ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ನಾಯಕರ ಹಿತರಕ್ಷಣಾ ವೇದಿಕೆ ಆಗ್ರಹ
ಮೈಸೂರು

ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ನಾಯಕರ ಹಿತರಕ್ಷಣಾ ವೇದಿಕೆ ಆಗ್ರಹ

June 28, 2018

ಮೈಸೂರು: ಪರಿಶಿಷ್ಟ ಪಂಗಡಕ್ಕೆ ಸರ್ಕಾರದ ಸವಲತ್ತುಗಳನ್ನು ಸಮರ್ಪಕವಾಗಿ ದೊರಕಿಸಿಕೊಡುವ ನಿಟ್ಟಿನಲ್ಲಿ ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡಬೇಕೆಂದು ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ರಾಜ್ಯಾಧ್ಯಕ್ಷ ದ್ಯಾವಪ್ಪನಾಯಕ, ರಾಜ್ಯದಲ್ಲಿ ಸುಮಾರು 52 ಜಾತಿಗಳು ಪರಿಶಿಷ್ಟ ಪಂಗಡ ವ್ಯಾಪ್ತಿಗೆ ಬರಲಿದ್ದು, 60ರಿಂದ 65 ಲಕ್ಷ ಜನಸಂಖ್ಯೆ ಹೊಂದಿದೆ. ಇದರಲ್ಲಿ ಶೇ.90ರಷ್ಟು ಜನಸಂಖ್ಯೆ ಗ್ರಾಮೀಣ ಮತ್ತು ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಿದೆ. ಈ ವರ್ಗಕ್ಕೆ ಮೂಲಸೌಲಭ್ಯ ಹಾಗೂ ಸರ್ಕಾರದ ಯೋಜನೆಗಳ ಪ್ರಯೋಜನ ತಲುಪಿಸುವ ನಿಟ್ಟಿನಲ್ಲಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡುವ ಅಗತ್ಯವಿದೆ ಎಂದು ತಿಳಿಸಿದರು.

ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಸುಮಾರು 3 ವರ್ಷಗಳಿಂದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ರೇವಣ್ಣಪ್ಪನವರು ಟಿಎಸ್‍ಪಿ ಯೋಜನೆಯನ್ನು ಸಮಗ್ರವಾಗಿ ಜಾರಿಗೆ ತರುವಲ್ಲಿ ವಿಫಲವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇವರನ್ನು ಬದಲಾಯಿಸಿ ಆ ಹುದ್ದೆಗೆ ದಕ್ಷ ಐಎಎಸ್ ಅಥವಾ ಕೆಎಎಸ್ ದರ್ಜೆಯ ಹಿರಿಯ ಅಧಿಕಾರಿಯನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

ಶೀಘ್ರವೇ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ ಸಚಿವರನ್ನು ನೇಮಕ ಮಾಡುವ ಮೂಲಕ ಸಮುದಾಯಕ್ಕೆ ಸೌಲಭ್ಯಗಳನ್ನು ದೊರಕಿಸಿಕೊಡಬೇಕೆಂದು ಮನವಿ ಮಾಡಿದರು. ಶ್ರೀರಾಂಪುರ ಗ್ರಾಪಂ ಅಧ್ಯಕ್ಷೆ ಚೂಡಾಮಣ , ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಜವರಪ್ಪ ರಮ್ಮನಹಳ್ಳಿ, ಶ್ರೀನಿವಾಸಮೂರ್ತಿ, ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಹುಣಸೂರು, ಸಂಘಟನಾ ಕಾರ್ಯದರ್ಶಿ ಕೆ.ಎಸ್.ಗಣೇಶ್ ಗೋಷ್ಠಿಯಲ್ಲಿದ್ದರು.

Translate »