ಧಾರಾಕಾರ ಮಳೆ: ಅಪಾಯದ ಅಂಚಿನಲ್ಲಿ ತಂಬಾಕು ಬೆಳೆ
ಮೈಸೂರು

ಧಾರಾಕಾರ ಮಳೆ: ಅಪಾಯದ ಅಂಚಿನಲ್ಲಿ ತಂಬಾಕು ಬೆಳೆ

May 28, 2018

ಬೆಟ್ಟದಪುರ: ಬೆಟ್ಟದಪುರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ತಂಬಾಕು ಹೊಲಗಳು ಗದ್ದೆಗಳಾಗಿ ಮಾರ್ಪಾಡಾಗಿದ್ದು, ರೈತರು ಆತಂಕ ಕ್ಕೊಳಗಾಗಿದ್ದಾರೆ. ಈಗಾಗಲೇ ರೈತರು ತಂಬಾಕು ಮಂಡಳಿಯಿಂದ ಲಕ್ಷಕ್ಕೂ ಅಧಿಕ ಬೆಲೆ ಬಾಳುವ ರಸ ಗೊಬ್ಬರ ವನ್ನು ಸಾಲದಲ್ಲಿ ತಂದು ತಂಬಾಕು ಬೆಳೆಗೆ ಹಾಕಿದ್ದು, ಇದೀಗ ಒಂದು ವಾರದಿಂದಲೂ ಬಿಡುವಿಲ್ಲದೆ ಸುರಿಯು ತ್ತಿರುವ ಮಳೆ ರೈತರ ನಿದ್ದೆÉಗೆಡಿಸಿದೆ. ಮುಂಗಾರು ಮಳೆ ಬೀಳುವ ಸಂದರ್ಭ ಇದಾಗಿದ್ದು, ಇದೇ ರೀತಿ ಮಳೆ ಮುಂದುವರೆದರೆ ಬೆಳೆ ನೆಲಕಚ್ಚುವ ಸಾಧ್ಯತೆ ಹೆಚ್ಚಾಗಿದ್ದು ರೈತರು ಕಂಗಾಲಾಗಿದ್ದಾರೆ.

ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಒಂದು ತಿಂಗಳಿನಿಂದಲೂ ತಂಬಾಕು ಸಸಿ ಮಂಡಿ ಮತ್ತು ಉಳುಮೆ ಮಾಡಿ ಹದವಾಗಿದ್ದ ಭೂಮಿಗೆ ರೈತರು ಸಂತೋಷದಿಂದ ತಂಬಾಕು ಸಸಿ ನಾಟಿ ಮಾಡಿ, ಗೊಬ್ಬರ ವಿತರಿಸಿದ್ದರು. ಪಿರಿಯಾಪಟ್ಟಣ ತಾಲ್ಲೂಕಿನ ಹಲವಾರು ಬ್ಯಾಂಕುಗಳಲ್ಲಿ ರೈತರು ತಂಬಾಕಿಗಾಗಿ ಮಾಡಿರುವ ಸಾಲವನ್ನು ಹೇಗೆ ತೀರಿಸುವುದು ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ.

ತಂಬಾಕು ಮಂಡಳಿ ವಿರುದ್ಧ ಆಕ್ರೋಶ: ತಂಬಾಕು ಮಂಡಳಿ ರೈತರಿಗೆ ಗೊಬ್ಬರ ವನ್ನು ವಿತರಿಸಲು ಹಲವಾರು ಬಗೆ ಯಲ್ಲಿ ತೊಂದರೆಯನ್ನು ನೀಡುತ್ತಿದೆ. ಗೊಬ್ಬರ ನೀಡಲು ಬಡ ರೈತರನ್ನು ತಮ್ಮ ಬ್ಯಾರನ್‍ಗಳು ಸರಿ ಇಲ್ಲವೋ ಎಂಬ ಪರೀಶೀಲನೆ ನೆಪದಲ್ಲಿ ಸಾವಿ ರಾರು ರೂಪಾಯಿಗಳನ್ನು ರೈತರಿಂದ ವಸೂಲಿ ಮಾಡುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದ್ದು, ಆದರೆ ಪ್ರಭಾವಿಗಳ ಹತ್ತಿರವಿರುವ ಹತ್ತಾರು ಬ್ಯಾರನ್ ಲೈಸೆನ್ಸ್ ಗಳನ್ನು ಯಾವುದೇ ಪರಿಶೀಲನೆ ನಡೆಸದೆ ಗೊಬ್ಬರ ವಿತರಿಸಲಾಗಿದೆ. ಅಲ್ಲದೇ ಹಲವಾರು ತಂಬಾಕು ಲೈಸೆನ್ಸ್‍ದಾರರು ತಮ್ಮ ಬ್ಯಾರನ್‍ಗಳನ್ನೇ ಹೊಂದಿಲ್ಲ ಆದರೆ ಒಂದು ಎರಡು ಬ್ಯಾರನ್ ಹೊಂದಿರುವ ಬಡ ರೈತರನ್ನು ಸುಲಿಗೆ ಮಾಡುತ್ತಿರುವ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನೊಂದ ರೈತರು ಆಗ್ರಹಿಸಿದ್ದಾರೆ.

Translate »