ಅಳಿಯನ ಮನೆಯತ್ತ ಮಾವನ ಆಗಮನ!
ಕೊಡಗು

ಅಳಿಯನ ಮನೆಯತ್ತ ಮಾವನ ಆಗಮನ!

August 21, 2018

ಗೋಣಿಕೊಪ್ಪಲು: ವಿಪರೀತ ಮಳೆ, ಗಾಳಿಯಿಂದ ಸಿಲುಕಿ ನರಕ ಯಾತನೆ ಅನುಭವಿಸಿದ ಹೆಬ್ಬಟ್ಟಗೇರಿ, ಮುಕ್ಕೋಡ್ಲು ಗ್ರಾಮದ ವಯೋವೃದ್ದ ಚಂದ್ರು ಎಂಬಾತ ಮೂರು ದಿನಗಳ ಕಾಲ ಕಾಡಿನಲ್ಲಿ ನಡೆದುಕೊಂಡೇ ಬಂದು, ಮುಖ್ಯರಸ್ತೆ ತಲುಪಿದ ನಂತರ ಸಿಕ್ಕಿದ ಟ್ರಕ್ ನಲ್ಲಿ ತನ್ನ ಅಳಿಯನ ಊರು ದೇವರಪುರಕ್ಕೆ ಆಗಮಿಸಿದ್ದಾರೆ. ವಯೋವೃದ್ಧನೊಂದಿಗೆ ಹೆಬ್ಬಟ್ಟಗೇರಿಯ ಅಕ್ಕಪಕ್ಕದ 40 ನಿವಾಸಿಗಳು ಸಹ ಆಗಮಿಸಿದ್ದು, ದೇವರಪುರದ ಅಂಬುಕೋಟೆಯಲ್ಲಿರುವ ಚಂದ್ರುವಿನ ಅಳಿಯ ವಿವೇಕ್ ಅವರ ಮನೆಯಲ್ಲಿ ಸದ್ಯಕ್ಕೆ ಆಶ್ರಯ ಪಡೆದಿದ್ದಾರೆ.

ದಿಢೀರನೇ ಮನೆಗೆ ಆಗಮಿಸಿದ ಮಾವ ಹಾಗೂ 40 ಮಂದಿಗೆ ಆಶ್ರಯ ನೀಡಲು ವಿವೇಕ್, ಸಮೀಪದ ಮಾಯಮುಡಿಯ ಮಾನೀಲ ಅಯ್ಯಪ್ಪ ಸಂಘದವರನ್ನು ಸಂಪರ್ಕಿಸಿ ಸಹಾಯ ಮಾಡುವಂತೆ ಮನವಿ ಮಾಡಿದರು. ಕೂಡಲೇ ಸಹಾಯ ಹಸ್ತ ನೀಡಿದ ಮಾನೀಲ್ ಅಯ್ಯಪ್ಪ ಸಂಘದ ಪಧಾಧಿಕಾರಿಗಳು ಗೋಣಿಕೊಪ್ಪಲುವಿನ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಿ ನಿರಾಶ್ರಿತರಿಗೆ ಸವಲತ್ತುಗಳನ್ನು ಸಕಾಲದಲ್ಲಿ ಒದಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಮಾಹಿತಿ ತಿಳಿದ ಪೊನ್ನಂಪೇಟೆಯ ರೆವಿನ್ಯೂ ಅಧಿಕಾರಿಗಳಾದ ರಾಧ ಕೃಷ್ಣ, ಮಂಜುನಾಥ್, ಸಂತೋಷ್, ಮುಕುಂದ ಹಾಗೂ ತಂಡ ದೇವರಪುರದ ಅಂಬು ಕೋಟೆಯಲ್ಲಿ ಬೀಡುಬಿಟ್ಟಿದ್ದ ನಿರಾಶ್ರಿತರಿಗೆ ಬೇಕಾದ ಸವಲತ್ತುಗಳನ್ನು ತಲುಪಿಸುವಲ್ಲಿ ಯಶಸ್ವಿಯಾದರು. ಈ ಮಾಹಿತಿ ತಿಳಿದ ಸಾರ್ವಜನಿಕರು ತಮ್ಮ ತಮ್ಮ ಕೈಲಾದ ವಸ್ತುಗಳನ್ನು ಈ ನಿರಾಶ್ರಿತರಿಗೆ ನೀಡುತ್ತಿದ್ದಾರೆ.

ಬೆಂಗಳೂರಿನಿಂದ ಆಗಮಿಸಿದ ತೀರ್ಥೇಶ್, ಮೋಹನ್ ಹಾಗೂ ದನಂಜಯ್ ಇವರ ಬಿಎಂಆರ್‍ಸಿಎಲ್, ಮೆಟ್ರೋ, ಗಂಡ ಭೇರುಂಡ ತಂಡವು ಮುಂಜಾನೆ ಸ್ಥಳಕ್ಕೆ ತೆರಳಿ ಅಗತ್ಯವಿರುವ ವಸ್ತುಗಳಾದ ಚಾಪೆ, ಕಾರ್ಪೆಟ್, ಕಂಬಳಿ, ಪೇಸ್ಟ್, ಸೋಪ್, ಒಳ ಉಡುಪು ಗಳು, ಮಹಿಳೆಯರಿಗೆ ಸೀರೆ, ಸೊಳ್ಳೆಬತ್ತಿ, ಅಕ್ಕಿ, ನೀರಿನ ಬಾಟಲ್, ಚಪಾತಿ, ಬನ್ ಗಳನ್ನು ವಿತರಿಸುವ ಮೂಲಕ ಸಂಕಷ್ಟದಲ್ಲಿ ಭಾಗಿಯಾದರು. ಈ ನಿರಾಶ್ರಿತರಿಗೆ ಬೆಂಗಳೂರಿನ ವೈಟ್‍ಫೀಲ್ಡ್‍ನ ಲಯನ್ಸ್ ಕ್ಲಬ್ ಪದಾಧಿಕಾರಿ ಗಳು, ಬ್ಲಾಂಕೆಟ್ಸ್‍ಗಳು, ಟವಲ್, ಬೆಡ್ ಶೀಟ್, ಬಟ್ಟೆಗಳನ್ನು ವಿತರಿಸಿದರು. ತಿತಿ ಮತಿಯ ದೇವಮಚ್ಚಿ ನಿವಾಸಿ ಸರಸ್ವತಿ ಸಮ್ಮುಖದಲ್ಲಿ ಊರಿನ ಗ್ರಾಮಸ್ಥರು ಚಪಾತಿ,ಬಟ್ಟೆ,ಕೇಕ್,ಮಹಿಳೆಯರ ಒಳ ಉಡುಪುಗಳನ್ನು ನೀಡುವ ಮೂಲಕ ಸಂತ್ರಸ್ತರ ಕಷ್ಟದಲ್ಲಿ ಭಾಗಿಯಾದರು.

ಕೊಡಗು ಜಿಲ್ಲಾ ಪಂಚಾಯ್ತಿಯ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಸಿ.ಕೆ.ಬೋಪಣ್ಣ ಈ ಭಾಗದ ನಿರಾಶ್ರಿತರಿಗೆ ಅಗತ್ಯ ವಸ್ತುಗಳ ಸರಬರಾಜಿನ ವ್ಯವಸ್ಥೆಯ ಬಗ್ಗೆ ವಿಶೇಷ ಗಮನ ಹರಿಸುತ್ತಿದ್ದಾರೆ. ಯಾವುದೇ ತೊಂದರೆ ಯಾಗದಂತೆ ತಾಲೂಕು ಆಡಳಿತದ ಮೂಲಕ ಕೆಲಸ ನಿರ್ವಹಿಸಲು ಅಧಿಕಾರಿ ಗಳನ್ನು ಮನವಿ ಮಾಡಿಕೊಳ್ಳುವ ಮೂಲಕ ಸ್ಥಳದಲ್ಲಿ ಇವರೊಂದಿಗೆ ಮಾಜಿ ಆರ್‍ಎಂಸಿ ಉಪಾಧ್ಯಕ್ಷ ರಾಜ ಹಾಗೂ ಇತರರು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.

Translate »