ಹಾಸನ-ಬೇಲೂರು-ಚಿಕ್ಕಮಗಳೂರು-ಶೃಂಗೇರಿ ರೈಲ್ವೆ ಕಾಮಗಾರಿ ಅನುಷ್ಠಾನ
ಹಾಸನ

ಹಾಸನ-ಬೇಲೂರು-ಚಿಕ್ಕಮಗಳೂರು-ಶೃಂಗೇರಿ ರೈಲ್ವೆ ಕಾಮಗಾರಿ ಅನುಷ್ಠಾನ

July 21, 2018

ಹಾಸನ:  ಹಾಸನ-ಬೇಲೂರು- ಚಿಕ್ಕಮಗಳೂರು-ಶೃಂಗೇರಿ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿಯನ್ನು ಶೇ. 50:50 ಅನುಪಾತದಲ್ಲಿ ಕೇಂದ್ರದ ಸಹಯೋಗದೊಂದಿಗೆ ಕೈಗೆತ್ತಿಕೊಳ್ಳ ಲಾಗುವುದು ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದ್ದಾರೆ.

ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕೇಂದ್ರದ ಅನುದಾನ ಸಹಭಾಗಿತ್ವದಲ್ಲಿ ಹಲವು ಕಾಮ ಗಾರಿಗಳನ್ನು ಕೈಗೊಳ್ಳಲಿದ್ದು, ಹಾಸನ ದಿಂದ ಹೆಚ್ಚು ರೈಲುಗಳ ಸಂಚಾರಕ್ಕೆ ಮನವಿ ಮಾಡಲಾಗಿದೆ. ರೈಲ್ವೆ ಸಚಿವರು ಸಕಾ ರಾತ್ಮಕವಾಗಿ ಸ್ಪಂದಿಸಿದ್ದಾರೆ. ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ 60 ಕೋಟಿ ರೂ.ವೆಚ್ಚದ 6 ಪಥಗಳ ರೈಲ್ವೆ ಮೇಲ್ಸೇತುವೆ ಕಾಮಗಾರಿಕೈಗೊಳ್ಳಲು ಮುಂದಿನ ಕ್ಯಾಬಿನೆಟ್‍ನಲ್ಲಿ ಅನುಮೋದನೆ ದೊರೆಯಲಿದೆ ಎಂದು ಮಾಹಿತಿ ನೀಡಿದರು.

ರೈಲ್ವೆ ಮಾರ್ಗಗಳ ತ್ವರಿತ ಅನುಷ್ಠಾನ ಕ್ಕಾಗಿ ಬೇಲೂರಿನಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿ ನೇಮಿಸಲಾಗುವುದು. ಇದಕ್ಕೆ ಸರ್ಕಾರ ಈಗಾಗಲೇ ಒಪ್ಪಿಗೆ ಸೂಚಿ ಸಿದೆ. ಇದೇ ರೀತಿ ಅಂಕೋಲಾ, ಹುಬ್ಬಳ್ಳಿ ಸೇರಿದಂತೆ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಇತರ ಕೆಲವು ರೈಲ್ವೇ ಯೋಜನೆ ಗಳನ್ನು ರಾಜ್ಯದ ಸಹಭಾಗಿತ್ವದಲ್ಲಿ ಕೈಗೊಳ್ಳಲು ಕೇಂದ್ರ ಸರ್ಕಾರವನ್ನು ಕೋರಲಾಗಿದೆ. ಮೈಸೂರು-ಮಡಿಕೇರಿ-ಮಾಣಿ ರಸ್ತೆ ಸೇರಿ ದಂತೆ ರಾಜ್ಯದಲ್ಲಿ 14 ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಚುರುಕುಗೊಳಿಸಲು ಹಾಗೂ ಇತರೆ ಯೋಜನೆಗಳಿಗೆ ನೆರವು ಒದಗಿಸಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಕೋರಲಾಗಿದ್ದು, ನೆರವು ಒದಗಿ ಸುವುದಾಗಿ ಸಮ್ಮತಿಸಿದ್ದಾರೆ ಎಂದು ಸಚಿವರು ತಿಳಿಸಿದರು.

ಹಾಸನದಲ್ಲಿ ಮೆಗಾ ಡೈರಿ ಸ್ಥಾಪನೆಗೆ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯು 473 ಕೋಟಿ ರೂ.ಗೆ ಪ್ರಸ್ತಾವನೆ ಸಿದ್ಧಪಡಿಸಿದೆ. ಇದೇ ರೀತಿ ರಾಮನಗರ, ಕೋಲಾರ, ಮೈಸೂರು ಚಾಮರಾಜನಗರ ಸೇರಿದಂತೆ 5 ಜಿಲ್ಲೆಗಳಲ್ಲಿ ಡೈರಿ ಅಭಿ ವೃದ್ಧಿಗೆ 900 ಕೋಟಿ ರೂ.ಗಳು ಮಂಜೂ ರಾಗಿದೆ ಎಂದ ಸಚಿವರು, ವಿಮಾನ ನಿಲ್ದಾಣಕ್ಕೆ ಭೂಮಿ ಸ್ವಾಧೀನಪಡಿಸಿಕೊಳ್ಳುವ ಕುರಿತು ಜಿಲ್ಲಾಧಿಕಾರಿ ರೈತರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಿದ್ದಾರೆ ಎಂದು ಸಚಿವ ರೇವಣ್ಣ ಹೇಳಿದರು.

ಸಿಪಿಐ ವರ್ಗಾವಣೆಯಲ್ಲಿ ನನ್ನ ಪಾತ್ರವಿಲ್ಲ: ಚನ್ನರಾಯಪಟ್ಟಣ ಸಿಪಿಐ ಹರೀಶ್ ಬಾಬು ವರ್ಗಾವಣೆಯಲ್ಲಿ ನನ್ನ ಪಾತ್ರ ಇಲ್ಲ. ನನ್ನ ಮಕ್ಕಳು ಯಾವುದೇ ಗಲಾಟೆಯಲ್ಲಿ ಭಾಗವಹಿಸಿಲ್ಲ ಎಂದು ಸಚಿವ ಹೆಚ್.ಡಿ.ರೇವಣ್ಣ ಸಮರ್ಥನೆ ನೀಡಿದರು.

ಚನ್ನರಾಯಪಟ್ಟಣ ಇನ್ಸ್‍ಪೆಕ್ಟರ್ ಹರೀಶ್ ಬಾಬು ವರ್ಗಾವಣೆ ವಿಚಾರದಲ್ಲಿ ನಾನು ಯಾರ ಮೇಲೆಯೂ ನನ್ನ ಪ್ರಭಾವ  ಬಳಸಿಲ್ಲ ಎಂದು ಮಾಧ್ಯಮಗಳ ವಿರುದ್ಧ ಗರಂ ಆದ ಸಚಿವರು, ವಿನಾಕಾರಣ ಮಾಧ್ಯಮಗಳು ನನ್ನ ಮೇಲೆ ಅಪಪ್ರಚಾರ ಮಾಡುತ್ತಿದ್ದೆವೆ. ನಾನು ಯಾರ ಮೇಲೆಯೂ ಒತ್ತಡ ಹೇರಿ ಸಿಪಿಐ ಹರೀಶ್ ಬಾಬು ಅವರನ್ನು ವರ್ಗಾವಣೆ ಮಾಡಿಸಿಲ್ಲ. ನನಗೂ ಅದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್, ಸಿಪಿಐ ಹರೀಶ್ ಬಾಬು ಅವರನ್ನೇ ಕೇಳಿ. ನಾನು ಯಾರಿಗೂ ಒತ್ತಡ ಹೇರಿಲ್ಲ. ಆತ ಚುನಾವಣೆ ವೇಳೆ ನಿಷ್ಪಕ್ಷಪಾತವಾಗಿ ಕೆಲಸ ಮಾಡಿರಲಿಲ್ಲ. ಆತನನ್ನು ಮೇಲಧಿಕಾರಿಗಳು ಸಸ್ಪೆಂಡ್ ಮಾಡಲು ನಿರ್ಧರಿಸಿದ್ದರು. ನಾನೇ ಬೇರೆ ಕಡೆ ಕಳಿಸುವಂತೆ ಹೇಳಿ ಅವರನ್ನು ಸಮಾಧಾನಪಡಿಸಿದ್ದೆ ಎಂದರಲ್ಲದೆ, ಕಳೆದ ಬಾರಿ ವಿಧಾನಸಭಾ ಚುನಾವಣೆ ಹೇಗೆ ನಡೆಯಿತು ಎಂಬುದನ್ನು ತನಿಖೆ ನಡೆಸಲಿ. ನನ್ನ ಮಗ ಸೂರಜ್ ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಿ ಅದನ್ನು ಬಿಟ್ಟು ವಿನಾಕಾರಣ ಮಾಧ್ಯಮಗಳು ನನ್ನ ಮತ್ತು ಮಗನ ಮೇಲೆ ತಪ್ಪು ಆರೋಪ ಹೊರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Translate »