ರಾಮಮಂದಿರ ವಿಚಾರ ಇಟ್ಟುಕೊಂಡು ಬಿಜೆಪಿ ರಾಜಕೀಯ: ದೇವೇಗೌಡರ ಕಿಡಿ
ಹಾಸನ

ರಾಮಮಂದಿರ ವಿಚಾರ ಇಟ್ಟುಕೊಂಡು ಬಿಜೆಪಿ ರಾಜಕೀಯ: ದೇವೇಗೌಡರ ಕಿಡಿ

December 9, 2018

ಹಾಸನ: ರಾಮ ಮಂದಿರ ನಿರ್ಮಾಣ ಪ್ರಕರಣ ನ್ಯಾಯಾಲಯದಲ್ಲಿರುವಾಗ ಬಿಜೆಪಿ ಮತ್ತು ಸಂಘ ಪರಿವಾರದವರು ಹೋರಾಟ ಮಾಡುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಟೀಕಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತ ನಾಡಿದ ಅವರು, ಚುನಾವಣೆ ಕಾರಣದಿಂದ ಮತ್ತೆ ರಾಮ ಮಂದಿರ ವಿಚಾರ ಬಂದಿದೆ. ದಕ್ಷಿಣದಲ್ಲಿ ಶಬರಿಮಲೆ, ಉತ್ತರದಲ್ಲಿ ರಾಮಮಂದಿರ ವಿಚಾರ ಇಟ್ಟುಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದ್ದಾರೆ. ಸಿಬಿಐ ಹಣೆಬರಹ ಮುಗಿಸಿದ್ದಾರೆ. ರಿಸರ್ವ್ ಬ್ಯಾಂಕ್ ಅನ್ನು ತಮ್ಮ ಹಿಡಿತಕ್ಕೆ ಪಡೆಯಲು ಯತ್ನಿಸಿದ್ದಾರೆ. ದೇಶದಲ್ಲಿ ಇನ್ನೇನು ಉಳಿಸಿದ್ದಾರೆ ಎಂದು ಕಿಡಿಕಾರಿದರು.

5 ರಾಜ್ಯಗಳ ಚುನಾವಣಾ ಫಲಿತಾಂಶ ಹೊರ ಬೀಳುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ನಾಳಿದ್ದು ಎಲ್ಲಾ ಪಕ್ಷಗಳ ಸಭೆ ಚಂದ್ರಬಾಬು ನೇತೃತ್ವದಲ್ಲಿ ನಡೆಯಲಿದೆ. ಈ ಚುನಾವಣೆ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆ ಫಲಿತಾಂಶ ಎಂದ ಅವರು, ರಾಜಸ್ತಾನದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗಳಿಸೋ ಸಾಧ್ಯತೆ ಇದೆ. ಉಳಿದ ರಾಜ್ಯಗಳ ಫಲಿತಾಂಶ ಏನೆಂದು ಈಗಲೆ ಹೇಳಲು ಆಗಲ್ಲ. ಐದೂ ರಾಜ್ಯಗಳಲ್ಲಿ ಜನರು ಒಂದೇ ಪಕ್ಷದ ಕಡೆ ತೀರ್ಪು ನೀಡಿದರೆ ಅದರ ಪರಿಣಾಮ ಲೋಕಸಭಾ ಚುನಾವಣೆ ಮೇಲೆ ಆಗಲಿದೆ ಎಂದು ತಿಳಿಸಿದರು.

ಶಿರಾಡಿಘಾಟ್ ರಸ್ತೆ ಯೋಜನೆ ವಿಚಾರ ವಾಗಿ ನಾನೇ ಸ್ವತಃ ನಾಲ್ಕು ವರ್ಷದ ಹಿಂದೆ ಗಡ್ಕರಿ ಅವರನ್ನು ಭೇಟಿ ಮಾಡಿದ್ದೆ. ಗಡ್ಕರಿ ಯವರು ಪಕ್ಷ ಭೇದ ಮರೆತು ಕೆಲಸ ಮಾಡಿ ದ್ದಾರೆ. ಅವರನ್ನು ಯಾವತ್ತು ಟೀಕೆ ಮಾಡಿಲ್ಲ. ಎಲ್ಲರಿಗೂ ನಗುತ್ತಲೇ ಉತ್ತರಿಸುತ್ತಾರೆ. ಅಂತ ವರು ಸಿಗುವುದು ಅಪರೂಪ. ಯಾರೋ ಕುತ್ಕೊಂಡು ಟೀಕೆ ಮಾಡಿದರೆ, ನಾನು ಉತ್ತರ ಕೊಡಲ್ಲ. ಪರೋಕ್ಷವಾಗಿ ಕೆಪಿಸಿಸಿ ಉಪಾಧ್ಯಕ್ಷ ಗಂಡಸಿ ಶಿವರಾಮ್‍ಗೆ ಟಾಂಗ್ ನೀಡಿದರು.

ಹಾಸನದಿಂದ ಬೇಲೂರಿಗೆ ರೈಲು ಮಾರ್ಗ ನಿರ್ಮಿಸಲು ಕೇಂದ್ರ ಅನುಮತಿ ನೀಡಿದೆ. ಬೇಲೂರಿಗೆ ಪ್ರವಾಸಿಗರನ್ನು ಆಕರ್ಷಿ ಸಲು ಇದು ಅನುಕೂಲವಾಗಲಿದೆ ಎಂದ ಅವರು, ರಾಜ್ಯದಲ್ಲಿ ಕಾಡಾನೆ ಸಮಸ್ಯೆ ಪರಿಹಾರಕ್ಕೆ ಮುಖ್ಯಮಂತ್ರಿಗಳು ಪ್ರಯತ್ನ ನಡೆಸಿದ್ದಾರೆ. ಕಾಡಾನೆಗಳನ್ನು ಕೊಲ್ಲಲೂ ಸಾಧ್ಯವಿಲ್ಲ. ಈಗಾಗಲೇ ಕಾಡಾನೆ ಹಿಡಿಯುವ ಕುರಿತು ಸುಪ್ರಿಂ ಆದೇಶವಿದೆ. ಈ ಎಲ್ಲಾ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಾಂ, ಜೆಡಿಎಸ್ ಮುಖಂಡ ಕೆ.ಎಂ.ರಾಜೇಗೌಡ ಇತರರು ಉಪಸ್ಥಿತರಿದ್ದರು.

Translate »