ಮುಕ್ಕೋಡ್ಲುವಿನ 80 ಮಂದಿ ರಕ್ಷಣೆ ಸ್ಥಳೀಯ ಯುವಕರ ಸಾಹಸ
ಕೊಡಗು

ಮುಕ್ಕೋಡ್ಲುವಿನ 80 ಮಂದಿ ರಕ್ಷಣೆ ಸ್ಥಳೀಯ ಯುವಕರ ಸಾಹಸ

August 21, 2018

ಸೋಮವಾರಪೇಟೆ: ಕಳೆದ 5 ದಿನಗಳಿಂದ ಹೊರ ಜಗತ್ತಿನ ಸಂಪರ್ಕ ಕಡಿದುಕೊಂಡು ಸಂತ್ರಸ್ತರಾಗಿದ್ದ ಮುಕ್ಕೋಡ್ಲು ಗ್ರಾಮದ ಸುಮಾರು 80 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಮಾದಾಪುರದ ಇಗ್ಗೋಡ್ಲು ಮತ್ತು ಹಮ್ಮಿಯಾಲದ ಹಚ್ಚಿನಾಡು ಮಾರ್ಗ ವಾಗಿ ಮುಕ್ಕೋಡ್ಲು ತಲುಪಿದ ತಲಾ 30 ರಷ್ಟಿದ್ದ ಯುವಕರ ತಂಡ ಗ್ರಾಮದೊಳಗೆ ಸಿಲುಕಿದ್ದ ಜನರನ್ನು ಹರಸಾಹಸಪಟ್ಟು ರಕ್ಷಿಸಿ ದರು. ಜಲಪ್ರಳಯದಿಂದ ಮುಕ್ಕೋಡ್ಲು ಗ್ರಾಮದಲ್ಲಿ ಭಾರೀ ಬೆಟ್ಟಗಳು ಕುಸಿದಿದ್ದು, ರಸ್ತೆಗಳು ಸಂಪೂರ್ಣ ನಾಶವಾಗಿವೆ. ರಸ್ತೆ ಬದಿಯ ಗುಡ್ಡಗಳು ಕುಸಿದು ಭಾರೀ ಮರಗಳು ನೆಲಕ್ಕುರುಳಿದ್ದರೆ, ಕೆಲವೆಡೆ ರಸ್ತೆಗಳೇ ಕೊಚ್ಚಿ ಹೋಗಿವೆ. ಹಚ್ಚಿನಾಡು ಗ್ರಾಮದ ಸುಭಾಶ್ ಸೋಮಯ್ಯ ಎಂಬವರ ಮನೆ ಕಣ್ಮರೆಯಾಗಿದ್ದರೆ, ಕುಶಾಲಪ್ಪ ಅವರ ಮನೆ, ಕಾರು, ದಾಖಲೆಗಳ ಸಹಿತ ಮಣ್ಣುಪಾಲಾಗಿದೆ.

ಮಾದಾಪುರದ ಇಗ್ಗೋಡ್ಲು ಎಸ್ಟೇಟ್ ನಡುವೆ ಯಂತ್ರಗಳ ಸಹಾಯದಿಂದ ಶಾಸಕ ಅಪ್ಪಚ್ಚುರಂಜನ್ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಯುವಕರು ಕಾರ್ಯಾಚರಣೆಗೆ ಇಳಿದರು. ಕೋಟೆಬೆಟ್ಟವನ್ನು ಹತ್ತಿ, ಇಳಿದು ಯುವಕರು ಮುಕ್ಕೋಡ್ಲು ಮುಟ್ಟಿದರು. ಅಲ್ಲಿನ ರಾಜೇಶ್ ಎಂಬುವರ ಕುಟುಂಬದ ಇಬ್ಬರು ಮಕ್ಕಳು, ಇಬ್ಬರು ವೃದ್ಧರು ಸೇರಿ ದಂತೆ 6 ಮಂದಿಯನ್ನು ರಕ್ಷಿಸಲಾಯಿತು. ಇದರೊಂದಿಗೆ ಸಂಪರ್ಕ ಕಡಿದುಕೊಂಡಿದ್ದ 40ಕ್ಕೂ ಅಧಿಕ ಮಂದಿಯನ್ನು ಮಾದಾಪುರ ಮಾರ್ಗವಾಗಿ ಕರೆದುಕೊಂಡು ಬರಲಾಯಿತು.

ಇತ್ತ ಸೂರ್ಲಬ್ಬಿ, ಹಮ್ಮಿಯಾಲ ಮಾರ್ಗವಾಗಿ ಹಚ್ಚಿನಾಡು ತಲುಪಿದ ಯುವಕರ ತಂಡ, ಮುಕ್ಕೋಡ್ಲುವಿನಲ್ಲಿ ಯಾರ ಸಂಪರ್ಕಕ್ಕೂ ಸಿಗದೇ ಉಳಿದುಕೊಂಡಿದ್ದ ಪೊನ್ನಚೆಟ್ಟಿರ ಮಾದಪ್ಪ-ಬೋಜಮ್ಮ ಅವರ ಮನೆಯವರನ್ನು ರಕ್ಷಿಸಿದರು. 5 ದಿನಗಳಿಂದ ಸರಿಯಾದ ಆಹಾರವಿಲ್ಲದೇ ಅತಂತ್ರ ಸ್ಥಿತಿಯಲ್ಲಿದ್ದ ಕುಟುಂಬವನ್ನು ಸೋಮವಾರಪೇಟೆಗೆ ಕರೆತರಲಾಯಿತು.
ಮನೆಯೊಳಗೆ ಇದ್ದ ವಿಕಲಚೇತನ ರತೀಶ್ ಅವರನ್ನು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಮಧು, ಕಾರ್ಯಾಚರಣೆಗೆ ಇಳಿದಿದ್ದ ತಂಡದ ಗಣಪತಿ, ಮಹೇಶ್, ಸಂಪತ್ ಶಂಭು, ಕೊಮಾರಿ ಸತೀಶ್, ಚಂದನ್, ನಿತಿನ್, ಅಂಕಿತ್, ಚಂದ್ರ ಸೇರಿದಂತೆ ಇತರರು ಬಡಿಗೆ ಕಟ್ಟಿಕೊಂಡು ಸುಮಾರು 6 ಕಿ.ಮೀ. ಹೊತ್ತು ಸಾಗಿದರು. ರಸ್ತೆಯ ಮೇಲೆ ಕುಸಿದಿದ್ದ ಬರೆ, ಮಂಡಿಯವರೆಗೆ ಹೂತುಕೊಳ್ಳುವ ಕೆಸರಿನ ನಡುವೆ ಭಾರೀ ಸಾಹಸಪಟ್ಟು ಹಚ್ಚಿನಾಡುವರೆಗೆ ಕರೆತರಲಾಯಿತು.
ಹೋಂಸ್ಟೇ ಒಂದರಲ್ಲಿ ತಂಗಿದ್ದ ಹಚ್ಚಿ ನಾಡು, ಕಬ್ಬಣಿ, ಮುಕ್ಕೋಡ್ಲು ಗ್ರಾಮದ ಸುಮಾರು 43 ಮಂದಿಯನ್ನು ಸೂರ್ಲಬ್ಬಿ ಮಾರ್ಗವಾಗಿ ಸುರಕ್ಷಿತವಾಗಿ ಸೋಮವಾರ ಪೇಟೆಗೆ ಕರೆತರಲಾಯಿತು.

ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಜಿಪಂ ಮಾಜಿ ಅಧ್ಯಕ್ಷ ರವಿಕುಶಾಲಪ್ಪ, ಗಾಳಿಬೀಡು ಗ್ರಾ.ಪಂ. ಅಧ್ಯಕ್ಷ ಸುಭಾಶ್ ಅವರುಗಳು ಹಚ್ಚಿನಾಡುವರೆಗೆ ತೆರಳಿ ಕಾರ್ಯಾಚರಣೆಗೆ ಸಹಕರಿಸಿದರು.

ಮುಕ್ಕೋಡ್ಲು ಗ್ರಾಮದಲ್ಲಿ ಲಕ್ಷಾಂತರ ಹಾನಿ ಸಂಭವಿಸಿದೆ. ನಾಟಿ ಮಾಡಿದ್ದ ಗದ್ದೆಗಳು ಮುಚ್ಚಿಹೋಗಿದ್ದು, ಎರಡೂ ಬದಿಯ ಬೆಟ್ಟಗುಡ್ಡ ಕುಸಿಯುತ್ತಿದೆ. ಹೊಳೆ ಯಂತೂ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮನೆಗಳು ಉಳಿಯುವುದೇ ಸಂಶಯ ಎಂಬಂತಾಗಿದೆ. ರಸ್ತೆಗಳು ಮೊದಲಿನ ಸ್ಥಿತಿಗೆ ಬರಲಾರದಷ್ಟು ಹದಗೆಟ್ಟಿದೆ. ಕೆಲವೆಡೆ ರಸ್ತೆಗಳೇ ಕೊಚ್ಚಿಕೊಂಡು ಹೊಳೆಪಾಲಾ ಗಿದ್ದು, ಹಿಂದಿನ ಸ್ಥಿತಿಗೆ ಬರಲು ಅನೇಕ ತಿಂಗಳು ಬೇಕಾಗಬಹುದು ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸೋಮವಾರಪೇಟೆ ಕಳೆದ 5 ದಿನಗಳಿಂದ ಹೊರ ಜಗತ್ತಿನ ಸಂಪರ್ಕ ಕಡಿದು ಕೊಂಡು ಸಂತ್ರಸ್ತರಾಗಿದ್ದ ಮುಕ್ಕೋಡ್ಲು ಗ್ರಾಮದ ಸುಮಾರು 80 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

Translate »