ವಿವಿಗಳನ್ನು ಜಾತಿ ಆಧಾರದಲ್ಲಿ ಪರಿಗಣಿಸುತ್ತಿರುವುದು ಅಪಾಯಕಾರಿ ಮಾಜಿ ಸಚಿವ ಎಂ.ಸಿ. ನಾಣಯ್ಯ ವಿಷಾದ
ಕೊಡಗು

ವಿವಿಗಳನ್ನು ಜಾತಿ ಆಧಾರದಲ್ಲಿ ಪರಿಗಣಿಸುತ್ತಿರುವುದು ಅಪಾಯಕಾರಿ ಮಾಜಿ ಸಚಿವ ಎಂ.ಸಿ. ನಾಣಯ್ಯ ವಿಷಾದ

October 30, 2018

ಮಡಿಕೇರಿ: ಇತ್ತೀಚಿನ ದಿನಗಳಲ್ಲಿ ವಿಶ್ವವಿದ್ಯಾನಿಲಯ ಗಳನ್ನು ಕೂಡ ಜಾತಿ ಆಧಾರದಲ್ಲಿ ಪರಿಗಣಿಸುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಮಾಜಿ ಕಾನೂನು ಸಚಿವ ಎಂ.ಸಿ.ನಾಣಯ್ಯ ವಿಷಾದ ವ್ಯಕ್ತಪಡಿಸಿದ್ದಾರೆ.

ನಗರದ ಫೀ.ಮಾ ಕೆ.ಎಂ.ಕಾರ್ಯಪ್ಪ ಕಾಲೇಜ್‍ನ ಆವರಣದಲ್ಲಿ ಹಳೆಯ ವಿದ್ಯಾರ್ಥಿ ಸಂಘದ ಸಹಕಾರದಿಂದ ನಿರ್ಮಾಣ ಗೊಂಡಿರುವ ನೂತನ ಕೊಠಡಿಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿಶ್ವವಿದ್ಯಾನಿಲಯ ಗಳನ್ನು ಜಾತಿ ಆಧಾರದಲ್ಲಿ ಪರಿಗಣಿಸಿದರೆ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ, ಆದ್ದರಿಂದ ಶಿಕ್ಷಣ ಸಂಸ್ಥೆಗಳು ಜಾತಿ ರಹಿತವಾಗಿ ಕಾರ್ಯ ನಿರ್ವಹಿಸುವ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.

ಇತರ ದೇಶಗಳನ್ನು ಹೋಲಿಸಿದರೆ ನಮ್ಮ ದೇಶದಲ್ಲಿ ಅತೀ ಹೆಚ್ಚಿನ ಸಂಖ್ಯೆಯ ವಿಶ್ವವಿದ್ಯಾನಿಲಯಗಳು, ಕಾಲೇಜುಗಳಿದ್ದು, ವಿದ್ಯಾರ್ಥಿಗಳು ಕೂಡ ಹೆಚ್ಚೇ ಇದ್ದಾರೆ. ಆದರೆ ಶೇ.70 ರಷ್ಟು ಯುವ ಸಮೂಹ ನಿರುದ್ಯೋಗ ಸಮಸ್ಯೆಯಲ್ಲಿರುವುದು ಮಾತ್ರ ಬೇಸರದ ವಿಚಾರವೆಂದರು.ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಶಿಕ್ಷಣ ಕ್ಷೇತ್ರದ ಗಮನ ಸೆಳೆದಿದೆ.

ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರು ಕಾಲೇಜ್‍ನ ಪ್ರತಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಅಭಿವೃದ್ಧಿಗಾಗಿ ಕೈಜೋಡಿಸುತ್ತಿರುವುದು ಶ್ಲಾಘನೀಯ. ಕಾಲೇಜ್‍ನ ಬೆಳವಣಿಗೆಗೆ ಹಳೆಯ ವಿದ್ಯಾರ್ಥಿಗಳು ಇನ್ನಷ್ಟು ಸಹಕಾರವನ್ನು ನೀಡಬೇಕು ಎಂದು ಎಂ.ಸಿ.ನಾಣಯ್ಯ ಕರೆ ನೀಡಿದರು. ನೂತನ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದ ಬೆಳೆಗಾರ ರಾದ ಬೋಜಮ್ಮ ಪೂಣಚ್ಚ ಅವರು ಉತ್ತಮ ಶಿಕ್ಷಣದಿಂದ ಉತ್ತಮ ಜೀವನವನ್ನು ಪಡೆದುಕೊಳ್ಳಲು ಸಾಧ್ಯ ಎಂದರು. ಹಳೆಯ ವಿದ್ಯಾರ್ಥಿಗಳು ನೀಡುವ ಕೊಡುಗೆ ಗಳಿಂದ ಹೊಸ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಕಾರಿ ಯಾಗಲಿದೆ ಮತ್ತು ಮುಂದೆ ತಾವೂ ಈ ಕಾರ್ಯದಲ್ಲಿ ತೊಡಗಿಸಿ ಕೊಳ್ಳಬೇಕು ಎನ್ನುವ ಭಾವನೆ ಮೂಡಲಿದೆ ಎಂದು ತಿಳಿಸಿದರು.

ಮಂಗಳೂರು ವಿಶ್ವಾವಿದ್ಯಾನಿಲಯದ ಕನ್ನಡ ವಿಭಾಗದ ವಿಶೇಷ ಅಧಿಕಾರಿ ಪ್ರೊ.ನಾಗಪ್ಪಗೌಡ ಮಾತನಾಡಿ, ಕೊಡಗಿನ ಜನಪ್ರತಿ ನಿಧಿಗಳು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳ ಸಹಕಾರದಿಂದ ಈ ಕಾಲೇಜು ಉತ್ತಮ ರೀತಿಯಲ್ಲಿ ಸಾಧನೆ ಮಾಡಲು ಸಾಧ್ಯ ವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇತ್ತೀಚಿನ ವರ್ಷ ಗಳಲ್ಲಿ ಶಿಕ್ಷಣ ಕ್ಷೇತ್ರ ಬಹಳಷ್ಟು ಬದಲಾವಣೆಗಳನ್ನು ಕಂಡಿದ್ದು, ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಯಲ್ಲಿ ಹಳೆಯ ವಿದ್ಯಾರ್ಥಿಗಳು ಪ್ರಮುಖ ಪಾತ್ರವಹಿಸುತ್ತಿರುವುದು ಶ್ಲಾಘನೀಯ ಎಂದರು.
ಪ್ರಾಧ್ಯಾಪಕರ ಜವಬ್ದಾರಿ ದೊಡ್ಡದಿದ್ದು, ವಿದ್ಯಾರ್ಥಿಗಳನ್ನು ಸರಿ ಮಾರ್ಗದಲ್ಲಿ ಕೊಂಡೊಯ್ಯುವ ಶಕ್ತಿ ಅವರಿಗಿದೆ ಎಂದರು. ವಿದ್ಯಾರ್ಥಿ ಜೀವನವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡಾಗ ಮಾತ್ರ ಶೈಕ್ಷಣಿಕ ಸಾಧನೆ ಸಾಧ್ಯವಾಗಲಿದೆ. ಯಾವುದೇ ಸಮಸ್ಯೆಗಳು ಎದುರಾದರೂ ಗುಣಮಟ್ಟದ ಶಿಕ್ಷಣದಿಂದ ಅವುಗಳನ್ನು ಎದುರಿಸಲು ಸಾಧ್ಯವಿದೆ ಎಂದು ಪ್ರೊ.ನಾಗಪ್ಪ ಗೌಡ ಅಭಿಪ್ರಾಯಪಟ್ಟರು.

ಕಾಲೇಜ್‍ನ ಪ್ರಾಂಶುಪಾಲರಾದ ಡಾ.ಪಾರ್ವತಿ ಅಪ್ಪಯ್ಯ ಅವರನ್ನು ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ಇದೇ ಸಂದರ್ಭ ಸನ್ಮಾನಿಸಲಾಯಿತು.ಸಂಘದ ಅಧ್ಯಕ್ಷೆ ಶೋಭಾ ಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಾಪಕ ಅಧ್ಯಕ್ಷ ಕೆ.ಎಸ್.ದೇವಯ್ಯ, ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Translate »