ಕಣ್ಣೀರ ಧಾರೆ ನಡುವೆ ದೇವೇಗೌಡರಿಂದ ಮೊಮ್ಮಗ ಪ್ರಜ್ವಲ್‍ಗೆ ಹಾಸನ ಧಾರೆ
ಮೈಸೂರು, ಹಾಸನ

ಕಣ್ಣೀರ ಧಾರೆ ನಡುವೆ ದೇವೇಗೌಡರಿಂದ ಮೊಮ್ಮಗ ಪ್ರಜ್ವಲ್‍ಗೆ ಹಾಸನ ಧಾರೆ

March 14, 2019

ಮೂಡಲಹಿಪ್ಪೆ(ಹಾಸನ): ಕಣ್ಣೀರಧಾರೆಯ ನಡುವೆಯೇ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ತಮ್ಮ ಅಭಿಮಾನದ ಹಾಸನ ಲೋಕಸಭಾ ಕ್ಷೇತ್ರದ ಪ್ರತಿನಿಧಿತ್ವವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಬುಧವಾರ ಧಾರೆ ಎರೆದರು.

ಈ ಸಂದರ್ಭ ಪ್ರಜ್ವಲ್ ಅವರ ತಂದೆ ಹೆಚ್.ಡಿ.ರೇವಣ್ಣ, ತಾಯಿ ಭವಾನಿ, ಸಂಬಂಧಿಯಾದ ಚನ್ನರಾಯಪಟ್ಟಣ ಶಾಸಕ ಬಾಲಕೃಷ್ಣ ಅವರೂ ಕಣ್ಣೀರು ಸುರಿಸಿದರು. ಹಾಸನ ಲೋಕಸಭಾ ಕ್ಷೇತ್ರದಿಂದ ನಾನು ಸ್ಪರ್ಧಿಸಲ್ಲ ಎಂದು ಈ ಮೊದಲೇ ಹೇಳಿದ್ದ ಹೆಚ್.ಡಿ.ದೇವೇಗೌಡ ಇಲ್ಲಿಂದ ಮೊಮ್ಮಗ ಪ್ರಜ್ವಲ್ ರೇವಣ್ಣ ಸ್ಪರ್ಧೆಗೆ ಹಸಿರು ನಿಶಾನೆ ತೋರಿದರು. ಜತೆಗೆ ಪ್ರಜ್ವಲ್ ಪರ ಪ್ರಚಾರ ವನ್ನೂ ಆರಂಭಿಸಿದರು. ಹೊಳೆನರಸೀಪುರ ತಾಲೂಕಿನ ಮೂಡಲ ಹಿಪ್ಪೆಯ ಶ್ರೀ ಚನ್ನಕೇಶವ ದೇಗುಲಕ್ಕೆ ಪುತ್ರ ರೇವಣ್ಣ, ಸೊಸೆ ಭವಾನಿ, ಮೊಮ್ಮಗ ಪ್ರಜ್ವಲ್ ರೇವಣ್ಣ, ಪಕ್ಷದ ಶಾಸಕರ ಜೊತೆ ಬುಧವಾರ ಬೆಳಿಗ್ಗೆಯೇ ಆಗಮಿಸಿದ ದೇವೇಗೌಡರು, ಮೊಮ್ಮಗನ ನಾಮಪತ್ರವನ್ನು ದೇವರ ಮೂರ್ತಿಯೆದುರು ಇಟ್ಟು ಪೂಜೆ ಸಲ್ಲಿಸಿದರು. ಬಳಿಕ ಅರ್ಚಕರು ತಮ್ಮ ಕೊರಳಿಗೆ ದೇವರ ಪ್ರಸಾದವಾಗಿ ಹಾಕಿದ್ದ ಹೂವಿನ ಹಾರವನ್ನು ದೇವೇಗೌಡರು ಮೊಮ್ಮಗನ ಕೊರಳಿಗೆ ವರ್ಗಾಯಿಸಿ ಶುಭ ಕೋರಿದರು. ಪೂಜೆ ನಂತರ ಹೆಚ್.ಡಿ.ದೇವೇ ಗೌಡ, ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್, ಸಚಿವ ರೇವಣ್ಣ ದಂಪತಿ ತೆರೆದ ವಾಹನದಲ್ಲಿ ಪ್ರಚಾರ ಆರಂಭಿಸಿದರು.

ಕಣ್ಣೀರ ಧಾರೆ: ಮೂಡಲಹಿಪ್ಪೆಯಲ್ಲಿ ಚುನಾವಣಾ ಪ್ರಚಾರ ವೇದಿಕೆಯಲ್ಲಿ ಮಾತನಾಡಿದ ದೇವೇಗೌಡರು, ಮೊಮ್ಮಗನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಗೆಲ್ಲಿಸುವ ಜವಾಬ್ದಾರಿ ನಿಮ್ಮದೇ ಎಂದು ಹೇಳುತ್ತಲೇ ಭಾವುಕರಾಗಿ ಕಣ್ಣೀರು ಸುರಿಸಿದರು.
ಭಾವುಕರಾಗಿಯೇ ಭಾಷಣ ಆರಂಭಿಸಿದ ದೇವೇಗೌಡರು, ನನ್ನನ್ನು ಪುತ್ರ ವ್ಯಾಮೋಹಿ. ಮಕ್ಕಳು ಮತ್ತು ಕುಟುಂಬಕ್ಕಾಗಿ ಯಷ್ಟೇ ಕೆಲಸ ಮಾಡುತ್ತಾನೆ ಎಂದು ಟೀಕಿಸುತ್ತಾರೆ. ಆದರೆ, ನಾನು ಯಾರಿಗೆ ಮೋಸ ಮಾಡಿದ್ದೇನೆ, ನೀವೆ ಹೇಳಿ? ಎಂದು ಸಭಿಕರನ್ನು ಪ್ರಶ್ನಿಸಿ ಮತ್ತೆ ಕಣ್ಣೀರು ಹಾಕಿದರು. ಆಗ ಪ್ರಜ್ವಲ್ ರೇವಣ್ಣ ಕೂಡ ಕಣ್ಣೀರು ಸುರಿಸಿ ಭಾವುಕರಾದರು.

`ಪ್ರಜ್ವಲ್‍ನನ್ನು ಅಭ್ಯರ್ಥಿ ಮಾಡುವ ತೀರ್ಮಾನ ನನ್ನದಲ್ಲ. ಕ್ಷೇತ್ರದ ಕಾರ್ಯಕರ್ತರು, ಮುಖಂಡರ ಒತ್ತಾಯದಿಂದಾಗಿ ಅಭ್ಯರ್ಥಿಯಾಗಿಸಲಾಗಿದೆ. ಇದರಲ್ಲಿ ಸ್ವಾರ್ಥ ಎಲ್ಲಿಂದ ಬಂತು? ಎಂದು ಪ್ರಶ್ನಿಸಿದರು. ಇದಕ್ಕೂ ಮುನ್ನ ಮಾತನಾಡಿದ ಶಾಸಕ ಬಾಲಕೃಷ್ಣ, ಹಾಸನದಿಂದ ಇದು ತಮ್ಮ ಕೊನೆ ಚುನಾವಣೆ ಎಂದು ದೇವೇಗೌಡÀರು ಹೇಳಿದ್ದಕ್ಕೆ ಕಣ್ಣೀರು ಸುರಿಸಿದರು. ಆಗ ರೇವಣ್ಣ ಸಹ ಟವೆಲ್‍ನಿಂದ ಕಣ್ಣೀರು ಒರೆಸಿಕೊಂಡರು.
ಹಾಸನ-ಮಂಡ್ಯದಲ್ಲಿ ಮೊಮ್ಮಕ್ಕಳಿಬ್ಬರ ಸ್ಪರ್ಧೆ ಖಚಿತ. ಆದರೆ, ನನ್ನ ಸ್ಪರ್ಧೆ ಯಾವ ಕ್ಷೇತ್ರದಿಂದ ಎಂಬುದೇ ಇನ್ನೂ ಗೊತ್ತಿಲ್ಲ ಎಂದು ಗೌಡರು ಪ್ರಶ್ನಾರ್ಥಕ ಚಿಹ್ನೆ ಮುಂದಿಟ್ಟರು.

ಮತ್ತೆ ಕಣ್ಣೀರು: ಸುದ್ದಿಗಾರರೊಂದಿಗೆ ಮಾತನಾಡುವಾಗಲೂ ಗೌಡರು ತಮ್ಮ ರಾಜಕೀಯ ಪಯಣದ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಕಣ್ಣೀರಿಟ್ಟರು. ಕಾಂಗ್ರೆಸ್‍ನ ಕೆಲವರು ಹಾಸನ ದಲ್ಲಿ ಬಿಜೆಪಿಯನ್ನು ಸಂಪರ್ಕಿಸಿದ್ದಾರೆ. ಪ್ರಜ್ವಲ್ ನಿಂತರೆ ವಿರೋಧಿ ಸುವುದಾಗಿ ಬೆದರಿಕೆ ಹಾಕಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿಯೂ ದೊಡ್ಡ ವಿವಾದ ಎಬ್ಬಿಸಿದ್ದಾರೆ. ಅಲ್ಲಿನ ಮೂವರು ಸಚಿವರು, ಐವರು ಶಾಸಕರ ಅಭಿಪ್ರಾಯದಂತೆಯೇ ನಿಖಿಲ್‍ನನ್ನು ನಿಲ್ಲಿಸಲಾಗಿದೆ. ಆದರೆ, ಈಗ ನಿಖಿಲ್ ಗೋ ಬ್ಯಾಕ್ ಎನ್ನುತ್ತಿದ್ದಾರೆ. ಇದು ಬಹಳ ನೋವುಂಟು ಮಾಡಿದೆ ಎಂದು ದೇವೇಗೌಡರು ಮತ್ತೊಮ್ಮೆ ಕಣ್ಣೀರಿಟ್ಟರು.

ನಾನೂ ಮಂಡ್ಯಕ್ಕೆ ಹೋಗುವೆ, ಹಾಸನ ಬೇರೆ ಅಲ್ಲ, ಮಂಡ್ಯ ಬೇರೆ ಅಲ್ಲ. ನಾನು ನಿಖಿಲ್‍ಗೂ ಆಶೀರ್ವಾದ ಮಾಡುತ್ತೇನೆ. ಇದೇ ರೀತಿ ಸಭೆ ಮಾಡಿ ನಿಖಿಲ್ ಹೆಸರು ಘೋಷಣೆ ಮಾಡುವೆ ಎಂದು ಗೌಡರು ಘೋಷಿಸಿದರು.

ಮಂಡ್ಯ-ನಾಳೆ ಘೋಷಣೆ: ಕಾಂಗ್ರೆಸ್‍ನವರು ತುಮಕೂರು ಜೆಡಿಎಸ್‍ಗೆ ಹೋದ್ರೆ ಮಂಡ್ಯ ನಮಗೆ ಕೊಡಿ ಅಂತಿದ್ದಾರೆ. ನಾವೂ ಮೈತ್ರಿ ಧರ್ಮ ಉಳಿಸಿ ಕೊಳ್ಳಬೇಕಿದೆ, ಇದಕ್ಕಾಗಿ ಜಗಳ ಮಾಡಲ್ಲ. ಎಲ್ಲರ ಜೊತೆ ಮಾತನಾಡಿ ನಿಖಿಲ್ ಹೆಸರು ಘೋಷಣೆ ಮಾಡುವೆ ಎಂದು ದೇವೇಗೌಡರು ತಿಳಿಸಿದರು.

ಇನ್ಮುಂದೆ ಅಳಬಾರದೆಂದು ತೀರ್ಮಾನಿಸಿದ್ದೇನೆ…

ಬೆಂಗಳೂರು: ನಾವು ಕಣ್ಣೀರು ಹಾಕುತ್ತೇವೆ ಹೌದು. ಆದರೆ ನಾನು ಈಗ ಕಣ್ಣೀರು ಹಾಕು ವುದನ್ನು ನಿಲ್ಲಿಸಿದ್ದೇನೆ. ಯಾವುದೋ ಒಂದು ವಿಚಾರಕ್ಕೆ ಕಣ್ಣೀರು ಹಾಕಿದ್ದಕ್ಕೆ ಅದೇ ದೊಡ್ಡ ಪ್ರಚಾರ ಆಯ್ತು. ಅದಕ್ಕೆ ಏನೇ ಆದರೂ ಕಣ್ಣೀರು ಹಾಕಬಾರದು ಎಂದು ತೀರ್ಮಾನಿಸಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿ ದರು. ದೇವೇಗೌಡರ ಭೇಟಿ ಬಳಿಕ ಮಾತನಾ ಡಿದ ಅವರು, ಪ್ರತಿನಿತ್ಯ ಬರುವ ಜನರ ಕಷ್ಟ ನೋಡಿ ಕಣ್ಣೀರು ಹಾಕುತ್ತೀನಿ. ಇದು ನಮಗೆ ಹೊಸದಲ್ಲ. ಕೆಲವರು ಗ್ಲಿಸರಿನ್ ಹಾಕಿಕೊಂಡು ಅಳುತ್ತಾರೆ ಎಂದು ಹೇಳಿದರು. ಅಷ್ಟು ಸುಲಭ ವಾಗಿ ಅಳು ಬರುವುದಿಲ್ಲ.

ಅದು ಹೃದಯದಲ್ಲಿ ಇರುವ ನೋವುಗಳು. ದೇವೇಗೌಡರ ಕೊಡುಗೆ ಈ ಕರ್ನಾಟಕಕ್ಕೆ ಇಲ್ವಾ? ನಾವು ದುಡಿಮೆ ಮಾಡಿದ್ದೇವೆ, ದುಡಿಮೆ ಮಾಡಿರೋದಕ್ಕೆ ಜನರ ಕಷ್ಟಗಳು, ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಂಡಿ ದ್ದೇವೆ ಎಂದರು. ಇವತ್ತು ಮಂಡ್ಯದಲ್ಲಿ ಜನತೆ ಯನ್ನು ಕೇಳದೆ ನಾನು ರಾಜಕೀಯ ಮಾಡಲು ಆಗುವುದಿಲ್ಲ. ಮಂಡ್ಯ, ಹಾಸನ ಜನತೆಯೇ ನಮ್ಮನ್ನು ಉಳಿಸಿಕೊಂಡಿರುವುದು. ಮಂಡ್ಯದ ರಾಜಕೀಯ ಏನು ಎಂದು ಗೊತ್ತಿದೆ. ಜನಗಳ ಮುಂದೆ ಹೋಗ್ತೀವಿ ಜನಗಳೇ ತೀರ್ಮಾನಿ ಸುತ್ತಾರೆ. ಏನೋ ಗೋ ಬ್ಯಾಕ್, ಗೋ ಬ್ಯಾಕ್ ಎಲ್ಲಿಂದ ಶುರುವಾಯ್ತು? ಮೊನ್ನೆ ವಿಧಾನಸಭೆಯಲ್ಲಿ ಉತ್ತಮ ಬಜೆಟ್ ಕೊಟ್ರು ಅಂತ ನೀವೆ ಹೊಗಳಿದ್ದೀರಿ. ಅಲ್ಲಿಂದಾನೇ ತಾನೇ ಶುರುವಾಗಿದ್ದು ಗೋ ಬ್ಯಾಕ್, ಗೋ ಬ್ಯಾಕ್ ಕುಮಾರಸ್ವಾಮಿ ಎನ್ನುವುದು ಎಂದು ಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಬಿಜೆಪಿ ನಾಯಕರು ಟ್ವೀಟ್ ಮಾಡಿದ್ದಾರೆ. ಹಾವೇರಿಯಲ್ಲಿ 75 ರೈತ ಕುಟುಂಬಗಳ ಮನೆಗೆ ಯಾವ ನಾಯಕರು ಹೋಗಲಿಲ್ಲ ಆದರೆ ಈ ಕುಮಾರಸ್ವಾಮಿ ಹೋಗಿ 50 ಲಕ್ಷ ಕೊಟ್ಟು ಬಂದೆ. ರಾಯಚೂರು, ಗುಲ್ಬರ್ಗದಲ್ಲಿ 50 ರಿಂದ 60 ಜನ ರೈತರಿಗೆ ಹಣ ಕೊಟ್ಟು ಬಂದಿದ್ದೇನೆ. ಮಂಡ್ಯದಲ್ಲಿ 200 ಜನ ರೈತ ಕುಟುಂಬಗಳಿಗೆ 50 ಸಾವಿರದಿಂದ 1 ಲಕ್ಷ ಹಣ ಕೊಟ್ಟಿದ್ದೇನೆ. ರೈತರನ್ನು ನಾಡಿನ ಜನತೆಯ ನೋವನ್ನು ನಮ್ಮ ಕುಟುಂಬದ ಜನರಂತೆ ನೋಡುತ್ತೇವೆ. ಅವಾಗ ಅಶೋಕ್ ಎಲ್ಲಿ ಹೋಗಿದ್ದ? ದೇವೇಗೌಡ್ರು ಬಗ್ಗೆ ಚರ್ಚೆ ಮಾಡುತ್ತಾನೆ ಅಲ್ವಾ ಯಾವ ರೈತರ ಮನೆಗೆ ಅಶೋಕ್ ಹೋಗಿದ್ದಾನೆ ಹೇಳಿ ಎಂದು ಆರ್ ಅಶೋಕ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

1000 ಕೋಟಿ ಲೂಟಿ ಒಡೆದವರು ನಮ್ಮ ಕುಟುಂಬದ ಬಗ್ಗೆ ಮಾತನಾಡುತ್ತಾರೆ. ಜಗದೀಶ್ ಶೆಟ್ಟರ್ ಯಾರು? ದೇವೇಗೌಡ್ರುಗೂ ಹಾಸನ ಕ್ಷೇತ್ರಕ್ಕೂ 60 ವರ್ಷದ ಸಂಬಂಧವಿದೆ. ಇವತ್ತು ಆ ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟಿದ್ದಾರೆ. ದೇವೇಗೌಡರ ಕುಟುಂಬ ಇಲ್ಲ ಅಂದಿದ್ದರೆ ಈ ಪಕ್ಷ ಇರುತ್ತಿತ್ತಾ? ಇವತ್ತು ದೇವೇಗೌಡರನ್ನು ನೋಡಿಯೇ ಈ ಪಾರ್ಟಿಯನ್ನು ಜನತೆ ಉಳಿಸಿದ್ದಾರೆ. ಮನುಷ್ಯತ್ವದಿಂದ ಬದುಕಿದ್ದೇವೆ. ಮನೆ ಹತ್ತಿರ ತಮ್ಮ ಸಮಸ್ಯೆಗಳನ್ನ ಹೇಳಿಕೊಂಡು ಬಂದವರನ್ನು ನೋಡಿ ನಾನು ಕಣ್ಣಿರು ಹಾಕುತ್ತೇನೆ ಎಂದು ಹೇಳಿದರು.

Translate »