ಅತಿವೃಷ್ಠಿ ಹಾನಿ ಸ್ಪಷ್ಟ ವರದಿ ನೀಡಲು ಜಿಲ್ಲಾಧಿಕಾರಿ ಸೂಚನೆ
ಹಾಸನ

ಅತಿವೃಷ್ಠಿ ಹಾನಿ ಸ್ಪಷ್ಟ ವರದಿ ನೀಡಲು ಜಿಲ್ಲಾಧಿಕಾರಿ ಸೂಚನೆ

July 21, 2018

ಹಾಸನ: ಜಿಲ್ಲೆಯಲ್ಲಿ ಅತಿವೃಷ್ಠಿ ಯಿಂದ ಉಂಟಾಗಿರುವ ಜನ ಜಾನುವಾರು ಹಾಗೂ ವೈಯಕ್ತಿಕ ಮತ್ತು ಸಾರ್ವಜನಿಕ ಆಸ್ತಿಗಳ ಹಾನಿಗೆ ಪ್ರಕೃತಿ ವಿಕೋಪ ನಿಧಿ ಯಿಂದ ಪರಿಹಾರ ನೀಡಬಹುದಾಗಿದ್ದು, ಎಲ್ಲವನ್ನು ಸ್ಪಷ್ಟವಾಗಿ ಅಂದಾಜಿಸಿ ಕೂಡಲೇ ವರದಿ ನೀಡುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ತಮ್ಮ ಕಚೇರಿ ಸಭಾಂಗಣದಲ್ಲಿಂದು ತಹಶೀಲ್ದಾರು ಹಾಗೂ ಪಪಂ ಮುಖ್ಯಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿದ ಅವರು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮಲೆನಾಡು ಸೇರಿದಂತೆ ಜಿಲ್ಲೆಯ ವಿವಿಧೆಡೆ ಹಲವು ರೀತಿಯ ನಷ್ಟ ಸಂಭವಿಸಿದೆ. ಅದನ್ನು ಸಮರ್ಪಕವಾಗಿ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಒದಗಿಸಿ ಎಂದು ಹೇಳಿದರು.

ಪ್ರಕೃತಿ ವಿಕೋಪ ನಿಧಿಯಡಿ ಮಳೆ ಹಾನಿ ಯಿಂದ ಸಂಭವಿಸುವ ಜನ-ಜಾನು ವಾರು ಪ್ರಾಣ ಹಾನಿ, ಕಚ್ಚಾ-ಪಕ್ಕಾ ಮನೆಗಳ ಭಾಗಶಃ ಅಥವಾ ಪೂರ್ಣ ಹಾನಿ, ಬೆಳೆ ಹಾನಿಗೆ ಪರಿಹಾರ ನೀಡಲು ಅವಕಾಶವಿದೆ. ಹಾಗಾಗಿ ಎಲ್ಲಾ ತಾಲೂಕುಗಳಲ್ಲಿ ಹಾನಿ ಯನ್ನು ನಿಖರವಾಗಿ ದಾಖಲಿಸಿ ಆರ್ಥಿಕ ನೆರವು ಬಿಡುಗಡೆ ಮಾಡಿ ಎಂದು ರೋಹಿಣಿ ಸಿಂಧೂರಿ ಹೇಳಿದರು.

ಹಾಸನ ಹಾಗೂ ಸಕಲೇಶಪುರ ಉಪ ವಿಭಾಗಾಧಿಕಾರಿಗಳು ತಮ್ಮ ವ್ಯಾಪ್ತಿಯ ತಾಲೂಕುಗಳ ತಹಶೀಲ್ದಾರರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಕೃಷಿ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ವರದಿ ಪಡೆದು ನಷ್ಟ ಅಂದಾಜಿಸಿ ಪರಿಹಾರ ದೊರಕಿಸಲು ಕ್ರಮ ವಹಿಸುವಂತೆ ತಿಳಿಸಿದರಲ್ಲದೆ, ಸರ್ಕಾರಿ ಶಾಲೆ, ಅಂಗನವಾಡಿ, ಆಸ್ಪತ್ರೆಗಳ ಕಟ್ಟಡಕ್ಕೆ ಹಾನಿಯಾಗಿದ್ದರೆ ದುರಸ್ತಿಗೆ ಅನುದಾನ ಬಿಡುಗಡೆ ಮಾಡಬಹುದಾಗಿದೆ. ಪ್ರತಿ ಕಿಲೋ ಮೀಟರ್ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಲಕ್ಷ ರೂ.ವರೆಗೆ ವೆಚ್ಚ ಮಾಡ ಬಹುದಾಗಿದೆ ಎಂದು ಅವರು ಅಧಿಕಾರಿ ಗಳಿಗೆ ಡಿಸಿ ನಿರ್ದೇಶನ ನೀಡಿದರು.

ಮಳೆ ಹಾಗೂ ಪ್ರವಾಹದಿಂದ ರೈತರ ಕೃಷಿ ಜಮೀನಿನಲ್ಲಿ ಹೂಳು ಅಥವಾ ಮಣ್ಣು ತುಂಬಿದಲ್ಲಿ ಅದನ್ನು ತೆರವು ಗೊಳಿಸಲು ಪ್ರತಿ ಹೆಕ್ಟೇರ್‍ಗೆ 12,200 ರೂ., ಕೃಷಿ ಭೂಮಿ ತೀವ್ರ ಹಾನಿಗೀಡಾಗಿದ್ದಲ್ಲಿ ಸಣ್ಣ ಹಾಗೂ ಮಾಧ್ಯಮ ಪ್ರಮಾಣದ ರೈತರಿಗೆ ಪ್ರತಿ ಹೆಕ್ಟೇರ್‍ಗೆ 37,500 ರೂ.ವರೆಗೆ ಪರಿ ಹಾರ ನೀಡಲು ಅವಕಾಶವಿದೆ. ಗುಡ್ಡಗಾಡು ಪ್ರದೇಶ ಸಮೀಪದ ಮನೆಗಳು ಸಂಪೂರ್ಣ ಹಾನಿಗೀಡಾಗಿದಲ್ಲಿ ಲಕ್ಷ ರೂ.ವರೆಗೆ ಪರಿಹಾರ ನೀಡಬಹುದು. ಇತರ ಸಮತಟ್ಟು ಪ್ರದೇಶಗಳಲ್ಲಿ ನಾಶಗೊಂಡ ಅಥವಾ ಸಂಪೂರ್ಣ ಹಾನಿಗೀಡಾದ ಪ್ರತಿ ಮನೆಗೆ 95 ಸಾವಿರ ರೂ.ಗಳವರೆಗೆ ಪರಿಹಾರ ನೀಡಬಹುದಾಗಿದೆ. ಶೇ.15ಕ್ಕಿಂತ ಕಡಿಮೆ ಹಾನಿಗೀಡಾಗಿರುವ ಪಕ್ಕಾ ಮನೆಗಳಿಗೆ ಪ್ರತಿ ಮನೆಗೆ 5,200 ರೂ.ಹಾಗೂ ಕಚ್ಚಾ ಮನೆಗೆ 3,200 ರೂ. ಮತ್ತು ಹಾನಿಗೀಡಾದ ಅಥವಾ ನಾಶವಾದ ಗುಡಿಸಲುಗಳಿಗೆ ಸಾವಿರ ಪರಿ ಹಾರ ಒದಗಿಸಬಹುದು. ಹಾನಿಗೀಡಾದ ದನದಕೊಟ್ಟಿಗೆಗೆ 2, 100 ರೂ. ಪರಿಹಾರ ಒದಗಿಸಬಹುದಾಗಿದ್ದು, ಎಲ್ಲಾ ತಾಲೂಕುಗಳಲ್ಲಿ ತೊಂದರೆಗೆ ಒಳಗಾದವರ ಬಗ್ಗೆ ಸಮೀಕ್ಷೆ ನಡೆಸಿ ಪರಿಹಾರ ಕ್ರಮಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಇದೇ ರೀತಿ ಕೃಷಿ ಹಾಗೂ ತೋಟ ಗಾರಿಕಾ ಬೆಳೆಗಳ ಹಾನಿಗೆ ಪ್ರತಿ ಹೆಕ್ಟೇರಿಗೆ 6,800 ರೂ. ಪರಿಹಾರ ವಿತರಿಸಬಹುದು. ಹಾಗೆಯೇ ರೇಷ್ಮೆ ಮತ್ತು ಬಹುವಾರ್ಷಿಕ ಬೆಳೆಗಳ ಹಾನಿಗೂ ಪರಿಹಾರ ನೀಡಲು ಅವಕಾಶ ಇದೆ. ಹಸು ಎಮ್ಮೆಗಳು ಪ್ರವಾಹದಲ್ಲಿ ಕೊಚ್ಚಿ ಹೋದರೆ ಅಥವಾ ಅತಿ ವೃಷ್ಠಿಯಿಂದ ಸಾವಿಗೀಡಾದಲ್ಲಿ ಪ್ರತಿ 30,000 ರೂ. ಹಾಗೂ ಕುರಿ ಮೇಕೆಗಳು ಸಾವಿಗೀಡಾದಲ್ಲಿ ಪ್ರತಿಯೊಂದಕ್ಕೆ 3 ಸಾವಿರ ರೂ. ಪರಿಹಾರ ನೀಡಬಹು ದಾಗಿದೆ. ಪ್ರಕೃತಿ ವಿಕೋಪ ಪರಿಹಾರ ವಿತ ರಣೆ ಕುರಿತು ಸರ್ಕಾರ ಹೊರಡಿಸಿರುವ ಸುತ್ತೋಲೆ ಪರಿಶೀಲಿಸಿ, ಅದಕ್ಕನುಗುಣವಾಗಿ ಸೂಕ್ತ ಕ್ರಮ ವಹಿಸುವಂತೆ ರೋಹಿಣಿ ಸಿಂಧೂರಿ ತಿಳಿಸಿದರು.

ಪ್ರೋಬೆಷನರಿ ಐಎಎಸ್ ಅಧಿಕಾರಿ ಎಂ.ಪ್ರಿಯಾಂಕ, ಉಪವಿಭಾಗಾಧಿಕಾರಿ ಡಾ.ನಾಗರಾಜ್, ಲಕ್ಷ್ಮಿಕಾಂತ ರೆಡ್ಡಿ, ಜಂಟಿ ಕೃಷಿ ನಿರ್ದೇಶಕ ಮಧುಸೂದನ್, ತೋಟಗಾರಿಕೆ ಉಪ ನಿರ್ದೇಶಕ ಡಾ. ಸಂಜಯ್ ಭೂ ದಾಖಲೆಗಳು ಅಧಿಕಾರಿಗಳ ಉಪನಿರ್ದೇಶಕ ಕೃಷ್ಣ ಕುಮಾರ್ ಹಾಗೂ ವಿವಿಧ ಇಲಾಖೆ ಅಧಿ ಕಾರಿಗಳು ಸಭೆಯಲ್ಲಿದ್ದರು.

Translate »