ಕಾಡಾನೆ ಹಾವಳಿ ನಿಯಂತ್ರಿಸಲು ಆಗ್ರಹ
ಹಾಸನ

ಕಾಡಾನೆ ಹಾವಳಿ ನಿಯಂತ್ರಿಸಲು ಆಗ್ರಹ

January 24, 2019

ಹಾಸನ: ರೈತರ ಬೆಳೆ ಹಾನಿಗೆ ಕಾರಣವಾಗಿರುವ ಕಾಡಾನೆ ಹಾವಳಿ ನಿಯಂತ್ರಿ ಸುವಂತೆ ಆಗ್ರಹಿಸಿ ಕರ್ನಾಟಕ ವೀರ ಸಮರ ಸೇನೆಯಿಂದ ಜಿಲ್ಲಾಡಳಿತ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ನಡೆಸಿದ ಅವರು, ಎನ್.ಆರ್. ವೃತ್ತ, ಬಿ.ಎಂ. ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದರು. ಜಿಲ್ಲೆಯ ಆಲೂರು ತಾಲೂಕು ಸೇರಿದಂತೆ ಇತರೆ ಪ್ರದೇಶಗಳಲ್ಲಿ ಕಾಡಾನೆ ಹಾವಳಿ ದಿನೇದಿನೆ ಹೆಚ್ಚಾಗಿ ಕಾಫಿ ಬೆಳೆಗಾರರು, ಕಬ್ಬು, ಮೆಣಸು ಬೆಳೆದ ರೈತರು ಬೆಳೆ ಹಾನಿ ಸಂಭವಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

ಗ್ರಾಮಾಂತರ ಪ್ರದೇಶಗಳಿಂದ ವಿದ್ಯಾಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳು ಕಾಡಾನೆ ಸಮಸ್ಯೆಯಿಂದ ಭಯಭೀತರಾಗಿದ್ದಾರೆ. ಕೂಡಲೇ ಕಾಡಾನೆ ಹಾವಳಿ ತಪ್ಪಿಸಬೇಕು ಎಂದು ಆಗ್ರಹಿಸಿದರು. ಅರಣ್ಯ ಸಚಿವ ಆರ್.ವಿ. ದೇಶಪಾಂಡೆರವರಿಗೆ ಇದೇ ವೇಳೆ ಧಿಕ್ಕಾರ ಕೂಗಿದರು. ಕೂಡಲೇ ನಿಗದಿತ ಸುರಕ್ಷಾ ಸ್ಥಳದಲ್ಲಿ ಆನೆ ಕಾರಿಡಾರ್ ಯೋಜನೆ ಕೈಗೆತ್ತಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ವೀರ ಸಮರಸೇನೆ ಜಿಲ್ಲಾಧ್ಯಕ್ಷ ಭರತ್‍ಗೌಡ, ಜಿಲ್ಲಾ ಉಪಾಧ್ಯಕ್ಷ ರತೀಶ್‍ಗೌಡ, ತಾಲೂಕು ಅಧ್ಯಕ್ಷ ಹರೀಶ್, ಪೃಥ್ವಿರಾಜ್, ನಗರಾಧ್ಯಕ್ಷ ಮನು, ಯುವ ಘಟಕದ ಅಧ್ಯಕ್ಷ ದೀಪ್, ಯಾದವ್, ಕಾರ್ಯದರ್ಶಿ ಚೇತನ್, ಉಪ ಕಾರ್ಯದರ್ಶಿ ಪ್ರಶಾಂತ್, ಅನೀಲ್, ಮುರುಳಿ, ಪೂರ್ಣೇಶ್, ಮನು, ಮೋಹನ್ ಇತರರು ಭಾಗವಹಿಸಿದ್ದರು.

Translate »