ಎಲ್ಲರ ಸಹಕಾರದಿಂದ ಮೂಲಸೌಕರ್ಯ ಅಭಿವೃದ್ಧಿ
ಹಾಸನ

ಎಲ್ಲರ ಸಹಕಾರದಿಂದ ಮೂಲಸೌಕರ್ಯ ಅಭಿವೃದ್ಧಿ

July 30, 2018

ಅರಸೀಕೆರೆ:  ನಗರಸಭೆ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ನೀಡಿದ ಉತ್ತಮ ಸಹಕಾರ, ಸಾಮರಸ್ಯದಿಂದ ನಗರದ ಜನತೆಗೆ ಕಳೆದ 5 ವರ್ಷಗಳಲ್ಲಿ ಸಾಕಷ್ಟು ಮೂಲ ಸೌಲಭ್ಯ ಕಲ್ಪಿಸಲು ಸಾಧ್ಯವಾಯಿತು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.

ನಗರದ ಕಂತೇನಹಳ್ಳಿ ಬಡಾವಣೆಯ ಕೆರೆ ಅಂಗಳದಲ್ಲಿರುವ ಉದ್ಯಾನವನಕ್ಕೆ ನಾಮಕರಣ ಮತ್ತು ನಗರಸಭೆ ಕಚೇರಿ ಆವರಣದಲ್ಲಿ ಸಾರ್ವಜನಿಕರ ಶೌಚಾ ಲಯ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಗರದ ಪ್ರಾಚೀನ ಕೆರೆಗಳಲ್ಲಿ ಒಂದಾದ ಕಂತೇನಹಳ್ಳಿ ಕೆರೆಗಳ ಅಭಿವೃದ್ದಿಯೊಂದಿಗೆ ಉದ್ಯಾನವನ್ನು ನಿರ್ಮಿಸಿ ಅಭಿವೃದ್ಧಿಪಡಿಸಲಾಗಿದೆ. ಹೊಯ್ಸಳರ ಕಾಲದಲ್ಲಿ ನಿರ್ಮಾಣ ವಾದ ಈ ಕೆರೆಗೆ ಅಂದಿನ ರಾಣಿಯ ಹೆಸರಿನಲ್ಲಿ ಅರಸಿ ಉದ್ಯಾನವನ ಎಂದು ನಾಮಕರಣ ಮಾಡಲಾಗಿದೆ ಎಂದರು.

ನಗರದ ಜನತೆಯ ಬಹುಮುಖ್ಯ ಬೇಡಿಕೆ ಯಾಗಿದ್ದ ರಸ್ತೆ ಅಭಿವೃದ್ಧಿ ಮತ್ತು ನವೀಕರಣ ಶೇ.90ರಷ್ಟು ಮುಗಿದ್ದು, ಹಳೇ ಆರ್‍ಎಂಎಸ್ ರಸ್ತೆ ಮತ್ತು ಮೊದಲಿ ಯಾರ್ ರಸ್ತೆಗಳು ಸೇರಿದಂತೆ ಇನ್ನಿತರೆ ಕಡೆ ರಸ್ತೆ ಕಾಮಗಾರಿ ಆಗಬೇಕಾಗಿದೆ. ಇತ್ತೀಚೆಗೆ ಜಿಲ್ಲಾಧಿಕಾರಿಗಳು ತಮ್ಮೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ವಾಸ್ತಾವಾಂಶ ಅರಿತ ಬಳಿಕ ಈ ಎಲ್ಲಾ ರಸ್ತೆಗಳನ್ನು ಕಾಂಕ್ರಿಟ್ ರಸ್ತೆಗಳನ್ನಾಗಿ ಪರಿವರ್ತಿಸಲು ಒಪ್ಪಿಗೆ ಸೂಚಿಸಿದ್ದಾರೆ

ನಗರದಲ್ಲಿ ಮೇಲ್ನೋಟಕ್ಕೆ ಅಭಿವೃದ್ಧಿ ಕಾಣುತ್ತಿದ್ದರೂ ಇನ್ನೂ ಹೆಚ್ಚಿನ ರೀತಿ ಯಲ್ಲಿ ಅಭಿವೃದ್ಧಿ ಪಡಿಸಬೇಕಾದ ಮೂಲ ಸೌಲಭ್ಯಗಳ ಕೊರತೆ ಸಾಕಷ್ಟಿದೆ. ಮುಂದಿನ ದಿನಗಳ ಆಡಳಿತದಲ್ಲಿ ಈ ಎಲ್ಲಾ ಸಮಸ್ಯೆ ಗಳನ್ನು ಬಗೆಹರಿಸಿ ಅರಸೀಕೆರೆಯನ್ನು ಉತ್ತಮ ಮಾದರಿ ನಗರವನ್ನಾಗಿ ಮಾಡುವ ಕನಸು ನಮ್ಮದಾಗಿದೆ. ಅದಕ್ಕೆ ನಗರದ ಜನತೆ ಆಶೀರ್ವಾದ ಕೂಡ ಅವಶ್ಯಕವಾಗಿದೆ ಎಂದ ಅವರು, ಮುಂಬರುವ ಸ್ಥಳೀಯ ಚುನಾವಣೆಯಲ್ಲಿ ಪಕ್ಷ ಬೆಂಬಲಿಸುವಂತೆ ಪರೋಕ್ಷವಾಗಿ ಮನವಿ ಮಾಡಿದರು.

ನಗರದಲ್ಲಿ ಹಳೆ ಮತ್ತು ನೂತನ ಬಡಾವಣೆಗಳಲ್ಲಿ ಸಾಕಷ್ಟು ಉದ್ಯಾನವನ ಗಳಿಗೆ ಜಾಗಗಳನ್ನು ಮೀಸಲಿಟ್ಟಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ಧಿಪಡಿಸಿ ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸಲಾಗುವುದು. ಸದ್ಯ ನಮ್ಮ ಸರ್ಕಾರ ಅಧಿಕಾರ ನಡೆಸುತ್ತಿದ್ದು, ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮತ್ತು ಸಚಿವ ಹೆಚ್.ಡಿ.ರೇವಣ್ಣ ಅವರು ಅರಸೀಕೆರೆ ನಗರದ ಮೂಲ ಸೌಲಭ್ಯಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ವಿಶ್ವಾಸವಿದ್ದು, ನಗರವು ಹೆಚ್ಚು ಜನ ಸಾಂದ್ರತೆಯಿಂದ ಅತೀ ವೇಗವಾಗಿ ಬೆಳೆಯುತ್ತಿದೆ. ಆ ನಿಟ್ಟಿನಲ್ಲಿ ಮುಂಬರುವ ಚುನಾವಣೆಯಲ್ಲಿ ಗೆದ್ದು ಬರುವ ಸದಸ್ಯರು ನಗರದ ಅಭಿವೃದ್ಧಿಗೆ ಹೆಚ್ಚು ಒತ್ತನ್ನು ನೀಡಬೇಕಾದ ಅವಶ್ಯಕತೆ ಇದೆ ಎಂದರು.

ನಗರಸಭಾಧ್ಯಕ್ಷ ಶಮೀವುಲ್ಲಾ ಮಾತ ನಾಡಿ, ಮಾಧ್ಯಮಗಳು ಮತ್ತು ಸಾರ್ವಜನಿಕರಿಂದ ನಗರಸಭೆ ಕಚೇರಿ ಆವರಣದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಒತ್ತಡಗಳು ಬಂದಿತ್ತು. ಆ ನಿಟ್ಟಿನಲ್ಲಿ ನಗರಸಭೆ ಆಡಳಿತದ ಕರ್ತವ್ಯವೂ ಆಗಿರುವುದರಿಂದ ಇಂದು ಸಾರ್ವಜನಿಕರ ನೂತನ ಶೌಚಾಲಯವನ್ನು ಉದ್ಘಾಟಿಸ ಲಾಗಿದೆ. ಈ ಸ್ಥಳವನ್ನು ಎಷ್ಟು ಸಾಧ್ಯವೋ ಅಷ್ಟು ಶುಚಿತ್ವಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು. ನಗರಸಭೆಯ ನೈರ್ಮಲ್ಯೀಕರಣ ಪ್ರಯತ್ನಗಳಿಗೆ ಕೈ ಜೋಡಿಸ ಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಪಾರ್ಥಸಾರಥಿ, ಪೌರಾಯುಕ್ತ ಪರಮೇಶ್ವರಪ್ಪ, ವ್ಯವಸ್ಥಾಪಕ ಮಹಾತ್ಮ, ಆರೋಗ್ಯ ನಿರೀಕ್ಷಕ ರಮೇಶ್, ರೇವಣಸಿದ್ದಪ್ಪ, ನಗರಸಭೆ ಸದಸ್ಯರಾದ ಬಿ.ಎನ್.ವಿದ್ಯಾಧರ, ಮನು ಕುಮಾರ್, ಗೀತಾ ವಿಶ್ವನಾಥ್, ಶ್ರೀನಿವಾಸ ಗೌಡ, ಭಾಗ್ಯಲತಾ ಮಂಜು, ಅನ್ನಪೂರ್ಣ ಸತೀಶ್, ಬಾಲಮುರುಗನ್, ಪಂಚಾಕ್ಷರಿ, ಕಾಂತೇಶ್ ಸೇರಿಂತೆ ಇನ್ನಿತರೇ ಸದಸ್ಯರಿದ್ದರು.

Translate »