ಚೀನಾ ಮಾದರಿ ಲ್ಯಾಂಟನ್ ಪಾರ್ಕ್, ತ್ರಿಡಿ ಆಕೃತಿಗಳ ವೈಭೋಗ
ಮೈಸೂರು

ಚೀನಾ ಮಾದರಿ ಲ್ಯಾಂಟನ್ ಪಾರ್ಕ್, ತ್ರಿಡಿ ಆಕೃತಿಗಳ ವೈಭೋಗ

October 29, 2018

ಮೈಸೂರು: ದೇಶದಲ್ಲೇ ಇದೇ ಮೊದಲ ಬಾರಿಗೆ ಚೀನಾ ಮಾದರಿಯಲ್ಲಿ ನಿರ್ಮಿಸಿರುವ ಲ್ಯಾಂಟನ್ ಪಾರ್ಕ್‍ನಲ್ಲಿ ಮಹಿಷಾಸುರ ಮರ್ಧಿನಿ ಅವತಾರದಲ್ಲಿ ಚಾಮುಂಡೇಶ್ವರಿಯ ತ್ರಿಡಿ ಆಕೃತಿ. ನಾಡಿನ ಪರಂಪರೆ ಬಿಂಬಿಸುವ ಇನ್ನಿತರೆ ತ್ರಿಡಿ ಆಕೃತಿಗಳು, 5 ಸಾವಿರ ಎಲ್‍ಇಡಿ ಲೈಟ್‍ಗಳುಳ್ಳ ರೋಜ್ ಗಾರ್ಡನ್ ಜನರನ್ನು ಆಕರ್ಷಿಸುತ್ತಿದೆ. ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ 90 ದಿನ ಪ್ರದರ್ಶನಗೊಳ್ಳಲಿರುವ ‘ಲ್ಯಾಂಟನ್ ಪಾರ್ಕ್’ ಅನ್ನು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಪತ್ನಿ ಅನಿತಾ ಸಾ.ರಾ.ಮಹೇಶ್ ಜೊತೆಗೂಡಿ ಉದ್ಘಾಟಿಸಿದರು.

ಏನೇನಿದೆ: ವಸ್ತು ಪ್ರದರ್ಶನದ ಆವರಣದಲ್ಲಿ 15 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ 1.50 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸುತ್ತಿರುವ ಲ್ಯಾಂಟನ್ ಪಾರ್ಕ್‍ನಲ್ಲಿ 400 ವರ್ಷದಲ್ಲಿ ಮೈಸೂರು ನಗರ ಕಂಡಿರುವ ಅಭಿವೃದ್ಧಿ, ವಿಜಯನಗರ ಸಾಮ್ರಾಜ್ಯ, ಮೈಸೂರು ಅರಸರ ಆಳ್ವಿಕೆ, ದಸರಾ ನಡೆದು ಬಂದ ಹಾದಿ. ಚಾಮುಂಡಿಬೆಟ್ಟ, ಮಹಿಷಾಸುರ ಮರ್ಧನ, ಜಂಬೂಸವಾರಿ, ಪೂಜಾ ಕುಣಿತ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ಸಂಸ್ಕøತಿಯನ್ನು ತ್ರಿಡಿ ಆಕೃತಿಗಳಿಂದ ಅನಾವರಣ ಗೊಳಿಸಲಾಗಿದೆ. ಜೊತೆಗೆ ದಸರಾ ಮಹೋತ್ಸವದ ಮಹತ್ವ ವನ್ನು ಸಾರಲು 9 ಬಣ್ಣದ 9 ಅಶ್ವ ತ್ರಿಡಿ ಆಕೃತಿ ನಿಲ್ಲಿಸಲಾಗಿದೆ.

ಎಲ್‍ಇಡಿ ರೋಜ್ ಗಾರ್ಡನ್: ಮಹಿಷಾಸುರ ಮರ್ಧಿನಿ ಅವತಾರದಲ್ಲಿ ಚಾಮುಂಡೇಶ್ವರಿಯ ತ್ರಿಡಿ ಆಕೃತಿ. ಅದರ ಸುತ್ತಲೂ 5 ಸಾವಿರ ಎಲ್‍ಇಡಿ ಲೈಟ್‍ಗಳಿಂದ ರೋಜ್ ಗಾರ್ಡ್‍ನ್ ನಿರ್ಮಿಸಲಾಗಿದ್ದು, ನೋಡುಗರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಜತೆಗೆ ಲ್ಯಾಂಟನ್ ಪಾರ್ಕ್ ಸುತ್ತಲೂ ಬಣ್ಣ-ಬಣ್ಣದ ಎಲ್‍ಇಡಿ ಲೈಟ್‍ಗಳನ್ನು ಅಳವಡಿಸಿರುವು ದರಿಂದ ನೋಡುಗರಿಗೆ ಮುದ ನೀಡಲಿದೆ.

ಚೀನಾ ಹಾಗೂ ದುಬೈನಲ್ಲಿ ಫೇಮಸ್: ಚೀನಾ ಹಾಗೂ ದುಬೈ ಸೇರಿದಂತೆ ವಿಶ್ವದ ಇನ್ನಿತರೆ ದೇಶಗಳಲ್ಲಿ ಲ್ಯಾಂಟರ್ನ್ ಪಾರ್ಕ್ ಜನಮನ್ನಣೆ ಗಳಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ವೀಕ್ಷಿಸುತ್ತಿದ್ದಾರೆ. ಅದೇ ರೀತಿ ಮೈಸೂರಿನ ಡ್ರೀಮ್ ಪೆಟಲ್ಸ್ ಸಂಸ್ಥೆಯು ಲ್ಯಾಂಟನ್ ಪಾರ್ಕ್ ಸಜ್ಜುಗೊಳಿಸಿದೆ. ಪ್ರವೇಶ ಉಚಿತ ವಾಗಿದ್ದು, ಲ್ಯಾಂಟನ್ ಪಾರ್ಕ್‍ನ ಅಂದವನ್ನು ಸವಿಯಬಹುದಾಗಿದೆ.

ವೀಕ್ಷಿಸಿ, ಸೆಲ್ಫಿ: ಉದ್ಘಾಟನೆಯಾದ ಕೆಲವೇ ನಿಮಿಷದಲ್ಲಿ ನೂರಾರು ಮಂದಿ ಸಾರ್ವಜನಿಕರು ಲ್ಯಾಂಟನ್ ಪಾರ್ಕ್‍ಗೆ ದೌಡಾಯಿಸಿ ಅಂದವನ್ನು ಸವಿದರಲ್ಲದೆ, ಚಾಮುಂಡೇಶ್ವರಿಯ ತ್ರಿಡಿ ಆಕೃತಿ. ಅದರ ಸುತ್ತಲೂ ಎಲ್‍ಇಡಿ ಲೈಟ್‍ಗಳಿಂದ ಅಲಂಕರಿಸಿದ್ದ ರೋಜ್ ಗಾರ್ಡ್‍ನ್ ಬಳಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡರು.

ನಂತರ ಸಚಿವ ಸಾ.ರಾ.ಮಹೇಶ್ ಮಾತನಾಡಿ, ಲ್ಯಾಂಟನ್‍ಪಾರ್ಕ್ ನಿರ್ಮಾಣ ದೇಶದಲ್ಲೇ ಮೊದಲ ಪ್ರಯತ್ನ. ಇದನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ದಸರಾದಲ್ಲೇ ಉದ್ಘಾಟಿಸಬೇಕಿತ್ತು. ಆದರೆ, ಕಾಮಗಾರಿ ನಡೆಯುತ್ತಿದ್ದರಿಂದ ತಡವಾಯಿತು. ಶೇ.70ರಷ್ಟು ಕೆಲಸ ಮುಗಿದಿದ್ದು, ಇನ್ನು 30ರಷ್ಟು ಬಾಕಿ ಇದೆ. ಮೈಸೂರಿನ ಜನತೆ ವೀಕ್ಷಣೆಗೆ ಅನುಕೂಲವಾಗಲಿ ಎಂಬ ಉದ್ಧೇಶದಿಂದ ಇಂದು ಉದ್ಘಾಟಿಸಿದ್ದು, ವಸ್ತು ಪ್ರದರ್ಶನ ಮುಗಿಯುವವರೆಗೂ ಇರಲಿದೆ. ಇದರ ಸದುಪಯೋಗಪಡಿಸಿ ಕೊಳ್ಳಬೇಕು ಎಂದು ಹೇಳಿದರು.

ಆಕಾಶ ಅಂಬಾರಿಗೆ ಬೇಡಿಕೆ ಹೆಚ್ಚಿರುವ ಬಗ್ಗೆ ಪ್ರತಿಕ್ರಿಯಿಸಿ, ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೇಂದ್ರ ವಿಮಾನಯಾನ ಸಚಿವ ಸುರೇಶ್‍ಪ್ರಭು ಅವರನ್ನು ಭೇಟಿ ಮಾಡಿ ವಿಷಯ ತಿಳಿಸಿದ್ದು, ವಿಮಾನ ಹಾರಾಟಕ್ಕೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ. ವಿಮಾನ ನಿಲ್ದಾಣ ವಿಸ್ತರಣೆಗೆ ಭೂಮಿ ಒದಗಿಸುವಂತೆ ತಿಳಿಸಿದ್ದಾರೆ. ಈ ಕುರಿತು ಸಿಎಂ, ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ ಎಂದರು. ವಸ್ತುಪ್ರದರ್ಶನ ಪ್ರಾಧಿಕಾರದ ಸಿಇಓ ಶಶಿಕುಮಾರ್, ಮಾಜಿ ಮೇಯರು ಗಳಾದ ಆರ್.ಲಿಂಗಪ್ಪ, ರವಿಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Translate »