ಮೈಸೂರು-ಕೊಡಗಿನಿಂದ ಪ್ರತಾಪ್ ಸಿಂಹ, ಮಂಡ್ಯದಿಂದ ಸುಮಲತಾ ಅಂಬರೀಶ್, ಚಾ.ನಗರದಿಂದ ಶ್ರೀನಿವಾಸಪ್ರಸಾದ್, ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಜಯಭೇರಿ
ಮೈಸೂರು

ಮೈಸೂರು-ಕೊಡಗಿನಿಂದ ಪ್ರತಾಪ್ ಸಿಂಹ, ಮಂಡ್ಯದಿಂದ ಸುಮಲತಾ ಅಂಬರೀಶ್, ಚಾ.ನಗರದಿಂದ ಶ್ರೀನಿವಾಸಪ್ರಸಾದ್, ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಜಯಭೇರಿ

May 24, 2019

ಮೈಸೂರು: ಮೈಸೂರು-ಕೊಡಗು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಕ್ಷೇತ್ರಗಳ ಪೈಕಿ ಬಿಜೆಪಿ 2 ಸ್ಥಾನಗಳನ್ನು ಪಡೆದಿದ್ದರೆ, ಜೆಡಿಎಸ್ 1 ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಮತ್ತೊಂದು ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲುವಿನ ನಗೆ ಬೀರಿದ್ದಾರೆ.

ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಂಸದ ಪ್ರತಾಪ್ ಸಿಂಹ ಭಾರೀ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಪುನರಾಯ್ಕೆ ಆಗಿದ್ದಾರೆ. ಈ ಕ್ಷೇತ್ರದಲ್ಲಿ ಚಲಾವಣೆ ಯಾದ 13,18,103 ಮತಗಳ ಪೈಕಿ ಪ್ರತಾಪ್ ಸಿಂಹ 6,88,974 ಮತಗಳನ್ನು ಪಡೆಯುವ ಮೂಲಕ ತಮ್ಮ ಪ್ರತಿಸ್ಪರ್ಧಿ ಮಾಜಿ ಸಂಸದ ಕಾಂಗ್ರೆಸ್ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಪಡೆದಿದ್ದ 5,50,327 ಮತಗಳಿಗಿಂತ 1,38,647 ಮತಗಳನ್ನು ಹೆಚ್ಚಾಗಿ ಪಡೆದು ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 22 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಪ್ರತಿಷ್ಠಿತ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಪತ್ನಿ ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿ ಸಿದ್ದು, ಅವರು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪುತ್ರ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು 1,25,876 ಮತಗಳ ಭಾರೀ ಅಂತರದಿಂದ ಮಣಿಸಿ ಜಯಭೇರಿ ಬಾರಿಸಿದ್ದಾರೆ. ಚಲಾ ವಣೆಯಾದ ಒಟ್ಟು 13,79,622 ಮತಗಳ ಪೈಕಿ ಸುಮಲತಾ 7,03,660 ಮತಗಳನ್ನು ಪಡೆದಿದ್ದರೆ, ಪರಾಜಿತ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ 5,77,784 ಮತ ಪಡೆದಿ ದ್ದರು. ಸುಮಲತಾ ಅವರು ಸಂಸತ್ ಪ್ರವೇಶಿ ಸಿದ ಪ್ರಪ್ರಥಮ ಪಕ್ಷೇತರ ಮಹಿಳಾ ಅಭ್ಯರ್ಥಿ ಎಂಬ ದಾಖಲೆ ನಿರ್ಮಿಸಿದ್ದಾರೆ. ಈ ಕ್ಷೇತ್ರ ದಲ್ಲಿ ಒಟ್ಟು 22 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮಾಜಿ ಸಂಸದ, ಹಿರಿಯ ರಾಜಕೀಯ ಮುತ್ಸದ್ಧಿ ವಿ.ಶ್ರೀನಿವಾಸ ಪ್ರಸಾದ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಸಂಸದ ಆರ್.ಧ್ರುವ ನಾರಾಯಣ್ ವಿರುದ್ಧ 1,347 ಮತಗಳ ಅಂತರ ದಲ್ಲಿ ರೋಚಕ ಜಯ ಗಳಿಸಿದ್ದಾರೆ. ಈ ಕ್ಷೇತ್ರ ದಲ್ಲಿ ಚಲಾವಣೆಯಾದ ಒಟ್ಟು 12,55,972 ಮತಗಳ ಪೈಕಿ ವಿ.ಶ್ರೀನಿವಾಸಪ್ರಸಾದ್ ಅವರು 5,61,695 ಮತ ಪಡೆದರೆ, ಸಂಸದ ಧ್ರುವನಾರಾಯಣ್ 5,60,348 ಮತ ಪಡೆದರು. ಮತ ಎಣಿಕೆ ಪ್ರಾರಂಭವಾಗಿ ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಧ್ರುವನಾರಾಯಣ್ ಅವರು ಕೊನೆಯ ನಾಲ್ಕು ಸುತ್ತುಗಳಲ್ಲಿ ಹಿನ್ನಡೆ ಅನುಭವಿಸಿ ಅಂತಿಮವಾಗಿ ಪರಾಭವ ಗೊಂಡರು. ಈ ಕ್ಷೇತ್ರದಲ್ಲಿ ಒಟ್ಟು 10 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸ್ಪರ್ಧಿಸುತ್ತಿದ್ದ, ಜೆಡಿಎಸ್‍ನ ಭದ್ರಕೋಟೆಯಾದ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸಿದ್ದ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಭರ್ಜರಿ ಜಯ ಗಳಿಸಿದ್ದಾರೆ. ಚುನಾವಣೆ ಘೋಷಣೆಯಾದ ನಂತರ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಾಜಿ ಸಚಿವ ಎ.ಮಂಜು ಅವರನ್ನು 1,41,324 ಮತಗಳ ಅಂತರದಲ್ಲಿ ಮಣಿಸಿ ಪ್ರಜ್ವಲ್ ರೇವಣ್ಣ ಜಯಭೇರಿ ಬಾರಿಸಿದರು. ಈ ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು 12,74,438 ಮತಗಳ ಪೈಕಿ ಪ್ರಜ್ವಲ್ ರೇವಣ್ಣ 6,76,606 ಮತ ಪಡೆದರೆ, ಎ.ಮಂಜು 5,35,282 ಮತ ಪಡೆದರು. ಈ ಕ್ಷೇತ್ರದಲ್ಲಿ ಒಟ್ಟು 6 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

Translate »