಜವಾಗಿ ಜನತಾ ಜನಾರ್ದನರ ವಿಜಯ, ಇದು ಲೋಕತಂತ್ರದ ಜಯ…

ಅಭೂತಪೂರ್ವ ಗೆಲುವಿನಿಂದ ಹರ್ಷಚಿತ್ತರಾಗಿದ್ದ ಪ್ರಧಾನಿ ನರೇಂದ್ರ ಮೋದಿ ಪಕ್ಷದ ಹಾಗೂ ಎನ್‍ಡಿಎ ಮೈತ್ರಿಕೂಟದ ಗೆಲುವನ್ನು ಹೀಗೆ ಬಹಳ ವೈಶಿಷ್ಟ್ಯಪೂರ್ಣವಾಗಿ ಬಣ್ಣಿಸಿದರು. ನಮ್ಮ ಈ ವಿಜಯೋತ್ಸವದಲ್ಲಿ ಭಾಗಿಯಾಗಲೆಂದೇ ವರುಣ ಮಳೆ ಸುರಿಸುತ್ತಿದ್ದಾನೆ ಎಂದರು. ಲೋಕಸಭಾ ಚುನಾವಣೆಯ ವಿಜಯೋತ್ಸವವನ್ನು ಗುರುವಾರ ಸಂಜೆ ಹೊಸದಿಲ್ಲಿಯಲ್ಲಿನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಆಚರಿಸುವಾಗ ಕಾರ್ಯಕರ್ತರನ್ನು ಹುರಿದುಂಬಿಸುತ್ತಾ ಮೋದಿ ಮನ ಬಿಚ್ಚಿ ಮಾತನಾಡಿದರು. ಬಿಜೆಪಿಯ ಕೋಟಿ ಕೋಟಿ ಕಾರ್ಯಕರ್ತರ ಮನದಲ್ಲಿರುವುದು ಕೇವಲ ಭಾರತ ಮಾತೆ. ಇದು ಮೆಚ್ಚುಗೆ ವಿಷಯ. ಇದುವೇ ಬಿಜೆಪಿ ಪಾಲಿನ ದೊಡ್ಡ ಅದೃಷ್ಟ ಎಂದು ಕಾರ್ಯಕರ್ತರನ್ನು ಮೋದಿ ಕೊಂಡಾಡಿದರು.

3 ದಶಕಗಳ ಹಿಂದೆ ಲೋಕಸಭೆಯಲ್ಲಿ ನಮ್ಮ ಪಕ್ಷದ ಶಕ್ತಿ ಕೇವಲ 2 ಸ್ಥಾನವಾಗಿತ್ತು. ಈಗ 3 ಶತಕ ಬಾರಿಸಿದೆ. ನಾವು ಸತತ 2ನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದೇವೆ. 2 ಸ್ಥಾನ ಇದ್ದಾಗ ನಿರಾಶೆಗೊಂಡಿರಲಿಲ್ಲ. 2ನೇ ಬಾರಿ ಅಧಿಕಾರಕ್ಕೆ ಬಂದಿದ್ದರೂ ನಮ್ಮ ಆಶಯ, ವಿನಯ, ನಿಲುವು, ಧೋರಣೆ, ಸಿದ್ಧಾಂತ ಯಾವುದನ್ನೂ ನಾವು ಮರೆತಿಲ್ಲ, ಮರೆಯುವುದೂ ಇಲ್ಲ ಎಂದು ಮೋದಿ ಘೋಷಿಸಿದರು. ಅದರ ಬೆನ್ನಲ್ಲೇ ಕಾರ್ಯಕರ್ತರೆಡೆಯಿಂದ ಮೋದಿ… ಮೋದಿ… ಮೋದಿ… ಘೋಷಣೆ ಮೊಳಗಿತು.

`ನಾನು ಕೆಲಸಗಳೆಲ್ಲವ ಅಭಿವೃದ್ಧಿಗಾಗಿಯೇ ಇರುತ್ತವೆ. ಜನರು ನಮ್ಮ ಮೇಲಿಟ್ಟಿರುವ ವಿಶ್ವಾಸವನ್ನು ಎಂದಿಗೂ ನಾನು ಮರೆಯುವುದಿಲ್ಲ. ಜನರ ಸೇವೆಗಾಗಿಯೇ ನನ್ನ ಜೀವನ ಮುಡಿಪು’ ಎಂದು ವಾಗ್ದಾನ ಮಾಡಿದರು.

ದೇಶದ ಚುನಾವಣಾ ಇತಿಹಾಸದಲ್ಲಿಯೇ ಈ ಬಾರಿ ಅತ್ಯಧಿಕ ಮತದಾನವಾಗಿದೆ. 35ರಿಂದ 40 ಡಿ.ಸೆ. ತಾಪಮಾನವಿದ್ದರೂ ಜನರು ಮತದಾನ ಮಾಡಿದ್ದಾರೆ. ದೇಶದ 130 ಕೋಟಿ ಜನರಿಗೂ ಶಿರಬಾಗಿ ನಮಿಸುವೆ ಎಂದರು.

Translate »