ಬೆಟ್ಟ-ಗುಡ್ಡ ಅಗೆದು ರೆಸಾರ್ಟ್ ನಿರ್ಮಿಸಿದ್ದೇ ಕೊಡಗಿನ ದುರಂತಕ್ಕೆ ಕಾರಣ : ಮಾಜಿ ಸಚಿವ ಎಂ.ಸಿ. ನಾಣಯ್ಯ ಅಭಿಮತ
ಕೊಡಗು

ಬೆಟ್ಟ-ಗುಡ್ಡ ಅಗೆದು ರೆಸಾರ್ಟ್ ನಿರ್ಮಿಸಿದ್ದೇ ಕೊಡಗಿನ ದುರಂತಕ್ಕೆ ಕಾರಣ : ಮಾಜಿ ಸಚಿವ ಎಂ.ಸಿ. ನಾಣಯ್ಯ ಅಭಿಮತ

August 21, 2018

ಮಡಿಕೇರಿ:  ಕೃಷಿ ಜಮೀನುಗಳನ್ನು ಕೃಷಿಯೇತರ ಉದ್ದೇಶಗಳಿಗೆ ಬಳಕೆ ಮಾಡಿರುವುದು, ಬೆಟ್ಟ ಗುಡ್ಡಗಳನ್ನು ಅಗೆದು ರೆಸಾರ್ಟ್, ಹೋಂ ಸ್ಟೇಗಳನ್ನು ನಿರ್ಮಿಸಿರುವುದು ಕೊಡಗಿನ ಈಗಿನ ದುರಂತಗಳಿಗೆ ಕಾರಣವೆಂದು ಮಾಜಿ ಸಚಿವ ಎಂ.ಸಿ.ನಾಣಯ್ಯ ಅಭಿಪ್ರಾಯಪಟ್ಟಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ರಕ್ಷಣೆಗೆ ವೀರಯೋಧರನ್ನು ನೀಡಿರುವ ನಾಡಾದ ಕೊಡಗಿನಲ್ಲಿ ಮಹಾಮಳೆಯಿಂದ ಉಂಟಾಗಿರುವ ಅಪಾರ ಹಾನಿಯಿಂದಾಗಿ ಯೋಧರ ಸಹಕಾರ ದಿಂದಲೆ ರಕ್ಷಣಾ ಕಾರ್ಯಗಳಿಗೆ ಮೊರೆ ಹೋಗಿರುವುದು ವಿಷಾದಕರವೆಂದರು.

ಕೊಡಗಿನ ಜನರು ಯಾವತ್ತೂ ಸರ್ಕಾರದಿಂದ ಭಿಕ್ಷೆ ಬೇಡಿದವರಲ್ಲ. ಕಾವೇರಿ ನದಿ ನೀರನ್ನು ಬಳಕೆ ಮಾಡುವ ಪ್ರದೇಶಗಳ ಸಾಕಷ್ಟು ಜನರು ಕೊಡಗಿನ ಮತ್ತು ಕಾವೇರಿಯ ಮೇಲೆ ಅಭಿಮಾನವಿಟ್ಟು, ದೇಣಿಗೆಗಳನ್ನು ನೀಡಲು ಮುಂದೆ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು “ಮುಖ್ಯಮಂತ್ರಿಗಳ ಪರಿಹಾರ ನಿಧಿ-ಕೊಡಗು”ಎನ್ನುವ ಪ್ರತ್ಯೇಕ ಖಾತೆಯನ್ನು ಕೊಡಗಿನ ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ತೆರೆಯಬೇಕು. ಇದರಲ್ಲಿ ಸಂಗ್ರಹವಾಗುವ ಮೊತ್ತವನ್ನು ಕೊಡಗಿನ ಸಂತ್ರಸ್ತರಿಗೆ ಶಾಶ್ವತ ನೆಲೆ ಕಲ್ಪಿಸುವ ನಿಟ್ಟಿನಲ್ಲಿ ಬಳಕೆ ಮಾಡಬೇಕೆಂದು ಒತ್ತಾಯಿಸಿದರು.

ನಮ್ಮ ಎಲ್ಲಾ ಆಸ್ತಿ ಪಾಸ್ತಿ, ಮನೆ ಮಠ, ತೋಟಗಳು ಮಣ್ಣಿನಡಿ ಸಿಲುಕಿದ್ದು, ಇಂತಹ ದೊಡ್ಡ ದುರಂತಕ್ಕೆ ಶೇ.30 ರಷ್ಟು ಸ್ವಯಂಕೃತ ಅಪರಾಧವೆ ಕಾರಣವೆಂದು ಅವರು ಹೇಳಿದರು. ಪರಿಸರ ನಾಶಕ್ಕೆ ಕಾರಣವಾಗುವ ಇಂತಹ ಚಟುವಟಿಕೆಗಳನ್ನು ಜಿಲ್ಲೆಯಿಂದ ಹೊರ ಹಾಕಬೇಕು. ಕೃಷಿ ಜಮೀನುಗಳನ್ನು ಕೃಷಿಯೇತರ ಚಟುವಟಿಕೆಗಳಿಗೆ ಪರಿವರ್ತಿಸುವುದನ್ನು ರಾಜ್ಯ ಸರ್ಕಾರ ಕೂಡಲೆ ನಿಷೇಧಿಸಬೇಕು ಎಂದು ನಾಣಯ್ಯ ಆಗ್ರಹಿಸಿದರು.

ಕಳೆದ 70 ದಿನಗಳಿಂದ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗಿದ್ದು, ಕಳೆದ 15 ದಿನಗಳಿಂದ ಹೆಚ್ಚಿನ ಮಳೆÉಯಾಗಿ ಆಸ್ತಿಪಾಸ್ತಿ ಹಾನಿಗೊಳಗಾಗಿದೆ. ಈ ಘಟನೆಗಳಿಂದ ಸಂತ್ರಸ್ತರಾದವರಿಗೆ ಮುಂದಿನ ಬದುಕು ಕಟ್ಟಿಕೊಡುವುದು ಇಂದಿನ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು, ಜಿಲ್ಲೆಯ ಮಾಜಿ ಹಾಗೂ ಹಾಲಿ ಶಾಸಕರು, ಜನಪ್ರತಿನಿಧಿಗಳು, ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರನ್ನು ಒಳಗೊಂಡ ರಾಜಕೀಯ ರಹಿತವಾದ ಸಮಿತಿಯೊಂದನ್ನು ರಚಿಸಿ, ಮುಂದಿನ ರೂಪುರೇಷೆಗಳನ್ನು ಸಿದ್ಧಪಡಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಿದ್ದು, ಇದಕ್ಕೆ ಯಾವುದೇ ರಾಜಕೀಯ ಲೇಪ ಬೇಡ ಎಂದು ವಿವಿಧ ರಾಜಕೀಯ ಪಕ್ಷಗಳಿಗೆ ಅವರು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮೂಡಾ ಮಾಜಿ ಅಧ್ಯಕ್ಷ ಎಸ್.ಐ. ಮುನೀರ್ ಅಹಮ್ಮದ್ ಉಪಸ್ಥಿತರಿದ್ದರು.

Translate »